ಕೆಜಿಎಫ್: ರಾಬರ್ಟ್‌ಸನ್‌ಪೇಟೆ ನಗರಸಭೆ ಬಸ್ ನಿಲ್ದಾಣವನ್ನು ಅನಧಿಕೃತ ವಾಹನಗಳಿಂದ ಮುಕ್ತ ಮಾಡುವ ನಿಟ್ಟಿನಲ್ಲಿ ನಗರಸಭೆ ಮತ್ತು ಪೊಲೀಸ್ ಇಲಾಖೆಯು ಕಠಿಣ ಕ್ರಮ ಕೈಗೊಂಡಿದೆ. ಆದರೆ, ಈ ಕ್ರಮದಿಂದ ತಮ್ಮ ವ್ಯಾಪಾರ ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ ಎಂದು ಬಸ್ ನಿಲ್ದಾಣದಲ್ಲಿನ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ಕಾನೂನು ಅರಿವು ಶಿಬಿರದಲ್ಲಿ ನ್ಯಾಯಾಧೀಶ ವಿನೋದ್ ಕುಮಾರ್ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಮದ್ಯದ ಅಂಗಡಿ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಂಡಿದ್ದ ನಗರಸಭೆ ಮತ್ತು ಪೊಲೀಸ್ ಇಲಾಖೆ, ಗುರುವಾರದಿಂದಲೇ ಬಸ್ ನಿಲ್ದಾಣದೊಳಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್‌ಗಳನ್ನು ಹೊರತುಪಡಿಸಿ, ಇನ್ನಿತರ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಜೊತೆಗೆ ಮದ್ಯಸೇವನೆ ಮಾಡಿ, ಬಸ್ ನಿಲ್ದಾಣದ ಬೆಂಚುಗಳಲ್ಲಿ ಮಲಗುತ್ತಿದ್ದವರನ್ನು ನಿಲ್ದಾಣದಿಂದ ಹೊರಹಾಕಲಾಗಿದೆ.
‘ನಗರಸಭೆ ಮತ್ತು ಪೊಲೀಸ್ ಇಲಾಖೆ ಕೈಗೊಂಡ ಈ ಕ್ರಮಗಳಿಂದಾಗಿ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮಾಲೀಕರ ವಾಹನಗಳ ಪ್ರವೇಶಕ್ಕೂ ನಿರ್ಬಂಧಿಸಲಾಯಿತು. ಜೊತೆಗೆ ಖಾಸಗಿ ವಾಹನಗಳನ್ನು ಬಸ್ ನಿಲ್ದಾಣ ಪ್ರವೇಶಕ್ಕೆ ನಿರಾಕರಿಸಲಾಗಿದೆ. ಇದರಿಂದಾಗಿ ಬಸ್ ನಿಲ್ದಾಣದಲ್ಲಿರುವ ಹೋಟೆಲ್, ಚಹಾ ಅಂಗಡಿ, ಹಣ್ಣಿನ ಅಂಗಡಿಗಳು ಗ್ರಾಹಕರಿಲ್ಲದೆ ಬಿಕೊ ಎನ್ನುತ್ತಿದ್ದವು. ನಮ್ಮ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ. ಶೇ 60ರಷ್ಟು ವಹಿವಾಟು ಕುಸಿದಿದೆ’ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಬಸ್ ನಿಲ್ದಾಣದೊಳಗಿನ ಅಂಗಡಿಗಳಿಗೆ ಆಹಾರ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಪೂರೈಸುವ ಲಾರಿ ಮತ್ತು ಟೆಂಪೊಗಳ ಪ್ರವೇಶಕ್ಕೂ ಅನುಮತಿ ನೀಡುತ್ತಿಲ್ಲ. ನೀರಿನ ಕ್ಯಾನ್, ಬ್ರೆಡ್, ಮದ್ಯದ ಬಾಕ್ಸ್ ಮತ್ತಿತ್ತರ ಸಾಮಗ್ರಿಗಳನ್ನು ಸಾಗಿಸುವುದು ಹೇಗೆ. ಹೀಗಾಗಿ, ಬಸ್ ನಿಲ್ದಾಣ ಪ್ರವೇಶದ ನಿರ್ಬಂಧದಿಂದ ಕೆಲವು ವಾಹನಗಳಿಗೆ ವಿನಾಯಿತಿ ನೀಡುವಂತೆ ಶಾಸಕರಿಗೆ ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಬೈಕ್ ನಿಲುಗಡೆಗೆ ನಿಷೇಧ ಹೇರಿದ್ದರಿಂದ ಬಸ್ ನಿಲ್ದಾಣದ ಸುತ್ತಮುತ್ತ ಇರುವ ರಸ್ತೆಗಳ ಅಕ್ಕಪಕ್ಕದಲ್ಲಿ ಬೈಕ್‌ಗಳನ್ನು ನಿಲ್ಲಿಸಲಾಗುತ್ತಿದ್ದು, ಇದು ಪೊಲೀಸರಿಗೆ ಹೊಸ ತಲೆನೋವು ತಂದಿದೆ. ವಾಹನ ಸಂಚಾರದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಹುಲ್ಲು ಮಾರುಕಟ್ಟೆಯಲ್ಲಿ ಬೈಕ್ ನಿಲುಗಡೆಗೆ ಅವಕಾಶ ಕಲ್ಪಿಸಿದ್ದರೂ, ಪಾರ್ಕಿಂಗ್ ಸ್ಥಳ ಸಾಕಾಗುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.