ಕೆಜಿಎಫ್: ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಆದರ್ಶ, ಸಮಾಜಸೇವೆ, ದಿಟ್ಟತನ ಎಲ್ಲಾ ಮಹಿಳೆಯರಿಗೂ ಆದರ್ಶ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ತಾಲ್ಲೂಕು ಆಡಳಿತ ಸೌಧದಲ್ಲಿ ಶನಿವಾರ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಮಾತನಾಡಿದರು. ಅತ್ತೆಯಿಂದ ತೀವ್ರ ಕಿರುಕುಳ ಅನುಭವಿಸಿದರೂ, ಕುಟುಂಬದ ಹಿತವನ್ನು ಕಾಪಾಡಿಕೊಂಡು, ಕಷ್ಟವನ್ನು ಸಹಿಸಿಕೊಂಡು ದೈವ ಸಾಕ್ಷಾತ್ಕಾರದತ್ತ ದಿಟ್ಟ ಹೆಜ್ಜೆ ಇಟ್ಟ ಮಹಿಳೆ ಮಲ್ಲಮ್ಮ. ಅವರ ತಾಳ್ಮೆಯನ್ನು, ಆದರ್ಶವನ್ನು ಅನುಸರಿಸಬೇಕು ಎಂದು ಹೇಳಿದರು.
ಉಪನ್ಯಾಸಕ ಶ್ರೀನಿವಾಸಪ್ರಸಾದ್ ಮಾತನಾಡಿ, ಕೇಡು ಕೊಟ್ಟ ಜನರಿಗೆ ಕೇಡು ಮಾಡುವ ಜನರು ಇರುವ ವಿಶ್ವದಲ್ಲಿ, ಕೇಡು ಬಗೆದವರಿಗೆ ಒಳ್ಳೆಯದನ್ನು ಮಾಡಿದ ಸಹೃದಯ ಹೇಮರೆಡ್ಡಿ ಮಲ್ಲಮ್ಮ ಅವರ ನಡೆ ವಿಭಿನ್ನ. ಲೌಕಿಕ ಬದುಕನ್ನು ನಿರಾಕರಿಸದೇ, ಅರಿವಿಲ್ಲದ ಗಂಡನ ಜೊತೆ ಬಾಳ್ವೆ ಮಾಡಿದ ಮಹಾನ್ ಸಾಧ್ವಿ ಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ರೆಡ್ಡಿ ಸಂಘದ ಅಧ್ಯಕ್ಷ ಪ್ರಸನ್ನ ರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಳ್ ಮುನಿಸ್ವಾಮಿ, ಮುಖಂಡ ವೆಂಕಟಕೃಷ್ಣಾರೆಡ್ಡಿ ಮಾತನಾಡಿದರು. ತಹಶೀಲ್ದಾರ್ ಕೆ.ನಾಗವೇಣಿ, ತಾಲ್ಲೂಕು ಪಂಚಾಯಿತಿ ನಿರ್ವಹಣಾಧಿಕಾರಿ ವೆಂಕಟೇಶಪ್ಪ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಮುಖಂಡ ಪದ್ಮನಾಭರೆಡ್ಡಿ, ಹಿರಿಯ ಸಹಕಾರಿ ಶಾಂತಮ್ಮ ಮತ್ತು ರೆಡ್ಡಿ ಸಮುದಾಯದ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.