ADVERTISEMENT

ಕೆ.ಸಿ ವ್ಯಾಲಿ: ಆಗಸ್ಟ್‌ಗೆ 440 ಎಂಎಲ್‌ಡಿ ನೀರು

ಸಭೆಯಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ತುಷಾರ್ ಗಿರಿನಾಥ್ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 14:51 IST
Last Updated 24 ಏಪ್ರಿಲ್ 2020, 14:51 IST
ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಕೆ.ಸಿ ವ್ಯಾಲಿ ಯೋಜನೆ ಸಂಬಂಧ ಬೆಂಗಳೂರಿನಲ್ಲಿ ಗುರುವಾರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿದರು.
ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಕೆ.ಸಿ ವ್ಯಾಲಿ ಯೋಜನೆ ಸಂಬಂಧ ಬೆಂಗಳೂರಿನಲ್ಲಿ ಗುರುವಾರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿದರು.   

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಗೆ ಸದ್ಯ 260 ಎಂಎಲ್‌ಡಿ ನೀರು ಹರಿಯುತ್ತಿದ್ದು, ಆಗಸ್ಟ್ ವೇಳೆಗೆ 440 ಎಂಎಲ್‌ಡಿ ನೀರು ಹರಿಸಲಾಗುವುದು’ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಅಧ್ಯಕ್ಷ ತುಷಾರ್ ಗಿರಿನಾಥ್ ಭರವಸೆ ನೀಡಿದರು.

ಕೆ.ಸಿ ವ್ಯಾಲಿ ಯೋಜನೆ ಕುರಿತು ಬೆಂಗಳೂರಿನಲ್ಲಿ ಗುರುವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿ, ‘ಸದ್ಯ ಕೋವಿಡ್‌–19 ಸಮಸ್ಯೆ ಇರುವುದರಿಂದ ಹೆಚ್ಚುವರಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಮುಂದೆ ಹಂತ ಹಂತವಾಗಿ ನೀರಿನ ಹರಿವು ಹೆಚ್ಚಿಸುತ್ತೇವೆ’ ಎಂದು ತಿಳಿಸಿದರು.

‘ಕೋಲಾರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಅಂತರ್ಜಲ ವೃದ್ಧಿ ಮತ್ತು ಕೆರೆಗಳನ್ನು ತುಂಬಿಸುವ ಉದ್ದೇಶಕ್ಕೆ ಕೆ.ಸಿ ವ್ಯಾಲಿ ಯೋಜನೆ ಜಾರಿಗೊಳಿಸಲಾಯಿತು. ಆದರೆ, ಕೆಲ ದಿನಗಳಿಂದ ನೀರಿನ ಹರಿವು ಕುಸಿದಿದೆ. ಕಾಲುವೆಗಳಲ್ಲಿ ನೀರು ಹರಿಯುತ್ತಿಲ್ಲ. ನೀರು ಕದಿಯುವವರ ಸಂಖ್ಯೆ ಹೆಚ್ಚಿದ್ದು, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಒತ್ತಾಯಿಸಿದರು.

ADVERTISEMENT

‘ಯೋಜನೆಯಿಂದ ಜಿಲ್ಲೆಗೆ 440 ಎಂಎಲ್‌ಡಿ ನೀರು ಬರಬೇಕು. ಆದರೆ, 260 ಎಂಎಲ್‌ಡಿ ನೀರು ಬರುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಕೆಲ ತಿಂಗಳುಗಳಿಂದ ನೀರೇ ಬರುತ್ತಿಲ್ಲ. ಕಾಲುವೆಗಳಿಗೆ ಪಂಪ್‌ ಮತ್ತು ಪೈಪ್‌ ಅಳವಡಿಸಿ ನೀರು ಕದಿಯುವ ರೈತರು ಹೆಚ್ಚಾಗಿದ್ದಾರೆ. ನೀರು ಕಳವು ತಪ್ಪಿಸಿ ಮುಂದಿನ ಕೆರೆಗಳಿಗೆ ನೀರು ಹರಿಯುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಕೆ.ಸಿ ವ್ಯಾಲಿ ಯೋಜನೆ ಕಾಲುವೆ ಅಕ್ಕಪಕ್ಕ 200 ಮೀಟರ್ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಸದಂತೆ ಆದೇಶ ಹೊರಡಿಸಿ ನೀರು ಕದಿಯುವವರಿಗೆ ಕಡಿವಾಣ ಹಾಕಬೇಕು’ ಎಂದು ಮನವಿ ಮಾಡಿದರು.

ನೀರಿನ ಸಮಸ್ಯೆಯಿದೆ: ‘ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ನೀರಿನ ಸಮಸ್ಯೆಯಿದೆ. ಕೆ.ಸಿ ವ್ಯಾಲಿ ನೀರಿನಿಂದ ಕೆರೆಗಳನ್ನು ತುಂಬಿಸಲು ಸಾಧ್ಯವಾಗುತ್ತಿಲ್ಲ. ಈಗ ಬೇಸಿಗೆ ಎದುರಾಗಿದ್ದು, ಜಿಲ್ಲೆಗೆ ಕೂಡಲೇ 440 ಎಂಎಲ್‌ಡಿ ನೀರು ಹರಿಸಬೇಕು’ ಎಂದು ಶಾಸಕ ಕೃಷ್ಣಬೈರೇಗೌಡ ಆಗ್ರಹಿಸಿದರು.

ಸಭೆಯಲ್ಲಿ ಹಾಜರಿದ್ದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ‘ಅವಿಭಜಿತ ಕೋಲಾರ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಅಂತರ್ಜಲ ನೆಚ್ಚಿಕೊಂಡಿರುವ ರೈತಾಪಿ ವರ್ಗಕ್ಕೆ ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಕೊಡಬೇಕಿದೆ. ಸದ್ಯ ಕೊರೊನಾ ಸೋಂಕಿನ ಸಮಸ್ಯೆಯಿದೆ. ಈ ಸಮಸ್ಯೆ ಬಗೆಹರಿದ ನಂತರ ಹಂತ ಹಂತವಾಗಿ ನೀರಿನ ಹರಿವು ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.