ADVERTISEMENT

ಕೆಸಿ ವ್ಯಾಲಿ ನೀರು ಕೃಷಿಗೆ ಮಾರಕವಲ್ಲ: ಶಾಸಕ ಎಸ್.ಎನ್.ನಾರಾಯಣಸ್ವಾಮಿ

ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:43 IST
Last Updated 22 ಜನವರಿ 2026, 6:43 IST
ಬಂಗಾರಪೇಟೆ ನಗರದ ಎಪಿಎಂಸಿ ಆವರಣದಲ್ಲಿ ನಿರ್ಮಾಣವಾಗಿದ್ದ ರೈತ ಸಂಪರ್ಕ ಕೇಂದ್ರವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಸಿದರು. ಈ ವೇಳೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಇತರರು ಇದ್ದರು
ಬಂಗಾರಪೇಟೆ ನಗರದ ಎಪಿಎಂಸಿ ಆವರಣದಲ್ಲಿ ನಿರ್ಮಾಣವಾಗಿದ್ದ ರೈತ ಸಂಪರ್ಕ ಕೇಂದ್ರವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಸಿದರು. ಈ ವೇಳೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಇತರರು ಇದ್ದರು   

ಬಂಗಾರಪೇಟೆ: ಕೆಸಿ ವ್ಯಾಲಿ ನೀರು ಹರಿದ ನಂತರ ಬೆಳೆಗಳು ಹಾಳಾಗುತ್ತಿವೆ ಎಂಬ ವಿರೋಧ ಪಕ್ಷಗಳ ಟೀಕೆಗಳಲ್ಲಿ ಸತ್ಯಾಂಶವಿಲ್ಲ. ಬೆಳೆಗಳು ಗುಣಮಟ್ಟ ಕಳೆದುಕೊಳ್ಳುತ್ತಿರುವುದು ನೀರಿನಿಂದಲ್ಲ, ಬದಲಾಗಿ ರೈತರು ಒಂದೇ ಬೆಳೆಯನ್ನು ಪದೇ ಪದೇ ಬೆಳೆಯುತ್ತಿರುವುದರಿಂದ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

ನಗರದ ಎಪಿಎಂಸಿ ಪ್ರಾಂಗಣದಲ್ಲಿ ಬುಧವಾರ ಕಸಬಾ ರೈತ ಸಂಪರ್ಕ ಕೇಂದ್ರದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕೆಸಿ ವ್ಯಾಲಿ ನೀರನ್ನು ಈಗಾಗಲೇ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಲಾಗಿದೆ. ಆ ವರದಿಯಲ್ಲಿ ನೀರು ಕೃಷಿಗೆ ಯಾವುದೇ ರೀತಿಯಲ್ಲಿ ಮಾರಕವಾಗಿಲ್ಲ ಎಂಬುದು ಸಾಬೀತಾಗಿದೆ. ಮಣ್ಣಿನ ಪರೀಕ್ಷೆ ಮಾಡಿಸದೆ ಇರುವುದು ಮತ್ತು ವೈಜ್ಞಾನಿಕವಾಗಿ ಬೆಳೆಗಳನ್ನು ಬೆಳೆಯದ ಕಾರಣ ಬೆಳೆಗಳು ಕೊಳೆಯುತ್ತಿವೆ. ಜಮೀನಿನಲ್ಲಿ ಸತತವಾಗಿ ಒಂದೇ ಬೆಳೆ ಬೆಳೆಯುವುದು ಮಣ್ಣಿನ ಸಾರವನ್ನು ಕುಂದಿಸುತ್ತದೆ. ಆದ್ದರಿಂದ ರೈತರು ಕೃಷಿ ಅಧಿಕಾರಿಗಳ ಸಲಹೆ ಪಡೆದು ಕಾಲಕ್ಕೆ ತಕ್ಕಂತೆ ಬೆಳೆ ಬದಲಾವಣೆ ಮಾಡಬೇಕೆಂದು ಕಿವಿಮಾತು ಹೇಳಿದರು.

ಇಡೀ ದೇಶದಲ್ಲೇ ಕೋಲಾರ ಜಿಲ್ಲೆಯ ಮಣ್ಣು ಹೆಚ್ಚು ಫಲವತ್ತತೆಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಕೃಷಿ ಉತ್ಪನ್ನಗಳಿಗೆ ಭಾರಿ ಬೇಡಿಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ರೈತರ ಹಿತರಕ್ಷಣೆಗೆ ಸದಾ ಸಿದ್ಧವಿದೆ. ಈ ಹಿಂದೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ರೈತರು ಗೊಬ್ಬರಕ್ಕಾಗಿ ಸಾಲಿನಲ್ಲಿ ನಿಂತು ಗೋಲಿಬಾರ್‌ಗೆ ತುತ್ತಾಗಿದ್ದರು. ಆದರೆ, ಸಿದ್ದರಾಮಯ್ಯನವರ ಆಡಳಿತದಲ್ಲಿ ರೈತರಿಗೆ ಯಾವುದೇ ಗೊಂದಲವಿಲ್ಲದೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.

ADVERTISEMENT

ನಗರದಲ್ಲಿ ಬಹುತೇಕ ಎಲ್ಲಾ ಇಲಾಖೆಗಳಿಗೆ ಸ್ವಂತ ಕಟ್ಟಡವಿದೆ. ಆದರೆ, ಕೃಷಿ ಮತ್ತು ರೇಷ್ಮೆ ಇಲಾಖೆಗಳಿಗೆ ಇಲ್ಲದ ಕಾರಣ, ಶೀಘ್ರ ಸುಸಜ್ಜಿತ ಕಟ್ಟಡ ನಿರ್ಮಿಸಿ ಕೊಡಲಾಗುವುದು. ಜೊತೆಗೆ ಕೃಷಿ ಇಲಾಖೆಯ ಗೋದಾಮು ನಿರ್ಮಾಣಕ್ಕಾಗಿ ದೇಶಿಹಳ್ಳಿ ಗ್ರಾಮದ ಬಳಿ 15 ಗುಂಟೆ ಜಮೀನು ನೀಡಲಾಗುವುದು ಎಂದು ಘೋಷಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೃಷಿಕ ಸಮಾಜದ ಅಧ್ಯಕ್ಷ ರಾಜಾರೆಡ್ಡಿ, ಉಪಾಧ್ಯಕ್ಷ ಎಸ್.ನಾರಾಯಣಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಖಾವೀದ ನಸಿಂಕಾನಂ, ಉಪ ನಿರ್ದೇಶಕಿ ಎಂ.ಎನ್.ಮಂಜುಳ, ಸಹಾಯಕಿ ನಿರ್ದೇಶಕಿ ಪ್ರತಿಭಾ, ಪುರಸಭೆ ಮಾಜಿ ಅಧ್ಯಕ್ಷ ಗೋವಿಂದ, ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಶಿವಕುಮಾರಿ, ಸಹಾಯಕ ಕೃಷಿ ಅಧಿಕಾರಿ ವಿಜಯ್ ಕುಮಾರ್, ನಾರಾಯಣರೆಡ್ಡಿ ಭಾಗವಹಿಸಿದ್ದರು.

ಅಭಿವೃದ್ಧಿಯೊಂದೇ ನನ್ನ ಗುರಿ. ಟೀಕೆ ಮಾಡುವವರಿಗೆ ನಾನು ಕೆಲಸದ ಮೂಲಕವೇ ಉತ್ತರ ನೀಡುತ್ತೇನೆ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.
ಎಸ್.ಎನ್.ನಾರಾಯಣಸ್ವಾಮಿ ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.