ADVERTISEMENT

ಕಿಂಗ್‌ ಜಾರ್ಜ್‌ ಹಾಲ್‌: ಶತಮಾನ ಕಂಡ ಉದ್ಯಾನ ಈಗ ಕುಡುಕರ ಅಡ್ಡೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 5:47 IST
Last Updated 1 ಏಪ್ರಿಲ್ 2025, 5:47 IST
ಕೆಜಿಎಫ್‌ ರಾಬರ್ಟಸನ್‌ಪೇಟೆ ಉದ್ಯಾನದಲ್ಲಿ ಮುಂಜಾನೆ ಕಸಕ್ಕೆ ಬೆಂಕಿ ಹಾಕಿರುವುದು
ಕೆಜಿಎಫ್‌ ರಾಬರ್ಟಸನ್‌ಪೇಟೆ ಉದ್ಯಾನದಲ್ಲಿ ಮುಂಜಾನೆ ಕಸಕ್ಕೆ ಬೆಂಕಿ ಹಾಕಿರುವುದು   

ಕೆಜಿಎಫ್‌: ಶತಮಾನ ಕಂಡ ನಗರದ ಕಿಂಗ್‌ ಜಾರ್ಜ್‌ ಹಾಲ್‌ ಆವರಣದ ಉದ್ಯಾನ ದಿನೇ ದಿನೇ ಅಂದಗೆಡುತ್ತಿದ್ದು, ಕುಡುಕರ, ಪಡ್ಡೆ ಹುಡುಗರ ಅಡ್ಡೆಯಾಗಿ ಪರಿಣಮಿಸಿದೆ.

ರಾಬರ್ಟಸನ್‌ಪೇಟೆಯ ಮಧ್ಯಭಾಗದಲ್ಲಿರುವ ಕಿಂಗ್‌ ಜಾರ್ಜ್‌ ಹಾಲ್‌ ಮತ್ತು ಅದಕ್ಕೆ ಹೊಂದಿಕೊಂಡಿರುವ ಉದ್ಯಾನ ಮೊದಲಿನಿಂದಲೂ ನಗರದ ಜನತೆಯೊಂದಿಗೆ ಭಾವನಾತ್ಮಕ ನಂಟು ಹೊಂದಿದೆ. ನಗರದ ಹೃದಯಭಾಗದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಮಾಡುವುದಿದ್ದರೂ, ಕಿಂಗ್‌ ಜಾರ್ಜ್‌ ಹಾಲ್‌ ಮೊರೆ ಹೋಗಲಾಗುತ್ತಿತ್ತು. ಆದರೆ, ಈಗ ಕಿಂಗ್‌ ಜಾರ್ಜ್‌ ಹಾಲ್‌ ಇರುವ ಉದ್ಯಾನದ ನಿರ್ವಹಣೆ ಯಾರದು ಎನ್ನುವ ಗೊಂದಲ ಬಗೆಹರಿಯದ ಕಾರಣ ಉದ್ಯಾನ ಹಾಳಾಗಿ ಹೋಗಿದ್ದು, ಅದರ ಪ್ರಭಾವದಿಂದ ಕಿಂಗ್‌ ಜಾರ್ಜ್‌ ಹಾಲ್‌ ಕೂಡ ಮಂಕಾಗುತ್ತಿದೆ. ಕಸಕಡ್ಡಿಗಳ, ಗುಡ್ಡೆಗಳ ರಾಶಿ ಎಲ್ಲೆಂದರಲ್ಲಿ ಕಾಣುತ್ತಿದೆ. ನಾಲ್ಕು ಭಾಗಗಳಿಂದ ಕಸವನ್ನು ಉದ್ಯಾನದೊಳಗೆ ಎಸೆಯಲಾಗುತ್ತದೆ. ಮುಳ್ಳು ಮತ್ತು ಪಾರ್ಥೇನಿಯಂ ಗಿಡಗಳು ಯಥೇಚ್ಚವಾಗಿ ಬೆಳೆದಿವೆ. ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಸಿಗುತ್ತವೆ. ಗಾಂಜಾ ವ್ಯಸನಿಗಳ ತಾಣವಾಗಿದೆ. ಒಂದು ಕಾಲದಲ್ಲಿ ವಾಯುವಿಹಾರಕ್ಕೆ ಹೇಳಿ ಮಾಡಿಸಿದಂತಿದ್ದ ಉದ್ಯಾನ ಈಗ ಕಸ, ಮುಳ್ಳು, ಪೊದೆ, ಮದ್ಯದ ಬಾಟಲಿಗಳನ್ನು ತುಂಬಿಕೊಂಡು ಪಾಳು ಬಿದ್ದಿದೆ.

ಈಚೆಗೆ ಶಾಸಕಿ ರೂಪಕಲಾ ಅವರು ಎಸ್‌ಎಫ್‌ಸಿ ನಿಧಿಯಿಂದ ₹25 ಲಕ್ಷ ವೆಚ್ಚದಲ್ಲಿ ಉದ್ಯಾನದ ಅಭಿವೃದ್ಧಿ ಕಾಮಗಾರಿ ನಡೆಸಲು ಸೂಚಿಸಿದ್ದರು. ಇದರಿಂದ ಉದ್ಯಾನದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾಯಿತು. ಕಸ ಹಾಕಲು ತೊಟ್ಟಿ ಕಟ್ಟಲಾಯಿತು. ವಾಕಿಂಗ್‌ ಪಥ ಮಾಡಲು ಕಲ್ಲುಗಳನ್ನು ಹಾಕಲಾಯಿತು. ಅಲ್ಲಿಂದ ಮತ್ತೆ ಕಾಮಗಾರಿ ಮುಂದುವರಿಯಲೇ ಇಲ್ಲ. ಆಗಿರುವ ಕಾಮಗಾರಿಗಳೂ ಉಪಯೋಗಕ್ಕಿಲ್ಲ ಎನ್ನುವಂತಾಗಿದೆ. ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿದ್ದರೂ, ಒಂದು ದಿನ ಕೂಡ ಸಾರ್ವಜನಿಕ ಸೇವೆಗೆ ಮುಕ್ತಗೊಳ್ಳಲಿಲ್ಲ. ಕುಳಿತುಕೊಳ್ಳಲು ಹಾಕಿದ್ದ ಕಳಪೆ ಗುಣಮಟ್ಟದ ಸಿಮೆಂಟ್‌ ಬೆಂಚ್‌ಗಳು ನಿರ್ಮಾಣವಾದ ಕೆಲವೇ ದಿನಗಳಲ್ಲಿ ನೆಲ ಕಚ್ಚಿವೆ. 

ADVERTISEMENT

ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ, ಅನ್ಯ ದಾರಿ ಇಲ್ಲದೇ ಕೆಲವರು ಉದ್ಯಾನದಲ್ಲಿ ಮುಂಜಾನೆ ವಾಯು ವಿಹಾರಕ್ಕೆ ಬರುತ್ತಾರೆ. ನಗರಸಭೆ ಸಿಬ್ಬಂದಿ ಕಸದ ಗುಡ್ಡೆಗಳನ್ನು ಉದ್ಯಾನದಲ್ಲಿಯೇ ಹಾಕಿ ಬೆಂಕಿ ಹಾಕುತ್ತಾರೆ. ‘ಶುದ್ಧ ವಾತಾವರಣದಲ್ಲಿ ವಾಕಿಂಗ್‌ ಮಾಡಲು ಬಂದರೆ, ಇಲ್ಲಿ ಹೊಗೆಯಿಂದ ಅವರಿಸಿದ ಉದ್ಯಾನದಲ್ಲಿ ವಾಕಿಂಗ್‌ ಮಾಡುವ ಪರಿಸ್ಥಿತಿ ಬಂದಿದೆ’ ಎಂದು ವಾಯು ವಿಹಾರಕ್ಕೆ ಬಂದ ಜನ ಬೇಸರ ವ್ಯಕ್ತಪಡಿಸುತ್ತಾರೆ. 

ಕಿಂಗ್‌ ಜಾರ್ಜ್‌ ನೆನಪಿನ ಕಟ್ಟಡ

ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಬ್ರಿಟಿಷ್‌ ದೊರೆ ಕಿಂಗ್‌ ಜಾರ್ಜ್‌ ನೆನಪಿನಲ್ಲಿ ಕಟ್ಟಡವನ್ನು ಕಟ್ಟಲಾಗಿತ್ತು. ಇಂಗ್ಲೆಂಡಿನ ವಿಕ್ಟೋರಿಯಾ ಶೈಲಿಯಲ್ಲಿ 1911ರಲ್ಲಿ ನಿರ್ಮಾಣ ಶುರುವಾಗಿದ್ದು, ಆಗಿನ ಚಿನ್ನದ ಗಣಿಯ ಮಾಲೀಕ ಆರ್ಥುರ್‌ ಟೇಲರ್‌ ಕಟ್ಟಡವನ್ನು ಉದ್ಘಾಟಿಸಿದ್ದರು. ಇಂಗ್ಲೆಂಡಿನಲ್ಲಿರುವ ಹಾಲ್‌ ಗಳ ಶೈಲಿಯಲ್ಲಿಯೇ ಕಟ್ಟಡವನ್ನು ಕಟ್ಟಿದ್ದು, ಅದರಲ್ಲಿ ಟೆನ್ನಿಸ್‌, ಬಾಡ್ಮಿಂಟನ್‌, ಬಿಲಿಯರ್ಡ್‌, ಸ್ನೂಕರ್‌, ಕೇರಂ ಆಟಗಳಿಗೆ ಅನುಕೂಲ ಮಾಡಿಕೊಡಲಾಗಿತ್ತು. ಇಂದಿಗೂ ಅದೇ ಪರಂಪರೆ ನಡೆದುಕೊಂಡು ಬಂದಿದೆ. ಈಗ ಅದು ಕಾಸ್ಮೋಪಾಲಿಟನ್‌ ಕ್ಲಬ್‌ ಆಗಿ ಪರಿವರ್ತನೆಯಾಗಿದ್ದು, ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ಸ್ಥಳೀಯ ಕ್ಲಬ್‌ ಸದಸ್ಯರು ಪದಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ.

ಕಿಂಗ್‌ ಜಾರ್ಜ್‌ ಹಾಲ್‌ ನಿರ್ವಹಣೆಯಷ್ಟೇ ನಮ್ಮ ಜವಾಬ್ದಾರಿ. ಆದರೆ, ಉದ್ಯಾನದ ನಿರ್ವಹಣೆಗೂ ನಮಗೂ ಸಂಬಂಧವಿಲ್ಲ. ಇದರ ನಿರ್ವಹಣೆಗೆ ನಮಗೆ ನಗರಸಭೆಯಿಂದ ಸೂಚನೆ ಬಂದರೆ ನಿರ್ವಹಣೆ ಮಾಡುತ್ತೇವೆ
ಸುರೇಶ್‌ ನಾರಾಯಣ ಕುಟ್ಟಿ, ಕಾಸ್ಮೋಪಾಲಿಟನ್‌ ಕ್ಲಬ್‌ ಉಪಾಧ್ಯಕ್ಷ
ಉದ್ಯಾನದಲ್ಲಿ ಕಸಕ್ಕೆ ಬೆಂಕಿ ಹಾಕುವುದರಿಂದ ವಾತಾವರಣ ಹದಗೆಡುತ್ತಿದೆ. ವಾಯುವಿಹಾರಕ್ಕೆ ಬಂದವರು ವಿಷಗಾಳಿ ಸೇವಿಸುವಂತಾಗಿದೆ. ಇದನ್ನು ತಡೆಯಲು ನಗರಸಭೆ ಅಧಿಕಾರಿಗಳು ಕ್ರಮ ವಹಿಸಬೇಕು.
ಪ್ರಸನ್ನ ರೆಡ್ಡಿ, ನಿವಾಸಿ
ಕಿಂಗ್‌ ಜಾರ್ಜ್‌ ಹಾಲ್‌ ಸರ್ಕಾರದ ಆಸ್ತಿಯಾಗಿದೆ. ಅದರಲ್ಲಿ ಬರುವ ಆದಾಯದಲ್ಲಿ ಉದ್ಯಾನವನ್ನು ನಿರ್ವಹಣೆ ಮಾಡುವಂತೆ ಕಾಸ್ಮೋಪಾಲಿಟನ್‌ ಕ್ಲಬ್‌ಗೆ ಪತ್ರ ಬರೆಯಲಾಗಿದೆ. ಕ್ಲಬ್‌ ಪದಾಧಿಕಾರಿಗಳು ಒಪ್ಪಿದ್ದಾರೆ. ಇನ್ನುಮುಂದೆ ಇದರ ನಿರ್ವಹಣೆ ಕಾಸ್ಮೋಪಾಲಿಟನ್‌ ಕ್ಲಬ್‌ಗೆ ಒಳಪಡಲಿದೆ.
ಪವನ್‌ಕುಮಾರ್‌, ಆಯುಕ್ತ 
ನಿರುಪಯುಕ್ತ ಶೌಚಾಲಯ
ಕಿಂಗ್‌ ಜಾರ್ಜ್‌ ಹಾಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.