ADVERTISEMENT

ವ್ಯಕ್ತಿಯ ಅಪಹರಣ, ಹಣ ಸುಲಿಗೆ | ನಾಲ್ವರ ಬಂಧನ; ಮೂವರಿಗೆ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 14:34 IST
Last Updated 10 ಜನವರಿ 2025, 14:34 IST
ನಾಲ್ವರು ಆರೋಪಿಗಳನ್ನು ಬಂಧಿಸಿದ ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಕಾಂತರಾಜ್‌ ಹಾಗೂ ಪಿಎಸ್‌ಐ ಭಾರತಿ
ನಾಲ್ವರು ಆರೋಪಿಗಳನ್ನು ಬಂಧಿಸಿದ ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಕಾಂತರಾಜ್‌ ಹಾಗೂ ಪಿಎಸ್‌ಐ ಭಾರತಿ    

ಕೋಲಾರ: ವ್ಯಕ್ತಿಯೊಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಚಾಮರಹಳ್ಳಿ ಗ್ರಾಮದ ಗೋವರ್ದನ್ (23), ಶಿಳ್ಳಂಗೆರೆ ಗ್ರಾಮದ ವಿನಯ್‍ಕುಮಾರ್ (21), ಅಭಿಷೇಕ್ (20) ಹಾಗೂ ಭಟ್ರಹಳ್ಳಿ ಗ್ರಾಮದ ಭರತ್ (23) ಬಂಧಿತ ಆರೋಪಿಗಳು.

ಅಪಹರಣಕ್ಕೆ ಆರೋಪಿಗಳು ಬಳಸಿದ್ದ ವಾಹನದ ಸಂಖ್ಯೆ ಆಧಾರದ ಮೇಲೆ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಜ.1ರಂದು ಅಪಹರಣ ನಡೆದಿದ್ದು, ಜ.9ರಂದು ಈ ಬಂಧನವಾಗಿದೆ. ಒಟ್ಟು ಏಳು ಮಂದಿ ಕೃತ್ಯದಲ್ಲಿ ಭಾಗಿಯಾಗಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ.

ADVERTISEMENT

ಆರೋಪಿಗಳನ್ನು ವಶಕ್ಕೆ ಪಡೆದು ಸುಲಿಗೆ ಮಾಡಿದ್ದ ₹80 ಸಾವಿರ ಬೆಲೆ ಬಾಳುವ 2 ಚಿನ್ನದ ಉಂಗುರಗಳು, ₹80 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆ ಮರೆಸಿಕೊಂಡ ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ತಾಲ್ಲೂಕಿನ ಪಟ್ನ ಗ್ರಾಮದ ನಿವಾಸಿ ನಾಗರಾಜು ಎಂಬುವರನ್ನು ಜ.1ರಂದು ಸಂಜೆ 5.30ರ ಸಮಯದಲ್ಲಿ ಹರಟಿ ಗೇಟ್ ಬಳಿ ಅಪಹರಣ ಮಾಡಿಕೊಂಡು ಹೋಗಿದ್ದ ನಾಲ್ವರು, ಆತನ ಬಳಿ ಇದ್ದ ಹಣ ಮತ್ತು 2 ಚಿನ್ನದ ಉಂಗುರ ಕಿತ್ತುಕೊಂಡಿದ್ದರು. ಅಲ್ಲದೆ, ₹5 ಲಕ್ಷ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಹಣ ಬಂದ ಮೇಲೆ ನಾಗರಾಜು ಅವರನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಅಪಹರಣ ಮಾಡಿ ಕಣ್ಣಿಗೆ ಬಟ್ಟೆ ಕಟ್ಟಿದ್ದರು ಎಂಬುದು ಗೊತ್ತಾಗಿದೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೃತ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗಳಾದ ರವಿಶಂಕರ್, ಜಗದೀಶ್, ಡಿವೈಎಸ್‌ಪಿ ಎಂ.ಎಚ್.ನಾಗ್ತೆ ಮಾರ್ಗದರ್ಶನದಲ್ಲಿ ಕೋಲಾರ ಗ್ರಾಮಾಂತರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಕಾಂತರಾಜ್, ಪಿಎಸ್‍ಐ ಭಾರತಿ, ಸಿಬ್ಬಂದಿ ಮುರಳಿ, ರಾಘವೇಂದ್ರ, ಶೇಖ್ ಸಾಧಿಕ್ ಪಾಷ, ರಾಜೇಶ್ ಅವರನ್ನು ಒಳಗೊಂಡ ವಿಶೇಷ ತಂಡವು ಕಾರ್ಯಾಚರಣೆ ನಡೆಸಿತ್ತು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿ, ಸಿಬ್ಬಂದಿ ಕಾರ್ಯವನ್ನು ಎಸ್‌ಪಿ ಶ್ಲಾಘಿಸಿದ್ದಾರೆ.

ಜ.1ರಂದು ಹರಟಿ ಗೇಟ್ ಬಳಿ ಅಪಹರಣ ₹ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಕೋಲಾರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.