ADVERTISEMENT

ಕೆಜಿಎಫ್‌ | ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 7:02 IST
Last Updated 11 ಜನವರಿ 2026, 7:02 IST
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಕೆಜಿಎಫ್‌ನ ರಾಬರ್ಟ್‌ಸನ್‌ ಪೇಟೆಯಲ್ಲಿ ಶನಿವಾರ ಹಿಂದೂ ನಾಗರಿಕ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಕೆಜಿಎಫ್‌ನ ರಾಬರ್ಟ್‌ಸನ್‌ ಪೇಟೆಯಲ್ಲಿ ಶನಿವಾರ ಹಿಂದೂ ನಾಗರಿಕ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಕೆಜಿಎಫ್‌: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಆ ದೇಶದ ಮೇಲೆ ಭಾರತವು ರಾಜತಾಂತ್ರಿಕ ಒತ್ತಡ ಹೇರಬೇಕು ಎಂದು ಒತ್ತಾಯಿಸಿ ಹಿಂದೂ ನಾಗರಿಕ ವೇದಿಕೆ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

ರಾಬರ್ಟ್‌ಸನ್‌ಪೇಟೆಯ ಪ್ರಸನ್ನ ಲಕ್ಷ್ಮಿವೆಂಕಟರಮಣ ದೇವಾಲಯದಲ್ಲಿ ಜಮಾಯಿಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಗೀತಾ ರಸ್ತೆ ಮತ್ತು ಪ್ರಿಚರ್ಡ್‌ ರಸ್ತೆ ಮೂಲಕ ಹಾದು ಮತ್ತೆ ದೇವಾಲಯ ಆವರಣದಲ್ಲಿ ಸೇರಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಪಿ.ಎಂ.ನವೀನ್‌ ಅವರಿಗೆ ಮನವಿ ಸಲ್ಲಿಸಿದರು.

ವಿಶ್ವ ಹಿಂದೂ ಪರಿಷತ್ ಮುಖಂಡ ಶ್ರೀಧರರಾವ್‌ ಶಿಂಧೆ ಮಾತನಾಡಿ, ಬಾಂಗ್ಲಾದೇಶದಲ್ಲಿ ಒಂದೂವರೆ ತಿಂಗಳಿಂದ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಿದೆ. ಈವರೆಗೆ ಆರು ಹಿಂದೂಗಳ ಹತ್ಯೆಯಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರವಾಗಿದೆ. ಸುಮಾರು 600 ಮನೆಗಳಿಗೆ ಬೆಂಕಿ ಇಡಲಾಗಿದೆ. ಕ್ರಿಸ್‌ಮಸ್‌ ದಿನದಂದು ಚರ್ಚ್‌ಗೆ ಬೆಂಕಿ ಹಚ್ಚಲಾಗಿದೆ. ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ. ಅವರಿಗೆ ರಕ್ಷಣೆ ಇದೆ. ಆದರೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳು, ಕ್ರಿಶ್ಚಿಯನ್ನರು ಸೇರಿದಂತೆ ಇತರ ಅಲ್ಪಸಂಖ್ಯಾತರ ಮೇಲೆ ಪ್ರತಿನಿತ್ಯ ದಾಳಿ ಮತ್ತು ಹಲ್ಲೆಗಳು ನಡೆಯುತ್ತಿವೆ. ಈ ರೀತಿಯ ದೌರ್ಜನ್ಯವನ್ನು ಒಟ್ಟಾಗಿ ಖಂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ADVERTISEMENT

ವಕೀಲರ ಸಂಘದ ಅಧ್ಯಕ್ಷ ಎಸ್‌.ಎನ್‌. ರಾಜಗೋಪಾಲಗೌಡ ಮಾತನಾಡಿ, ಬಾಂಗ್ಲಾದೇಶದಲ್ಲಿ ಆಗುತ್ತಿರುವ ಅನ್ಯಾಯ ಮತ್ತು ಅಕ್ರಮಗಳನ್ನು ನಿಲ್ಲಿಸಲು ಭಾರತ ತೀವ್ರ ಸ್ವರೂಪದ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಅಲ್ಪಸಂಖ್ಯಾತರ ರಕ್ಷಣೆಗೆ ಬಾಂಗ್ಲಾದೇಶ ಬದ್ಧವಾಗಬೇಕು. ಹಿಂದೂಗಳಿಗೆ ರಕ್ಷಣೆ ಕೊಡಬೇಕು. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಡಾ.ಮಂಜುನಾಥ್‌ ಒತ್ತಾಯಿಸಿದರು.

ಮಾಜಿ ಶಾಸಕ ವೈ.ಸಂಪಂಗಿ ಬಾಂಗ್ಲಾದೇಶದ ವಿದ್ಯಾಮಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಎಸ್‌.ಮಂಜುನಾಥ್‌, ಎನ್‌.ನಾಗರಾಜನ್‌, ವಿ.ಅರ್‌.ಪ್ರಸಾದ್‌, ಎನ್‌.ಮಂಜುನಾಥ ದೀಕ್ಷಿತ್‌, ಗುರು ದೀಕ್ಷಿತ್‌, ದತ್ತಾತ್ರೇಯ ರಾಮಚಂದ್ರ, ಅಭಿಲಾಷ್‌ ಕಾರ್ತಿಕ್‌, ಎಸ್‌.ಪ್ರವೀಣ್‌, ಜಗದೇಶ್ವರ ರಾವ್‌, ರಾಧಾಕೃಷ್ಣ,ಪಾಂಡ್ಯನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.