ಕೆಜಿಎಫ್: ಚಿನ್ನದ ನಿಕ್ಷೇಪಗಳಿರುವ ಸೈನೈಡ್ ಗುಡ್ಡದ ಮಣ್ಣನ್ನು ಮಾರಾಟ ಇಲ್ಲವೇ ವಿಲೇವಾರಿ ಮಾಡಲು ಬಿಜಿಎಂಎಲ್ ಆಹ್ವಾನಿಸಿದ್ದ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ, ಬಿಡ್ ಮಾಡಿದ ಸಂಸ್ಥೆಯ ಹೆಸರನ್ನು ಬಿಜಿಎಂಎಲ್ ಇದುವರೆವಿಗೂ ಬಹಿರಂಗಗೊಳಿಸದೆ ಚಿನ್ನದ ಗಣಿ ಪುನಶ್ಚೇತನದ ಬಗ್ಗೆ ಗಣಿ ಕಾರ್ಮಿಕರಲ್ಲಿ ಅನಿಶ್ಚಿತತೆಮೂಡಿದೆ.
ಗಣಿ ಸಂಬಂಧಿಸಿದಂತೆ ಆಗಾಗ್ಗೆ ದೆಹಲಿಯಿಂದ ಪ್ರಕಟವಾಗುವ ಸುದ್ದಿಗಳಿಂದ ಬಿಜಿಎಂಎಲ್ ಪ್ರಾರಂಭವಾಗುತ್ತದೆಯೋ ಎಂಬ ಕಾತುರದಲ್ಲಿರುವ ಗಣಿ ಕಾರ್ಮಿಕರಿಗೆ ಇದುವರೆವಿಗೂ ಖಚಿತ ಮಾಹಿತಿ ದೊರೆತಿಲ್ಲ. ಚಿನ್ನದ ಗಣಿಯಿಂದ ತೆಗೆದ ಮಣ್ಣಿನ ಸಂಗ್ರಹ ಇರುವ ಸೈನೈಡ್ ಗುಡ್ಡವನ್ನು ಮಾರಾಟ ಅಥವಾ ವಿಲೇವಾರಿ ಮಾಡಲು ಬಿಜಿಎಂಎಲ್ ಅಕ್ಟೋಬರ್ ತಿಂಗಳಲ್ಲಿ ಟೆಂಡರ್ ಕರೆದಿತ್ತು. ಡಿ.5 ರಂದು ಬಿಡ್ ಮಾಡಿದವರ ಹೆಸರು ಬಹಿರಂಗ ಪಡಿಸುವುದಾಗಿ ಹೇಳಿತ್ತು. ಆದರೆ ಇದುವರೆವಿಗೂ ಬಿಡ್ ಮಾಡಿದವರ ಹೆಸರನ್ನು ಗಣಿ ಅಧಿಕಾರಿಗಳು ಬಹಿರಂಗ ಪಡಿಸಿಲ್ಲ.
‘ಇದರಿಂದ ಯಾವುದೇ ಬಿಡ್ ದಾರರು ಹರಾಜಿನಲ್ಲಿ ಭಾಗವಹಿಸಿಲ್ಲ ಎಂಬ ಅನುಮಾನ ಮೂಡಿದೆ. ಗಣಿ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯಗಳಿರುವುದರಿಂದ ಬಿಡ್‌ಗೆ ಆಸಕ್ತಿ ತೋರಿಲ್ಲ. ಈ ಸಂಬಂಧ ಗಣಿ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಕಾರ್ಮಿಕ ಸಂಘಗಳಿಗೆ ನೀಡುತ್ತಿಲ್ಲ’ ಎಂದು ಕಾರ್ಮಿಕ ಸಂಘಗಳ ಮುಖಂಡರುಹೇಳುತ್ತಿದ್ದಾರೆ.
ನಗರದ ರಾಬರ್ಟಸನ್‌ಪೇಟೆ, ಚಾಂಪಿಯನ್‌ರೀಫ್ಸ್, ಮಾರಿಕುಪ್ಪಂ, ಕೋರಮಂಡಲ್ ಪ್ರದೇಶದಲ್ಲಿ ಹರಡಿರುವ ಸೈನೈಡ್ ಗುಡ್ಡದಲ್ಲಿ ಎಷ್ಟು ಚಿನ್ನದ ಅಂಶ ಇದೆ ಎಂಬುದಕ್ಕೆ ನಿಖರ ಮಾಹಿತಿ ಇಲ್ಲ. ಸಂಸ್ಕರಿಸಿದ ಚಿನ್ನದ ಮಣ್ಣಿನಲ್ಲಿ ಆಧುನಿಕ ತಂತ್ರಜ್ಞಾನದಿಂದ ಚಿನ್ನವನ್ನು ತೆಗೆದರೆ ಲಾಭದಾಯಕವಾಗಬಹುದು. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾದ ಗಣಿಗಳಲ್ಲಿ ಒಂದು ಟನ್ ಅದಿರಿಗೆ 2 ರಿಂದ 3 ಗ್ರಾಂ ಚಿನ್ನ ಸಿಕ್ಕರೂ ಲಾಭದಾಯಕವಾಗಿದೆ. ಭೂಮಿಯಿಂದ ಮೇಲ್ಮಟ್ಟದಲ್ಲಿರುವ ಸೈನೈಡ್ ಗುಡ್ಡದ ಮಣ್ಣಿನಲ್ಲಿ ಇನ್ನೂ ಕಡಿಮೆ ವೆಚ್ಚದಲ್ಲಿ ಚಿನ್ನವನ್ನು ತೆಗೆಯಬಹುದು ಎಂಬ ವಾದ ಒಂದು ಕಡೆ ಇದ್ದರೆ, ಈ ಮಣ್ಣನಿಂದ ಇಟ್ಟಿಗೆ ಮೊದಲಾದ ಕಟ್ಟಡಕ್ಕೆ ಬೇಕಾದ ವಸ್ತುಗಳನ್ನು ಕೂಡ ತಯಾರು ಮಾಡಬಹುದು ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಆದರೆ ಸಂಶೋಧನೆ ಆಧಾರಿತ ವರದಿ ಇದುವರೆವಿಗೂ ಬಂದಿಲ್ಲ ಎಂದು ಮೂಲಗಳುಹೇಳಿವೆ.
ಚಿನ್ನದ ಗಣಿಯಲ್ಲಿ ಚಿನ್ನದ ನಿಕ್ಷೇಪಗಳಿದ್ದು, ಅಲ್ಲಿಂದ ಚಿನ್ನವನ್ನು ತೆಗೆಯಬಹುದು ಎಂಬ ಅಂಶ ಕಂಡುಬಂದರೆ ಗಣಿಯನ್ನು ಪುನರ್ ಪ್ರಾರಂಭಿಸಬಹುದು. ಚಿನ್ನದ ನಿಕ್ಷೇಪದ ಬಗ್ಗೆ ಎಂಐಸಿಎಲ್ ಸಂಶೋಧನೆ ನಡೆಸುತ್ತಿದೆ ಎಂದು ಕೇಂದ್ರ ಗಣಿ ಸಚಿವ ಪ್ರಲ್ಹಾದ ಜೋಷಿ ಹೇಳಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿಹೇಳಿದ್ದರು.
ಈ ಸಂಬಂಧವಾಗಿ ಫೆಬ್ರವರಿ ತಿಂಗಳಲ್ಲಿ ಅವರು ಕೇಳಿದ ಪ್ರಶ್ನೆಗೆ ಸಂಸತ್‌ನಲ್ಲಿ ಲಿಖಿತ ಮಾಹಿತಿ ನೀಡಿದ ಅವರು, 2001 ರಲ್ಲಿ ಮುಚ್ಚಿದ ಬಿಜಿಎಂಎಲ್ ಬಗ್ಗೆ ಮುಂದಿನ ಪ್ರಕ್ರಿಯೆ ನಡೆಸಲು ಸಲಹೆಗಾರರನ್ನು ಆಡಳಿತ ಮಂಡಳಿ ನೇಮಿಸಿದೆ. ಸಲಹೆಗಾರರ ವರದಿಯ ಮೇರೆಗೆ ಮಾನಿಟರಿಂಗ್ ಕಮಿಟಿಯನ್ನು ನೇಮಕಮಾಡಲಾಗಿತ್ತು.
ಗಣಿ ಮುಚ್ಚಿದ ನಂತರ ಗಣಿಯೊಳಗೆ ನೀರು ತುಂಬಿಕೊಂಡಿರುವುದರಿಂದ ಗಣಿಗಾರಿಕೆ ಸಾಧ್ಯವಿಲ್ಲ. ಅಲ್ಲದೆ ಆರ್ಥಿಕವಾಗಿ ಲಾಭವಲ್ಲದ ರೀತಿಯಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಗಣಿಯ ಗುತ್ತಿಗೆ ಅವಧಿ 2023 ಕ್ಕೆ ಮುಕ್ತಾಯವಾಗುತ್ತದೆ. ಆದ್ದರಿಂದ ಗಣಿಗಾರಿಕೆ ಮಾಡುವುದು ಕಾರ್ಯಸಾಧುವಲ್ಲ ಎಂದು ತಿಳಿಸಿದ್ದರು.
ಈಗಾಗಲೇ ಚಿನ್ನದ ಗಣಿ ವಿಷಯವು ಕರ್ನಾಟಕ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಸೈನೈಡ್ ಗುಡ್ಡಗಳನ್ನು ಹರಾಜು ಮಾಡಬಹುದು ಇಲ್ಲವೇ ಬೇರೆಡೆಗೆ ವರ್ಗಾಯಿಸಬಹುದು ಎಂದು ವರದಿಯಲ್ಲಿ ತಿಳಿಸಿದ್ದು, ಚಿನ್ನದ ನಿಕ್ಷೇಪಗಳಿರುವ ಎರಡು ಬ್ಲಾಕ್ ಗಳನ್ನು ಕೂಡ ಹರಾಜು ಹಾಕಬಹುದು ಎಂದು ಹೇಳಿದ್ದರು.
ಸ್ವಯಂ ನಿವೃತ್ತಿ ತೆಗೆದುಕೊಂಡ ಗಣಿ ಕಾರ್ಮಿಕರಿಗೆ ಬರಬೇಕಾದ ₹52 ಕೋಟಿ ಬಾಕಿ ಹಣವನ್ನು ಕೇಂದ್ರ ಸರ್ಕಾರ ನೀಡಬೇಕಾಗಿದೆ. ಸಾಕಷ್ಟು ಹೋರಾಟ ಮಾಡಿದ್ದರೂ ಇದುವರೆವಿಗೂ ನೀಡಿಲ್ಲ. ಅಲ್ಲದೆ ಮನೆ ಸ್ವಂತ ನೀಡುವ ಬಗ್ಗೆ ಕೂಡ ಹೈಕೋರ್ಟ್ ಆದೇಶವನ್ನು ಪಾಲಿಸಲಾಗುತ್ತಿಲ್ಲ. ಗಣಿ ಕಾರ್ಮಿಕರ ಸಮಸ್ಯೆ ನೀಗಿಸದೆ, ಸೈನೈಡ್ ಗುಡ್ಡವನ್ನು ಹರಾಜು ಹಾಕಬಾರದು. ಬಿಜಿಎಂಎಲ್ ಕಾರ್ಮಿಕರ ಹಲವಾರು ಸಮಸ್ಯೆಗಳ ಬಗ್ಗೆ ಮಾಜಿ ಕಾರ್ಮಿಕ ಸಂಘದ ಪರವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಜನವರಿ ತಿಂಗಳಲ್ಲಿ ವಿಚಾರಣೆಗೆ ಬರಲಿದೆ. ಒಂದು ವೇಳೆ ಬಲವಂತವಾಗಿ ಸೈನೈಡ್ ಗುಡ್ಡಗಳನ್ನು ಹರಾಜು ಮಾಡಲು ಹೊರಟರೆ, ಗಣಿ ಕಾರ್ಮಿಕ ಕುಟುಂಬದವರು ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಸಂಘದ ಕಾರ್ಯಾಧ್ಯಕ್ಷ ಮೂರ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.