ADVERTISEMENT

ಕೋಚಿಮುಲ್ ಅವ್ಯವಹಾರ: ಮುಖಾಮುಖಿ ಚರ್ಚೆಗೆ ಸಿದ್ಧ

ಕೈ.ವೈ ನಂಜೇಗೌಡಗೆ ಎಸ್‌.ಎನ್‌ ನಾರಾಯಣಸ್ವಾಮಿ ಸವಾಲು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 14:35 IST
Last Updated 13 ಏಪ್ರಿಲ್ 2025, 14:35 IST
ಬಂಗಾರಪೇಟೆ ತಾಲ್ಲೂಕಿನ ಎಸ್ ಜಿ ಕೋಟೆ ಗ್ರಾಮದ ಪ್ರಶಾಂತ ನಗರದಲ್ಲಿ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಬಂಗಾರಪೇಟೆ ತಾಲ್ಲೂಕಿನ ಎಸ್ ಜಿ ಕೋಟೆ ಗ್ರಾಮದ ಪ್ರಶಾಂತ ನಗರದಲ್ಲಿ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು   

ಬಂಗಾರಪೇಟೆ: ಕೋಚಿಮುಲ್‌ನಲ್ಲಿ ನಡೆದಿರುವ ಅವ್ಯವಹಾರ ಕುರಿತು ದಾಖಲೆಗಳೊಂದಿಗೆ ಮುಖಾಮುಖಿ ಚರ್ಚೆಗೆ ಸಿದ್ಧ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸವಾಲು ಹಾಕಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಲೂರು ಶಾಸಕ ಹಾಗೂ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾಧ್ಯಮಗಳಲ್ಲಿ ಆರೋಪಿಸಿರುವ ಕುರಿತು ಸ್ಪಷ್ಟೀಕರಣ ನೀಡಿದರು.

ಕೋಚಿಮುಲ್‌ನ ಗೋಲ್ಡನ್ ಡೇರಿ ನಿರ್ಮಾಣ, ಸೋಲಾರ್ ಘಟಕ ನಿರ್ಮಾಣ, ಹಾಲು ಸಾಗಾಣಿಕೆ, ಪ್ರಯಾಣ ಭತ್ಯೆಗಳಲ್ಲಿ ಮಾಡಿರುವ ಭ್ರಷ್ಟಾಚಾರದ ಎಲ್ಲ ದಾಖಲೆಗಳನ್ನು ಪಡೆಯಲಾಗಿದೆ. ಹಾಲು ಉತ್ಪಾದಕರ ಒಕ್ಕೂಟ ರೈತರ ಸಂಸ್ಥೆಯಾಗಿದ್ದು ಈ ಸಂಸ್ಥೆಯನ್ನು ಯಾವ ರೀತಿ ಹಾಳು ಮಾಡಿದ್ದಾರೆ ಹಾಗೂ ಅನಗತ್ಯವಾಗಿ ನೂರಾರು ಕೋಟಿ ಖರ್ಚು ಮಾಡಿದ್ದಾರೆ ಎಂಬುದರ ಬಗ್ಗೆ ಅಂಕಿ–ಅಂಶ ಸಮೇತ ದಾಖಲೆ ನೀಡುವುದಾಗಿ ಹೇಳಿದರು.

ADVERTISEMENT

ಕೋಚಿಮುಲ್‌ನಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ಮಾಡಿರುವ ಆರೋಪ ಸುಳ್ಳಾದರೆ ಕಾನೂನು ‌ಹೋರಾಟ ಮಾಡಲಿ ಎಂದರು. ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳುವವರು ಯಾರು ಬೇಕಾದರೂ ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು.

ರೈತಾಪಿ ವರ್ಗದವರು ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರು ಕಷ್ಟಪಟ್ಟು ದುಡಿದಿರುವ ಹಣದಲ್ಲಿ ಭ್ರಷ್ಟಾಚಾರ ನಡೆಸಿರುವುದು ಶೋಭೆಯಲ್ಲ. ಇದು ಕೋಲಾರ ಜಿಲ್ಲೆ ಉತ್ಪಾದಕರಿಗೆ ಮಾಡಿರುವ ಮಹಾ ಮೋಸ ‌ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರ ಶಾಸಕ ಕೊತ್ತೂರು ಮಂಜುನಾಥ ಹೇಳಿಕೆ ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಉಸ್ತುವಾರಿ ಸಚಿವರು ಭೇಟಿ ನೀಡಿದಾಗ ಪರಸ್ಪರ ತಬ್ಬಿಕೊಳ್ಳುತ್ತಾರೆ. ಈಗ ಅವರ ಮೇಲೆ ಆಪಾದನೆಗಳನ್ನು ಮಾಡುತ್ತಾರೆ ಎಂದು ಆರೋಪಿಸಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಲಗೈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಎರಡು ಜಿಲ್ಲೆಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಲು ಸಮುದಾಯದ ಪಾತ್ರ ಪ್ರಮುಖವಾಗಿದೆ. ದಲಿತ ಸಮುದಾಯದ ಬಲಗೈ ಶಾಸಕನಾದ ನಾನು ಸಮುದಾಯದ ಪರವಾಗಿ ಹೋರಾಟದ ಮಾಡುವುದು ಜವಾಬ್ದಾರಿಯಾಗಿದೆ. ಕೋಚಿಮುಲ್ ನಡೆದಿರುವ ಅಕ್ರಮ ಬಗ್ಗೆ ಧ್ವನಿ ಎತ್ತಿದ್ದೇನೆ. ಯಾರ ಮೇಲೆಯೂ ವ್ಯಕ್ತಿಗತವಾಗಿ ಆಪಾದನೆ ಮಾಡುತ್ತಿಲ್ಲ. ರೈತರಿಗೆ ಮಾಡಿರುವ ಮೋಸದ ಬಗ್ಗೆ ಪ್ರಶ್ನೆ ಮಾಡುತ್ತಿದ್ದೇನೆ. ನ್ಯಾಯ ಸಿಗುವ ತನಕ ಹಾಲು ಉತ್ಪಾದಕರ ಪರ ಹೋರಾಟವನ್ನು ಮುಂದುವರಿಸುದಾಗಿ’ಎಚ್ಚರಿಕೆ ನೀಡಿದರು

ಗೋಪಾಲ ರೆಡ್ಡಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅಂಬರೀಶ್, ದೇಶಿಹಳ್ಳಿ ವೆಂಕಟರಾಮಣ್ಣ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಕೃಷ್ಣೇಗೌಡ, ಮಹೇಂದ್ರ,ನಾರಾಯಣಸ್ವಾಮಿ, ಚಂದ್ರಶೇಖರ್ ,ವಿಜಯ್ ಕುಮಾರ್, ಮುನಿರಾಜು ಉಪಸ್ಥಿತರಿದ್ದರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.