ADVERTISEMENT

ಕೆಜಿಎಫ್‌ ಲೈನ್‌ಮನ್‌ ಮೇಲೆ ಹಲ್ಲೆ: ಆಂಧ್ರಪ್ರದೇಶದ ನಿವಾಸಿ ಬಂಧನ

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:03 IST
Last Updated 26 ಮೇ 2025, 16:03 IST
ಹಲ್ಲೆಗೊಳಗಾದ ಲೈನ್‌ಮನ್‌ ವೆಂಕಟರಾಮ
ಹಲ್ಲೆಗೊಳಗಾದ ಲೈನ್‌ಮನ್‌ ವೆಂಕಟರಾಮ   

ಕೆಜಿಎಫ್‌: ಕರ್ತವ್ಯ ನಿರತ ಲೈನ್‌ಮನ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಆಂಧ್ರಪ್ರದೇಶದ ಪೊಗರಪಲ್ಲಿ ನಿವಾಸಿ ಜ್ಞಾನೇಂದ್ರ ರೆಡ್ಡಿ ಎಂಬಾತನನ್ನು ಆಂಡರಸನ್‌ಪೇಟೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಮೇ 21ರಂದು ಕೆಂಪಾಪುರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದ ಲೈನ್‌ಮನ್‌ ವೆಂಕಟರಾಮ ಎಂಬುವರು ಮನೆ ಮನೆಗೆ ತೆರಳಿ ವಿದ್ಯುತ್‌ ಸಂಪರ್ಕ ಪರೀಕ್ಷೆ ಮಾಡುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಅಡ್ಡವಾಗಿದ್ದ ಬೈಕನ್ನು ತೆಗೆಯಲು ಹೇಳಿದ್ದಾರೆ. ಬೈಕ್‌ ಸವಾರ ಜ್ಞಾನೇಂದ್ರ ರೆಡ್ಡಿ ನಿರಾಕರಿಸಿದ್ದಾರೆ. ಮಾತಿನ ಚಕಮಕಿ ನಡೆದು ವಾಗ್ವಾದ ಏರ್ಪಟ್ಟಿದೆ. ಈ ಸಂದರ್ಭದಲ್ಲಿ ಲೈನ್‌ಮನ್‌ ಮೇಲೆ ಹಲ್ಲೆ ನಡೆಸಲಾಗಿತ್ತು.

ಘಟನೆ ನಡೆದು ಐದು ದಿನವಾದರೂ ಆಂಡರಸನ್‌ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂದು ಆರೋಪಿಸಿ ಬೆಸ್ಕಾಂ ಲೈನ್‌ಮನ್‌ ಸಂಘ ಮತ್ತು ದಲಿತ ಸಂಘಟನೆಗಳು ಆಂಡರಸನ್‌ಪೇಟೆ ಪೊಲೀಸ್‌ ಠಾಣೆ ಮುಂಭಾಗದಲ್ಲಿ ಸೋಮವಾರ ಧರಣಿ ನಡೆಸಲು ತೀರ್ಮಾನಿಸಿದ್ದವು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ತನಿಖೆ ಮುಂದುವರೆದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.