ADVERTISEMENT

ಶ್ರೀನಿವಾಸಪುರ: ಶುದ್ಧೀಕರಿಸದಿದ್ದರೆ ನೀರು ಬೇಡ‌: ಜಿ.ಕೆ.ವೆಂಕಟಶಿವಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:07 IST
Last Updated 29 ಆಗಸ್ಟ್ 2025, 5:07 IST
ಶ್ರೀನಿವಾಸಪುರ ತಾಲ್ಲೂಕಿನ ಜೆ.ತಿಮ್ಮಸಂದ್ರ ಗ್ರಾಮದ ಗ್ರಾ.ಪಂ ಕಚೇರಿಯ ಸಭಾಂಗಣವನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗೂ ಸಂಸದ ಎಂ.ಮಲ್ಲೇಶ್‌ ಬಾಬು ಉದ್ಘಾಟಿಸಿದರು
ಶ್ರೀನಿವಾಸಪುರ ತಾಲ್ಲೂಕಿನ ಜೆ.ತಿಮ್ಮಸಂದ್ರ ಗ್ರಾಮದ ಗ್ರಾ.ಪಂ ಕಚೇರಿಯ ಸಭಾಂಗಣವನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹಾಗೂ ಸಂಸದ ಎಂ.ಮಲ್ಲೇಶ್‌ ಬಾಬು ಉದ್ಘಾಟಿಸಿದರು    

ಶ್ರೀನಿವಾಸಪುರ: ‘ಕೆ.ಸಿ.ವ್ಯಾಲಿ ನೀರು ಕುಡಿಯಲು, ಬೇಸಾಯ ಮಾಡಲಿಕ್ಕೆ ಯೋಗ್ಯವಲ್ಲ. ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡಿದರೆ ಮಾತ್ರ ನೀರು ಕೊಡಿ. ಇಲ್ಲವಾದರೆ ನಮ್ಮ ಕೆರೆಗಳಿಗೆ ನೀರು ಹರಿಸಬೇಡಿ ಎಂಬುದಾಗಿ ಸರ್ಕಾರವನ್ನು ಒತ್ತಾಯಿಸಿದ್ದೇನೆ’ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.

ತಾಲ್ಲೂಕಿನ ಜೆ.ತಿಮ್ಮಸಂದ್ರ ಗ್ರಾಮದ ಸೋಮವಾರ ಗ್ರಾ.ಪಂ ಕಚೇರಿಯ ಸಭಾಂಗಣದ ಉದ್ಘಾಟಿಸಿ ಅವರು ಮಾತನಾಡಿದರು.

ಎತ್ತಿನಹೊಳೆ ನೀರನ್ನು 2027 ಕ್ಕೆ ಹರಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಶ್ವಾಸನೆ ನೀಡಿದ್ದಾರೆ. ಅಲ್ಲದೆ ಮುಂದಿನ ತಿಂಗಳು 67 ಕಿ.ಮೀ ಪೈಪ್‌ ಲೈನ್‍ಗೆ ಭೂಮಿ ಪೂಜೆ ಮಾಡುವುದಾಗಿ ತಿಳಿಸಿದ್ದಾರೆ. ಕ್ಷೇತ್ರದಲ್ಲಿ 7 ಹೋಬಳಿಗಳಿದ್ದು, 400 ಹಳ್ಳಿಗಳು ಇವೆ. ಕ್ಷೇತ್ರದ ಎಲ್ಲಾ ಹಳ್ಳಿಗಳನ್ನು ಅಭಿವೃದ್ಧಿ ಪಡಿಸುವ ಕನಸನ್ನು ಹೊಂದಿದ್ದೇನೆ. ರಾಜ್ಯ ಸರ್ಕಾರ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ನನ್ನ ಕ್ಷೇತ್ರದಲ್ಲಿ ಬಡವರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಸ್ವಂತ ಮನೆಗಳು ಇಲ್ಲದೆ ಇರುವವರು ಇದ್ದಾರೆ. ಸರ್ಕಾರ ವಸತಿ ಯೋಜನೆಗೆ ಮೊದಲ ಆದ್ಯತೆ ನೀಡಬೇಕು. ಅದಕ್ಕೆ ಅನುದಾನವನ್ನು ಮೀಸಲಿಡಬೇಕು. ಗ್ರಾಮೀಣ ಭಾಗದಲ್ಲಿ ವಸತಿ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಅನುದಾನ ಪೂರ್ತಿ ಬಿಡುಗಡೆಯಾಗಿಲ್ಲ. ಅಧಿಕಾರಿಗಳೊಂದಿಗೆ ಸಭೆ ನಡೆಸಿದಾಗ ಅನುದಾನ ಬಿಡುಗಡೆಯಾಗದ ವಿಚಾರವನ್ನು ಕೇಳಿ ಬೇಸರವಾಗಿದೆ’ ಎಂದರು.

10 ವರ್ಷಗಳಿಂದ ಎಸ್‍ಸಿ– ಎಸ್‍ಟಿ, ಹಿಂದುಳಿದ ವರ್ಗಗಳಿಗೆ ಉಚಿತ ಕೊಳವೆ ಬಾವಿ ಕೊಟ್ಟಿಲ್ಲ. ಈ ಬಾರಿ ನಾನು 400ಕ್ಕೂ ಹೆಚ್ಚು ಕೊಳವೆ ಬಾವಿ ಕೊಡಿಸಿದ್ದೇನೆ ಎಂದು ವಿವರಿಸಿದರು.

ಸಂಸದ ಎಂ.ಮಲ್ಲೇಶ್‍ ಬಾಬು ಮಾತನಾಡಿ, ‘ಕೇಂದ್ರ ಸರ್ಕಾರ ಗ್ರಾಮೀಣ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ತಂದಿದೆ. ಆದರೆ ರಾಜ್ಯ ಸರ್ಕಾರವು, ಕೇಂದ್ರ ಸರ್ಕಾರಕ್ಕೆ ಎಲ್ಲಿ ಒಳ್ಳೆಯ ಹೆಸರು ಬರುತ್ತದೋ ಎಂಬುದನ್ನ ಅರಿತು ಕೇಂದ್ರ ಸರ್ಕಾರದ ಯೋಜನೆಗಳಿಗೆ ಸ್ಪಂದನೆ ನೀಡುತ್ತಿಲ್ಲ. ನಾನು ಕ್ಷೇತ್ರ ಆಭಿವೃದ್ಧಿಗಾಗಿ ಅನುದಾನದ ಬಗ್ಗೆ ಚರ್ಚಿಸಿದಾಗ ರಾಜ್ಯ ಸರ್ಕಾರದಿಂದ ಅನುಮೋದನೆ ತರುವಂತೆ ತಿಳಿಸುತ್ತಾರೆ . ಪ್ರತಿಯೊಬ್ಬ ಸಂಸದರು ಸಹ ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ’ ಎಂದರು.

ಇದೇ ಸಂದರ್ಭದಲ್ಲಿ 12 ಅಂಗವಿಲಕರಿಗೆ ತ್ರಿಚಕ್ರಗಳ ವಾಹನಗಳನ್ನು ವಿತರಿಸಿದರು.

ಜೆಡಿಎಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯತ್ರಿಮುತ್ತಪ್ಪ, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಇಒ ಸರ್ವೇಶ್, ಪಂಚಾಯತ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆ.ಸುನಿತಾ, ಗ್ರಾ.ಪಂ ಅಧ್ಯಕ್ಷ ಕೆ.ಎನ್.ಶಂಕರರೆಡ್ಡಿ, ಪಿಡಿಒ ಎಸ್.ವಿನೋದ, ಕಾರ್ಯದರ್ಶಿ ಎನ್.ನಾರಾಯಣಸ್ವಾಮಿ, ಉಪಾಧ್ಯಕ್ಷೆ ಭಾರತಮ್ಮ, ಸದಸ್ಯರಾದ ವಿ.ನಾಗೇಶ್‍ರೆಡ್ಡಿ, ಕೃಷ್ಣಮ್ಮ, ಮಂಜುಳ, ಗಂಗರಾಜು, ಶಿಲ್ಪ, ಕೆ.ನಾರಾಯಣಸ್ವಾಮಿ, ರೋಜ, ಯಶೋದಮ್ಮ, ಎಂ.ವೆಂಕಟಸ್ವಾಮಿ, ಕಠಾರ ಮುದ್ದಲಹಳ್ಳಿ ರತ್ನಮ್ಮ, ವೆಂಕಟಲಕ್ಷ್ಮಮ್ಮ, ಚೌಡರೆಡ್ಡಿ.ಎಂ, ಅಶ್ವಿನಿ, ಆಲಂಗಿರಿ ರತ್ನಮ್ಮ, ಮುಖಂಡರಾದ ಬಿ.ವಿ.ಶಿವಾರೆಡ್ಡಿ, ಬಂಡಪಲ್ಲಿ ಕೃಷ್ಣಾರೆಡ್ಡಿ, ತೂಪಲ್ಲಿ ಮಧು ಇದ್ದರು.

ಮುಂದಿನ ತಿಂಗಳು 67 ಕಿ.ಮೀ ಪೈಪ್‌ ಲೈನ್‍ಗೆ ಭೂಮಿ ಪೂಜೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ: ವೆಂಕಟಶಿವಾರೆಡ್ಡಿ ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ: ಸಂಸದ

ಗ್ರಾಮೀಣ ಭಾಗದಲ್ಲಿ ಜೆಜೆಎಂ ಕಾಮಗಾರಿಗಳು ಅರ್ಧಂಬದ್ಧ ಆಗಿವೆ. ಗುತ್ತಿಗೆದಾರರನ್ನು ವಿಚಾರಿಸಿದಾಗ ಅನುದಾನ ಕೊರತೆಯ ಬಗ್ಗೆ ಹೇಳುತ್ತಾರೆ
ಜಿ.ಕೆ.ವೆಂಕಟಶಿವಾರೆಡ್ಡಿ ಶಾಸಕ
ಕೃಷ್ಣಾ ನದಿ ನೀರು ತರಲು ಪ್ರಯತ್ನ
‘ಕೃಷ್ಣಾ ನದಿಯ ನೀರನ್ನು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ತರುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಬಂಧಪಟ್ಟ ಕೇಂದ್ರ ಮಂತ್ರಿ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜೊತೆಗೆ ನಾನು ಹಾಗೂ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್‌ ಮಾಡಿದ್ದೇವೆ. ಸಾಧ್ಯವಾದಷ್ಟು ಬೇಗ ಅವಳಿ ಜಿಲ್ಲೆಗಳಿಗೆ ನೀರು ತರಲಾಗುವುದು’ ಎಂದು ಸಂಸದ ಎಂ.ಮಲ್ಲೇಶ್‌ ಬಾಬು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.