ADVERTISEMENT

ಆಶಾ ಕಾರ್ಯಕರ್ತೆಯರಿಂದ ₹ 10 ಸಾವಿರ ಗೌರವಧನಕ್ಕೆ ಆಗ್ರಹ

ಜಿಲ್ಲಾ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ, ಡಿಎಚ್‌ಒಗೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 3:14 IST
Last Updated 26 ಜುಲೈ 2025, 3:14 IST
ಕೋಲಾರದಲ್ಲಿ ಶುಕ್ರವಾರ ನಡೆದ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿದರು
ಕೋಲಾರದಲ್ಲಿ ಶುಕ್ರವಾರ ನಡೆದ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿದರು    

ಕೋಲಾರ: ಪ್ರೋತ್ಸಾಹಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಆಶಾ ಕಾರ್ಯಕರ್ತೆಯರು ನಗರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆ ಆಸ್ಪತ್ರೆ ಮುಂದೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಮುಂಭಾಗದಿಂದ ಎಸ್‌ಎನ್‌ಆರ್‌ ಆಸ್ಪತ್ರೆ ವರೆಗೆ ಬಿತ್ತಿಪತ್ರ ಹಿಡಿದು ಘೋಷಣೆ ಕೂಗುತ್ತಾ ರಾಲಿಯಲ್ಲಿ ತೆರಳಿದರು

ಕರ್ನಾಟಕ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ‘ಜನವರಿ 7ರಿಂದ 10ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಜರುಗಿದ ಬೃಹತ್ ಅನಿರ್ದಿಷ್ಟ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಒಟ್ಟಾರೆ ಪ್ರೋತ್ಸಾಹಧನ ಸೇರಿ ₹ 10 ಸಾವಿರ ನಿಗದಿ ಮಾಡಲಾಗುವುದೆಂದು ಮುಖ್ಯಮಂತ್ರಿ ಘೋಷಿಸಿದ್ದರು. ಆದರೆ, ಆ ಭರವಸೆ ಈಡೇರಿಲ್ಲ’ ಎಂದರು.

ADVERTISEMENT

‘ಬಜೆಟ್‍ನಲ್ಲಿ ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಈಗಾಗಲೇ ₹ 1 ಸಾವಿರ ಘೋಷಣೆಯಾಗಿದ್ದು, ಇಲ್ಲಿಯವರೆಗೆ ಯಾವುದನ್ನು ಜಾರಿಗೊಳಿಸದೆ ಅನ್ಯಾಯ ಮಾಡಿದ್ದಾರೆ. ಜೊತೆಗೆ ತಾರತಮ್ಯವೆಸಗುತ್ತಿದ್ದಾರೆ’ ಎಂದು ದೂರಿದರು.

‘ಜನರ ಒಡನಾಡಿಗಳಾಗಿರುವ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ಮತ್ತು ಇಲಾಖೆ ಕಡೆಗಣಿಸುತ್ತಿವೆ. ಸಂಘಟನೆಯು ಇದನ್ನು ತೀವ್ರವಾಗಿ ಖಂಡಿಸುತ್ತದೆ. 17 ವರ್ಷ ಅತ್ಯಂತ ಯಶಸ್ವಿ ಆರೋಗ್ಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಆಶಾ ಕಾರ್ಯಕರ್ತೆಯರು ಗ್ರಾಮದ ತಳ ಸಮುದಾಯದ ಒಡನಾಡಿಗಳಾಗಿದ್ದಾರೆ. ಅಂತಹ ಕಾರ್ಯಕರ್ತೆಯರನ್ನು ಕೆಲಸದಿಂದ ಕೈ ಬಿಡಲಾಗುವುದು ಎನ್ನುವ ಸಂದೇಶಗಳನ್ನು ತಲುಪಿಸುತ್ತಿರುವ ಇಲಾಖೆಯ ಕ್ರಮವನ್ನು ಖಂಡಿಸುತ್ತೇವೆ’ ಎಂದರು.

‘60 ವರ್ಷ ಪೂರೈಸಿದ ಆಶಾ ಕಾರ್ಯಕರ್ತೆಯರನ್ನು ದಿಢೀರನೆ ಕರ್ತವ್ಯದಿಂದ ಬಿಡುಗಡೆಗೊಳಿಸಿ ಅವರಿಗೆ ಯಾವುದೇ ಪರಿಹಾರವನ್ನು ನೀಡದಿರುವುದನ್ನು ಖಂಡಿಸುತ್ತೇವೆ. ಇದರೊಂದಿಗೆ ಆಶಾ ಸುಗಮಕಾರರನ್ನು ಕೈಬಿಟ್ಟಿರುವ ಕ್ರಮವೂ ಸರಿ ಅಲ್ಲ. ಆದ್ದರಿಂದ ಸರ್ಕಾರ ಕೂಡಲೇ ಮಾಸಿಕ ಕನಿಷ್ಠ ₹ 10 ಸಾವಿರ ಗೌರವಧನ ನೀಡುವ ಆದೇಶವನ್ನು ಹೊರಡಿಸಬೇಕು’ ಎಂದು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗಾಗಿ ಮುಂದಿನ ದಿನಗಳಲ್ಲಿ ಉನ್ನತ ಹಂತದ ಹೋರಾಟಕ್ಕೆ ಎಲ್ಲರೂ ಸಜ್ಜಾಗಬೇಕೆಂದು ಕರೆ ನೀಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಪತ್ರವನ್ನು ಸ್ವೀಕರಿಸಿದರು.

ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಶ್ರೀಕಾಂತ, ಜಿಲ್ಲಾ ಮುಖಂಡರಾದ ವಿಶ್ವನಾಥ್, ಸಂಘಟನೆಯ ಜಿಲ್ಲಾಧ್ಯಕ್ಷೆ ಸುಜಾತಾ, ಆಶಾ ಕಾರ್ಯಕರ್ತೆಯರ ಮುಖಂಡರಾದ ಕಲಾವತಿ, ಯಶೋಧಾ, ಗಾಯತ್ರಿ, ರತ್ನಾ, ಪ್ರೇಮಲತಾ, ಅನಿತಾ ಹೋರಾಟದ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.