ADVERTISEMENT

ಕೆಜಿಎಫ್‌ | ಹದಗೆಟ್ಟ ಸಂಚಾರ ವ್ಯವಸ್ಥೆ: ಅಧಿಕಾರಿಗಳ ಮೌನ

ಸದಾ ವಾಹನ ದಟ್ಟಣೆ, ವಾಹನ ಸವಾರರ ನಡುವೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 7:35 IST
Last Updated 2 ಜೂನ್ 2025, 7:35 IST
ರಾಬರ್ಟಸನ್‌ಪೇಟೆ ಬಸ್‌ ನಿಲ್ದಾಣ ಮುಂಭಾಗ ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ವಾಹನಗಳು
ರಾಬರ್ಟಸನ್‌ಪೇಟೆ ಬಸ್‌ ನಿಲ್ದಾಣ ಮುಂಭಾಗ ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ವಾಹನಗಳು   

ಕೆಜಿಎಫ್‌: ನಗರದ ಪ್ರಮುಖ ಪ್ರದೇಶ ರಾಬರ್ಟಸನ್‌ಪೇಟೆಯಲ್ಲಿ ಸಂಚಾರ ವ್ಯವಸ್ಥೆ ತೀರಾ ಹದಗೆಟ್ಟಿದೆ. ನಿಯಮಿತ ಪಾರ್ಕಿಂಗ್‌ ಜಾಗದ ಕೊರತೆ ಮತ್ತು ಸಂಬಂಧಿತ ಇಲಾಖೆಗಳ ಆಸಡ್ಡೆ ಇದಕ್ಕೆ ಕಾರಣ ಎಂದು ದೂರಲಾಗಿದೆ. ಸಂಚಾರ ನಿಯಮ ಮರೀಚಿಕೆಯಾಗಿದೆ.  

ರಾಬರ್ಟಸನ್‌ಪೇಟೆ ಬಸ್‌ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ ಅತ್ಯಂತ ಜನದಟ್ಟಣೆ ಮತ್ತು ವಾಹನ ದಟ್ಟಣೆಯಿಂದ ಕೂಡಿದೆ. ಬಸ್‌ ನಿಲ್ದಾಣದ ಸಮೀಪದಲ್ಲಿಯೇ ಇರುವ ಸುಮಾರು 1500 ಅಂಗಡಿಗಳ ಎಂ.ಜಿ.ಮಾರುಕಟ್ಟೆ ಇರುವುದರಿಂದ ದಟ್ಟಣೆ ಹೆಚ್ಚಲು ಕಾರಣವಾಗಿದೆ. ಇದರ ಜತೆಗೆ ಬ್ಯಾಂಕ್‌ ಮತ್ತು ಕಾಲೇಜು ಇರುವುದರಿಂದ ರಸ್ತೆಯಲ್ಲಿಯೇ ವಾಹನ ನಿಲುಗಡೆ ಮಾಡಲಾಗುತ್ತಿದೆ. ವಾಹನ ನಿಲುಗಡೆ ತಡೆಯಲು ಅಸಾಧ್ಯವಾದ ಕಾರಣ ಹಳೆ ಕೆನರಾ ಬ್ಯಾಂಕ್‌ ಮತ್ತು ರಾಬರ್ಟಸನ್‌ಪೇಟೆ ಪೊಲೀಸ್‌ ಠಾಣೆ ಬಳಿ ಇರುವ ನೋ ಪಾರ್ಕಿಂಗ್‌ ಫಲಕಗಳೇ ಈಗ ನಾಪತ್ತೆಯಾಗಿವೆ. ಬೋರ್ಡ್‌ ಇಲ್ಲದ ಪ್ರಯುಕ್ತ ವಾಹನ ಸವಾರರಿಗೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸಲು ಸುಲಭವಾಗುತ್ತಿದೆ.

ಎಂ.ಜಿ.ವೃತ್ತದ ಬಳಿ ನಾಲ್ಕು ಅನಧಿಕೃತ ಪಾರ್ಕಿಂಗ್‌ ಇರುವ ಕಾರಣ ವೃತ್ತ ಅತ್ಯಂತ ಚಿಕ್ಕದಾಗಿ ಪರಿವರ್ತನೆಯಾಗಿದೆ. ವೃತ್ತದಲ್ಲಿ ಆರು ರಸ್ತೆಗಳು ಸಂದಿಸುತ್ತವೆ. ಎಲ್ಲ ಕಡೆಗಳಿಂದ ಬರುವ ವಾಹನಗಳು ಅತ್ಯಂತ ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ. ರಸ್ತೆಯಲ್ಲಿಯೇ ನಿಂತಿರುವ ವಾಹನಗಳನ್ನು ಬಳಸಿಕೊಂಡು ವಾಹನ ಚಲಾವಣೆ ಮಾಡಬೇಕಾಗಿದೆ. ಊರಿಗಾಂಪೇಟೆಗೆ ಹೋಗುವ ರಸ್ತೆ ಏಕಮುಖ ರಸ್ತೆಯಾಗಿದೆ. ಅಲ್ಲಿ ಇನ್ನೂ ಏಕಮುಖ ರಸ್ತೆ ನಾಮಫಲಕ ಇದೆ. ಆದರೆ, ಅದನ್ನು ಯಾರೂ ಪಾಲಿಸುತ್ತಿಲ್ಲ. ಜತೆಗೆ ರಸ್ತೆ ಎರಡೂ ಬದಿಗಳಲ್ಲಿ ಬೀದಿ ವ್ಯಾಪಾರಿಗಳು ರಸ್ತೆ ಅತಿಕ್ರಮಿಸಿಕೊಂಡಿರುವುದರಿಂದ ಸದಾ ವಾಹನ ದಟ್ಟಣೆ ಮತ್ತು ವಾಹನ ಸವಾರರ ನಡುವೆ ಮಾತಿನ ಚಕಮಕಿ ನಡೆಯಲು ಕಾರಣವಾಗಿದೆ.

ADVERTISEMENT

ಸೂರಜ್‌ ಮಲ್‌ ವೃತ್ತದ ಬಳಿ ಇರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ ಮುಂಭಾಗದ ಪ್ರದೇಶ ಕೂಡ ಅನಧಿಕೃತ ಪಾರ್ಕಿಂಗ್‌ ಪ್ರದೇಶವಾಗಿ ಪರಿವರ್ತನೆಯಾಗಿದೆ. ಬ್ಯಾಂಕ್‌ ಹೋಗುವ ಗ್ರಾಹಕರಿಗೆ ವಾಹನ ನಿಲ್ಲಿಸಲು ಬ್ಯಾಂಕ್‌ ಒಳಗೆ ಜಾಗ ಇದೆ. ಆದರೆ, ಬ್ಯಾಂಕ್‌ ಅಧಿಕಾರಿಗಳು ತಮ್ಮ ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಂಡಿರುವುದರಿಂದ ಗ್ರಾಹಕರ ವಾಹನ, ಬ್ಯಾಂಕ್‌ ಎಟಿಎಂಗೆ ದುಡ್ಡು ತುಂಬುವ ವಾಹನಗಳು ರಸ್ತೆಯನ್ನೇ ಅತಿಕ್ರಮಿಸಿಕೊಂಡು ಬಿಡುತ್ತವೆ.

ಸಲ್ಡಾನಾ ವೃತ್ತದಿಂದ ಸೂರಜ್‌ ಮಲ್‌ ವೃತ್ತದವರೆಗೂ ಇರುವ ಫುಟ್‌ಪಾತ್‌ ಎಸ್‌ಬಿಐ ಕಟ್ಟಡಕ್ಕೆ ಕೊನೆಗೊಳ್ಳುತ್ತದೆ. ಫುಟ್‌ಪಾತ್‌ ಇಲ್ಲದ ಕಾರಣ ಸಾರ್ವಜನಿಕರು ಕೂಡ ರಸ್ತೆಯಲ್ಲಿಯೇ ನಡೆದುಕೊಂಡು ಬರಬೇಕಾದ ಪರಿಸ್ಥಿತಿ ಉದ್ಘವಿಸಿದೆ. ಬ್ಯಾಂಕ್‌ ಮುಂದೆ ಕ್ಯಾಮೆರಾ ಇರುವುದರಿಂದ ಪ್ರತಿನಿತ್ಯ ಬೆಂಗಳೂರಿಗೆ ಪ್ರಯಾಣ ಮಾಡುವ ನೌಕರರು ಬಸ್‌ ನಿಲ್ದಾಣದ ಸುತ್ತಮುತ್ತ ಪಾರ್ಕಿಂಗ್‌ ಮಾಡುತ್ತಾರೆ. ಮುಂಜಾನೆ ಗಾಡಿ ಗಾಡಿ ನಿಲ್ಲಿಸಿದರೆ ಅದನ್ನು ತೆಗೆಯವುದು ರಾತ್ರಿಯಲ್ಲಿಯೇ. ಅಲ್ಲದೆ, ರಾಬರ್ಟಸನ್‌ಪೇಟೆ ಪೊಲೀಸ್‌ ಠಾಣೆ ಕೂಡ ಅನಧಿಕೃತ ಪಾರ್ಕಿಂಗ್‌ ಜಾಗವಾಗಿ ಪರಿವರ್ತನೆಯಾಗಿದೆ. ನಗರದಿಂದ ಬೇರೆಡೆಗೆ ಹೋಗುವ ವಿವಿಧ ಇಲಾಖೆಗಳ ಸಿಬ್ಬಂದಿ ಮತ್ತು ಪೊಲೀಸರು ಕೂಡ ಇಲ್ಲಿಯೇ ಪಾರ್ಕಿಂಗ್‌ ಮಾಡುತ್ತಿದ್ದಾರೆ.

ಸೂರಜ್‌ ಮಲ್‌ ವೃತ್ತದಲ್ಲಿ ಫುಟ್‌ಪಾತ್‌ ಮೇಲೆ ನಿಲ್ಲಿಸಲಾಗಿರುವ ಬೈಕ್‌ ಗಳು
ಪೊಲೀಸ್‌ ಠಾಣೆ ಮುಂಭಾಗದಲ್ಲಿ ಆಟೊ ಸ್ಟಾಂಡ್‌ ಮಾಡಲು ಯತ್ನ ನಡೆದಿತ್ತು. ಈಗ ಆಟೊ ನಿಲ್ಲಿಸಲು ಜಾಗ ಇಲ್ಲ. ಸೂಕ್ತ ಜಾಗ ಮಾಡಿಕೊಟ್ಟರೆ ಆಟೊ ಅಲ್ಲಿಯೇ ನಿಲ್ಲಿಸುತ್ತೇವೆ
ಕರುಣಾ, ಆಟೊ ಚಾಲಕ
ನಗರ ದೊಡ್ಡದಾಗಿ ಬೆಳೆಯುತ್ತಿದೆ. ಕಾರು ಮತ್ತು ಬೈಕ್‌ಗಳಿಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಡಬೇಕು
ರಾಜಶೇಖರ್‌, ನಿವಾಸಿ

ಪೊಲೀಸರು ವಿಫಲ: ಸಾರ್ವಜನಿಕರ ದೂರು 

  ನಗರಸಭೆ ಬಸ್‌ ನಿಲ್ದಾಣವನ್ನು ಕೇವಲ ಬಸ್‌ಗಳಿಗಾಗಿ ಮಾತ್ರ ಮೀಸಲು ಇಡಬೇಕು ಎಂದು ನಗರಸಭೆ ಕೆಲ ಸಮಯದ ಹಿಂದೆ ನಿರ್ಧಾರ ತೆಗೆದುಕೊಂಡು ಖಾಸಗಿ ವಾಹನಗಳನ್ನು ಬಸ್‌ ನಿಲ್ದಾಣದೊಳಗೆ ಬಿಡುತ್ತಿರಲಿಲ್ಲ. ಆದರೆ ನಿರ್ಧಾರ ಕೆಲವೇ ದಿನಗಳಲ್ಲಿ ಬದಲಾದ್ದರಿಂದ ಈಗ ಬಸ್‌ ನಿಲ್ದಾಣ ಕೂಡ ಕಾರು ಮತ್ತು ಬೈಕ್‌ಗಳ ಅನಧಿಕೃತ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಟ್ಟಿದೆ. ಬಸ್‌ ನಿಲ್ದಾಣದ ಮುಂಭಾಗದಲ್ಲಿ ಪ್ರಯಾಣಿಕರಿಗಾಗಿ ಕಾಯುವ ಆಟೊಗಳು ಮಧ್ಯ ರಸ್ತೆಯಲ್ಲಿಯೇ ಠಿಕಾಣಿ ಹಾಕುತ್ತವೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ರಾಬರ್ಟಸನ್‌ಪೇಟೆ ಪೊಲೀಸರು ವಿಫಲರಾಗಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ವಾಹನ ದಟ್ಟಣೆ ತಡೆಗಟ್ಟಲು ಎಂ.ಜಿ.ಮಾರುಕಟ್ಟೆ ಬಳಿ ಹೊಸದಾಗಿ ಪಾರ್ಕಿಂಗ್‌ ಜಾಗ ನಿರ್ಮಿಸಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇದ್ದರೂ ಅದಕ್ಕೆ ಚಾಲನೆ ಸಿಗದೆ ಇರುವುದರಿಂದ ಅನಧಿಕೃತ ಪಾರ್ಕಿಂಗ್‌ ಸ್ಥಳ ಹೆಚ್ಚಲು ಕಾರಣವಾಗಿದೆ ಎಂದು ವರ್ತಕ ಪ್ರಸಾದ್‌ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.