ಕೋಲಾರ: ರಾಜ್ಯ ಸರ್ಕಾರವು ಅಭಿವೃದ್ಧಿಗೆ ತಕ್ಕಂತೆ ಅನುದಾನ ಕಲ್ಪಿಸುತ್ತಿದ್ದು, ತಾಲ್ಲೂಕಿನಾದ್ಯಂತ ಅಗತ್ಯವಿರುವ ಗ್ರಾಮಗಳಲ್ಲಿ ಮಾದರಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ನಗರದ ಮುನೇಶ್ವರ ನಗರ ವ್ಯಾಪ್ತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಿರ್ಮಾಣ ಮಾಡಲಾಗಿರುವ ಅಂಗನವಾಡಿ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಗರದ ಹೃದಯ ಭಾಗದಲ್ಲಿ ಮಾದರಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕೇಂದ್ರದ ಮುಂದೆ ಖಾಲಿಯಿರುವ ನಿವೇಶನದಲ್ಲಿ ಮಕ್ಕಳ ಆಟಿಕೆ ಸಾಮಗ್ರಿಗಳನ್ನು ಅಳವಡಿಸಲಾಗುವುದು ಎಂದರು.
ಇಡೀ ರಾಜ್ಯದಲ್ಲಿ ಮೈಸೂರು ನಂತರ ಕೋಲಾರ ತಾಲ್ಲೂಕಿಗೆ ದೊಡ್ಡ ಮೊತ್ತದಲ್ಲಿ ಅನುದಾನ ದೊರೆತಿದೆ. ನಮ್ಮೆಲ್ಲ ಆದ್ಯತೆ ಇರುವುದು ಅಭಿವೃದ್ಧಿಯತ್ತ. ಟೀಕೆ ಮಾಡುವವರು ಬಂದು ಅಭಿವೃದ್ಧಿ ಕುರಿತು ಪ್ರಶ್ನಿಸಿದರೆ ದಾಖಲೆ ಸಮೇತ ಉತ್ತರ ಕೊಡುತ್ತೇವೆ ಎಂದು ಹೇಳಿದರು.
ಆರ್‍ಎಸ್‍ಎಸ್ ಬಗ್ಗೆ ಬಿಜೆಪಿ, ಕಾಂಗ್ರೆಸ್ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದು ನಮಗೆ ಬೇಡ. ಎಲ್ಲಿ ಅಂಗನವಾಡಿ ಬೇಕು, ಅಭಿವೃದ್ಧಿ ಆಗಬೇಕಾಗಿರುವ ಬಗ್ಗೆ ಕೇಳಲಿ, ತೋರಿಸಲಿ, ನಮ್ಮನ್ನು ಕರೆದುಕೊಂಡು ಹೋಗಿ ಇಂತಹದ್ದೇ ಕೆಲಸ ಆಗಬೇಕು ಅಂತ ಹೇಳಲಿ, ಮಾಡದಿದ್ದಾಗ ಏಕೆ ಎಂದು ಪ್ರಶ್ನೆ ಮಾಡಿದರೆ ಉತ್ತರ ಕೊಡುತ್ತೇವೆ. ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ‘ನಾನು ಸೇರಿದಂತೆ ಇನ್ನೊಬ್ಬರು ಹೇಳುವುದು ಸುಳ್ಳು. ಈ ವಿಚಾರವೆಲ್ಲ ಹೈಕಮಾಂಡ್‍ಗೆ ಬಿಟ್ಟ ವಿಚಾರ. ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಖಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಕುಳಿತು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾವೆಲ್ಲ ಬದ್ಧ. ಇನ್ನು ಸಿಎಂ ಬದಲಾವಣೆಗೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ’ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಸದಸ್ಯರಾದ ರಾಕೇಶ್, ಗುಣಶೇಖರ್, ಭಾಗ್ಯಮ್ಮ, ರಫಿಕ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲ್, ಮುಖಂಡರಾದ ಜೆ.ಕೆ.ಜಯರಾಮ್, ರಾಜಣ್ಣ ಇದ್ದರು.