ಕೆಜಿಎಫ್: ಖಾಸಗಿ ಸಹಭಾಗಿತ್ವದಲ್ಲಿ ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಮತ್ತು ಕೆಜಿಎಫ್ ತಾಲ್ಲೂಕಿನಲ್ಲಿ ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣ ಮಾಡುವ ನಿರ್ಧಾರವನ್ನು ಶಾಸಕಿ ಎಂ.ರೂಪಕಲಾ ಸಮರ್ಥಿಸಿಕೊಂಡಿದ್ದಾರೆ.
ರಾಬರ್ಟಸನ್‌ಪೇಟೆ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ಶನಿವಾರ ಪ್ರಾರಂಭವಾದ ಶಿಬಿಕ ವಾಹನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾತನಾಡಿದರು.
‘ಎಪಿಎಂಸಿ ಮಾರುಕಟ್ಟೆ ಅಂತರರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಾಗಿರುತ್ತದೆ. ಅದನ್ನು ರೂಪಿಸಲು ತಜ್ಞರ ಅವಶ್ಯವಿದೆ. ಮುಂದಿನ ಇಪ್ಪತ್ತು ವರ್ಷದ ದೃಷ್ಟಿ ಇಟ್ಟುಕೊಂಡು ತಜ್ಞರ ಅಭಿಪ್ರಾಯ ಪಡೆದುಕೊಳ್ಳಬೇಕು. ಎಪಿಎಂಸಿ ಬಳಿ ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆ ಹಾದುಹೋಗುತ್ತಿದೆ. ಕುಪ್ಪಂನಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ. ಎರಡೂ ಕಡೆ ಉತ್ತಮ ರಸ್ತೆ ಇರುವುದರಿಂದ ಭವಿಷ್ಯದಲ್ಲಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ದೃಷ್ಟಿಯಿಂದ 25 ಎಕರೆ ಮಂಜೂರು ಮಾಡಲಾಗಿದೆ’ ಎಂದರು.
‘ಸರ್ಕಾರವು ಎಪಿಎಂಸಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೊಟ್ಟಿದೆ. ರೈತರಿಗೆ ಉಪಯೋಗವಾಗಲಿ ಎಂಬುದೇ ಉದ್ದೇಶವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಇಲ್ಲಿ ಜಾರಿಗೊಳಿಸಬಹುದು’ ಎಂದು ತಿಳಿಸಿದರು.
‘ಕೆಜಿಎಫ್‌ನಲ್ಲಿ ಭಾರತೀಯ ಮೀಸಲು ಪೊಲೀಸ್ ಪಡೆಗೆ ₹ 80 ಕೋಟಿ ಬಂದಿದೆ. ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜನ್ನು ಬೇಗ ಮಾಡಲಿ ಎಂಬ ಉದ್ದೇಶದಿಂದ ಖಾಸಗಿ ಸಹಭಾಗಿತ್ವದಲ್ಲಿ ಮಾಡಲು ನಿರ್ಧರಿಸಿದೆ. ವೈದ್ಯಕೀಯ ಕಾಲೇಜು ಇಡೀ ಜಿಲ್ಲೆಗೆ ನೀಡಿದ ಕೊಡುಗೆಯಾಗಿದೆ’ ಎಂದು ಹೇಳಿದರು.
ಈ ವಿಚಾರವಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ‘ಖಾಸಗಿ ಸಹಭಾಗಿತ್ವದ ಕುರಿತು ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಂಡಿದ್ದಾರೆ. ಬಜೆಟ್‌ನಲ್ಲಿ ಮಂಡಿಸುವ ಮೊದಲು ಈ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆದಿಲ್ಲ’ ಎಂದರು.
ಕೆಜಿಎಫ್‌ನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಶಾಸಕಿ ಒತ್ತಾಯಿಸಲಿ ಎಂದು ಸಲಹೆ ಮಾಡಿದರು.
‘ನಗರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಟ್ಟಡ ಇನ್ನೆರಡು ತಿಂಗಳಲ್ಲಿ ಮುಗಿಯುವ ಸಂಭವ ಇದೆ. ಇನ್ನೂ ಶೇ 25 ರಷ್ಟು ಕೆಲಸ ಬಾಕಿ ಇದೆ’ ಎಂದರು.
ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ತಹಶೀಲ್ದಾರ್ ಕೆ.ನಾಗವೇಣಿ, ಡಿವೈಎಸ್ಪಿ ಪಾಂಡುರಂಗ, ರೆಡ್ಡಿ ಸಮುದಾಯದ ಮುಖಂಡರು ಇದ್ದರು. ಶಿಬಿಕವಾಹನೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು. ರೆಡ್ಡಿ ಸಮುದಾಯದ ಪೀಠಾಧಿಪತಿ ವೇಮನಾನಂದ ಸ್ವಾಮಿ ಆಶೀರ್ವಚನ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಹಾದುಹೋಗುವಲ್ಲಿ ಜಾಗವಿದ್ದರೆ ವೈದ್ಯಕೀಯ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಕೊಡಲಾಗುತ್ತದೆ. ಇಂತಹ ಕ್ಷೇತ್ರದಲ್ಲಿಯೇ ವೈದ್ಯಕೀಯ ಕಾಲೇಜು ಬರುತ್ತದೆ ಎಂದು ಭಾವಿಸಬಾರದು.–ರೂಪಕಲಾ ಶಶಿಧರ್, ಶಾಸಕಿ
ಸರ್ಕಾರದಿಂದಲೇ ನಿರ್ಮಾಣ ಮಾಡಬಹುದಿತ್ತು–ಸಚಿವ
‘ವೈದ್ಯಕೀಯ ಕಾಲೇಜು ಮತ್ತು ಎಪಿಎಂಸಿಯನ್ನು ಸರ್ಕಾರವೇ ಪ್ರಾರಂಭಿಸಬಹುದಿತ್ತು. ಈ ಹಿಂದೆ ಕೂಡ ಸರ್ಕಾರದಿಂದಲೇ ಮಾಡಲಾಗಿತ್ತು. ಈಗ ಏಕೆ ಸಹಭಾಗಿತ್ವದಲ್ಲಿ ಮಾಡಲಾಗುತ್ತಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿಯನ್ನೇ ಕೇಳಬೇಕು’ ಎಂದು ಸಚಿವ ರಾಮಲಿಂಗರೆಡ್ಡಿ ನುಡಿದರು.
‘ಮೊದಲು ಎಪಿಎಂಸಿಯಲ್ಲಿ ಸಹಭಾಗಿತ್ವ ಎಂಬುದು ಇರಲಿಲ್ಲ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಎಪಿಎಂಸಿಯ ಅಧಿಕಾರವನ್ನು ಮೊಟಕುಗೊಳಿಸಿದ್ದರು. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಲು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಲಾಗುತ್ತಿದೆ ಎಂಬುದಾಗಿ ನಾವು ವಿರೋಧಿಸಿದ್ದೆವು. ಬಜೆಟ್‌ನಲ್ಲಿ ಸರ್ಕಾರ ನಿರ್ಧಾರ ಪ್ರಕಟಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.