ADVERTISEMENT

ಕೆಜಿಎಫ್‌: ಮನೆ ಖಾಲಿ ಮಾಡಲು ಕಾರ್ಮಿಕರಿಗೆ ನೋಟಿಸ್‌

ಬಿಜಿಎಂಎಲ್‌ ಕಾರ್ಮಿಕರಲ್ಲಿ ಎದುರಾದ ಆತಂಕ

​ಪ್ರಜಾವಾಣಿ ವಾರ್ತೆ
Published 18 ಮೇ 2025, 15:47 IST
Last Updated 18 ಮೇ 2025, 15:47 IST
ಕೆಜಿಎಫ್‌ ಬಿಜಿಎಂಎಲ್‌ ಕಾರ್ಮಿಕರ ವಾಸದ ಮನೆ
ಕೆಜಿಎಫ್‌ ಬಿಜಿಎಂಎಲ್‌ ಕಾರ್ಮಿಕರ ವಾಸದ ಮನೆ   

ಕೆಜಿಎಫ್‌: ಬಿಜಿಎಂಎಲ್‌ ಕಾಲೊನಿಗಳಲ್ಲಿ ವಾಸ ಮಾಡುತ್ತಿರುವ ಗಣಿ ಕಾರ್ಮಿಕರು ಹೊಂದಿರುವ ಹೆಚ್ಚುವರಿ ಮನೆಗಳನ್ನು ಕೂಡಲೇ ಖಾಲಿ ಮಾಡಬೇಕು ಎಂದು ಬಿಜಿಎಂಎಲ್‌ ಅಧಿಕಾರಿಗಳು ನೋಟಿಸ್‌ ನೀಡಿರುವುದು ಗಣಿ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ.

ಬಿಜಿಎಂಎಲ್‌ ಮುಚ್ಚುವ ಸಂದರ್ಭದಲ್ಲಿದ್ದ ಎಸ್‌ಟಿಬಿಪಿ (ವಿಶೇಷ ನಿವೃತ್ತಿ ಯೋಜನೆ) ಕಾರ್ಮಿಕರು ತಮಗೆ ಮಂಜೂರಾದ ಮನೆಗಳ ಜತೆಗೆ ಹೆಚ್ಚುವರಿ ಮನೆಗಳನ್ನು ಹೊಂದಿರುವುದು ಕಂಡು ಬಂದಿದೆ. ಎರಡಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವವರು ಕೂಡಲೇ ಹೆಚ್ಚುವರಿ ಮನೆಯನ್ನು ಮೇ 27ರೊಳಗೆ ಖಾಲಿ ಮಾಡಿ ಬಿಜಿಎಂಎಲ್‌ ವಶಕ್ಕೆ ಒಪ್ಪಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

2001ರಲ್ಲಿ ಬಿಜಿಎಂಎಲ್‌ ತನ್ನ ಕಾರ್ಯಾಚರಣೆ ನಿಲ್ಲಿಸಿದ ಸಂದರ್ಭದಲ್ಲಿ ಎಸ್‌ಟಿಬಿಪಿ ಯೋಜನೆಗೆ ಒಳಪಡುವ ಸುಮಾರು ಮೂರು ಸಾವಿರ ಕಾರ್ಮಿಕರು ಮನೆಗಳನ್ನು ಹೊಂದಿದ್ದಾರೆ. ಮನೆಗೆ ಹೊಂದಿಕೊಂಡಿರುವ ಖಾಲಿ ಮನೆಗಳನ್ನು ಅವರ ಕೋರಿಕೆ ಮೇರೆಗೆ ಗಣಿ ಆಡಳಿತ ವರ್ಗ ನೀಡುತ್ತಿತ್ತು. ತೀರಾ ಚಿಕ್ಕದಾದ ಎರಡು ಮನೆಗಳನ್ನು ಒಟ್ಟುಗೂಡಿಸಿಕೊಂಡು ಮನೆಗಳನ್ನು ವಿಸ್ತಾರ ಮಾಡಿಕೊಳ್ಳಲಾಗಿತ್ತು. ಈಗ ಗಣಿ ಆಡಳಿತ ವರ್ಗ ಹೆಚ್ಚುವರಿಯಾಗಿ ನೀಡಿದ್ದ ಮನೆಗಳನ್ನು ಕೊಡಿ ಎಂದರೆ ಹೇಗೆ ಮನೆ ಖಾಲಿ ಮಾಡುವುದು ಎಂಬ ಚಿಂತೆ ಕಾರ್ಮಿಕರ ಕುಟುಂಬಗಳದ್ದು.

ADVERTISEMENT

ಮೊದಲೇ ಆರ್ಥಿಕವಾಗಿ ಜರ್ಜರಿತ ಗಣಿ ಕಾರ್ಮಿಕರು ಈಗ ಮತ್ತೊಂದು ಪ್ರಹಾರ ಎದುರಿಸಬೇಕಾಗಿದೆ. ಗಣಿ ಕಾರ್ಮಿಕರಿಗೆ ಕೊಡಬೇಕಾದ ₹52ಕೋಟಿ ಮತ್ತು ಅದಕ್ಕೆ ಬರಬೇಕಾದ ಬಡ್ಡಿಯನ್ನು ಆಡಳಿತ ವರ್ಗ ಇನ್ನೂ ಕೊಟ್ಟಿಲ್ಲ. ಈಗ ಇರುವ ಸಣ್ಣ ಮನೆಗಳನ್ನು ವಿಭಾಗ ಮಾಡಿ, ವಾಪಸ್‌ ಕೊಡಿ ಎಂಬುದು ಅಮಾನವೀಯ ಎಂದು ಗಣಿ ಕಾರ್ಮಿಕ ಮುಖಂಡರ ವಾದ.

ಗಣಿ ಕಾರ್ಮಿಕರಿಗೆ ಆಡಳಿತ ವರ್ಗ ನೀಡಿದ್ದು, ಸಣ್ಣ ಗುಡಿಸಲುಗಳನ್ನು ಮಾತ್ರ. ಅದನ್ನು ಕಾರ್ಮಿಕರು ಸಣ್ಣ ಮನೆಯನ್ನಾಗಿ ರೂಪಿಸಿಕೊಂಡಿದ್ದರು. ಪ್ರತಿಯೊಬ್ಬರೂ ಮನೆಗಳನ್ನು ಹೊಂದಬೇಕು ಎಂಬುದು ಪ್ರಧಾನ ಮಂತ್ರಿ ಅವರ ಆಶಯವಾಗಿದೆ. ಕಾರ್ಮಿಕರು ವಾಸ ಮಾಡುವ ಮನೆಗಳನ್ನು ಅವರಿಗೆ ನೀಡಲು ನ್ಯಾಯಾಲಯ ಕೂಡ ಆದೇಶಿಸಿದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮ ಅಸಮರ್ಥನೀಯ ಎಂದು ಕಾರ್ಮಿಕ ಮುಖಂಡ ಕೆ.ರಾಜೇಂದ್ರನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಪಾಯಕಾರಿ ಸನ್ನಿವೇಶದಲ್ಲಿ ಗಣಿಗಾರಿಕೆ ಮಾಡಿದ್ದ ಗಣಿ ಕಾರ್ಮಿಕರಿಗೆ ಆಡಳಿತ ವರ್ಗ ದಮನಕಾರಿ ಧೋರಣೆ ತಾಳಿದೆ. ಕಾರ್ಮಿಕರು ವಾಸ ಮಾಡುತ್ತಿರುವ ಮನೆಗಳನ್ನು ಅವರಿಗೆ ನೀಡಬೇಕು ಎನ್ನುವ ಯೋಜನೆಯಲ್ಲಿ ಅಡಿಗೆ ಇಂತಿಷ್ಟು ಎಂದು ದರ ನಿಗದಿ ಮಾಡಿದೆ. ಅದರಂತೆ ಕಾರ್ಮಿಕರು ಹಣ ಪಾವತಿ ಮಾಡಿದ್ದಾರೆ. ಕೂಡಲೇ ಗಣಿ ಅಧಿಕಾರಿಗಳು ತಮ್ಮ ನಿರ್ಧಾರ ಹಿಂತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ. ಅಧಿಕಾರಿಗಳ ನಡೆಯಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರುವ ಸಂಭವ ಇದೆ ಎಂದು ಬಿಜಿಎಂಎಲ್‌ ನಿವೃತ್ತ ಕಾರ್ಮಿಕರ ಸಂಘದ ಅಧ್ಯಕ್ಷ ಆರ್.ಮೂರ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.