ಕೆಜಿಎಫ್: ತಾಲ್ಲೂಕನ್ನು ಕೈಗಾರಿಕೆ ನಗರವನ್ನಾಗಿ ಮಾಡಬೇಕು ಎನ್ನುವ ದೂರದೃಷ್ಟಿ ಹೊಂದಿದ್ದೇನೆಯೇ ಹೊರತು ಕಸದ ನಗರವನ್ನಾಗಿ ಮಾಡಲು ಸಿದ್ಧಳಿಲ್ಲ ಎಂದು ಶಾಸಕಿ ಎಂ.ರೂಪಕಲಾ ಶಶಿಧರ್ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಮಗ್ರ ಟೌನ್‌ಶಿಪ್ ಮತ್ತು ಉದ್ಯೋಗ ಸೃಷ್ಟಿ ಮಾಡುವ ನೆಲೆ ಕೆಜಿಎಫ್ ಆಗಲಿದೆ. ಜನರ ಆಶೀರ್ವಾದದಿಂದ ಆಯ್ಕೆಯಾಗಿರುವ ನಾನು ಉದ್ಯೋಗ ಕ್ರಾಂತಿ ಸೃಷ್ಟಿಯಾಗಲು ಪ್ರಯತ್ನಿಸುತ್ತಿದ್ದೇನೆ. ಬೇರೆ ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಕಸ ತಂದು ಹಾಕುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಯಾವುದೇ ಪ್ರಸ್ತಾವ ಇಲ್ಲ. ಒಂದು ವೇಳೆ ಇಂಥ ಪ್ರಸ್ತಾವ ಇದ್ದರೂ, ಈ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಕೊಡಲಾಗುವುದು’ ಎಂದು ಹೇಳಿದರು.
ವಿವಾದಕ್ಕೆ ಒಳಗಾಗಿರುವ ಜಾಗವು ಬಿಜಿಎಂಎಲ್‌ಗೆ ಸೇರಿದೆ. ಅದು ಕೇಂದ್ರ ಸರ್ಕಾರದ ಆಸ್ತಿ. ಹಲವಾರು ವಿವಾದಗಳ ಕಾರಣಕ್ಕೆ ಈ ಜಾಗದ ವಿಚಾರವು ನ್ಯಾಯಾಲಯದ ವಿಚಾರಣೆಯಲ್ಲಿದೆ. ಈ ಹಿಂದೆ ಇದೇ ಜಾಗದಲ್ಲಿ ತಮಿಳುನಾಡಿನ ಕೂಡಂಕುಲಂ ಅಣು ತ್ಯಾಜ್ಯವನ್ನು ತಂದು ವಿಲೇವಾರಿ ಮಾಡುವ ಬಗ್ಗೆ ವಿವಾದವಾಗಿತ್ತು ಎಂದರು.
ರಾಜ್ಯ ಸರ್ಕಾರದ ಸುಪರ್ದಿಯಲ್ಲಿದ್ದ ಈ ಜಾಗವನ್ನು ಕೆಐಎಡಿಬಿ ₹23 ಕೋಟಿಗೆ ಖರೀದಿಸಿದೆ. ಅಲ್ಲದೆ, 200–300 ಎಕರೆ ಪ್ರದೇಶವು ರಾಜ್ಯ ಸರ್ಕಾರದ ಸುಪರ್ದಿಯಲ್ಲಿಲ್ಲ. ಈ ಜಾಗದ ವಿಚಾರವು ನ್ಯಾಯಾಲಯದ ವಿಚಾರಣೆಗೆ ಒಳಪಟ್ಟಿರುವ ಕಾರಣ ಈ ಜಾಗವನ್ನು ಕಸ ವಿಲೇವಾರಿ ಸೇರಿದಂತೆ ಇನ್ನಿತರ ಯಾವುದೇ ಕಾರಣಕ್ಕೆ ನಾನಾಗಲೀ, ಜಿಲ್ಲಾಧಿಕಾರಿಯಾಗಲೀ ಅಥವಾ ಸರ್ಕಾರವಾಗಲಿ ಮಂಜೂರು ಮಾಡಲು ಅವಕಾಶ ಇರುವುದಿಲ್ಲ. ಅಲ್ಲದೆ, ನಾನು ಬದುಕಿರುವವರೆಗೆ ಈ ನಗರವನ್ನು ಕಸದ ನಗರವನ್ನಾಗಿ ಮಾಡಲು ಬಿಡುವುದಿಲ್ಲ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.