ADVERTISEMENT

ಅಬ್ಬಬ್ಬಾ, 43.5 ಡಿಗ್ರಿ ಸೆಲ್ಸಿಯಸ್‌!

ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಕೋಲಾರದಲ್ಲಿ ಅತ್ಯಧಿಕ; ಸಹಿಸಿಕೊಳ್ಳಲಾರದಷ್ಟು ಬಿಸಿಲು–ದಾಖಲೆ

​ಪ್ರಜಾವಾಣಿ ವಾರ್ತೆ
Published 3 ಮೇ 2024, 6:36 IST
Last Updated 3 ಮೇ 2024, 6:36 IST
ಕೋಲಾರ ನಗರದಲ್ಲಿ ಬಿರು ಬಿಸಿಲಿನಲ್ಲಿ ಹೆಜ್ಜೆ ಹಾಕಿದ ವಿದ್ಯಾರ್ಥಿನಿಯರು
ಕೋಲಾರ ನಗರದಲ್ಲಿ ಬಿರು ಬಿಸಿಲಿನಲ್ಲಿ ಹೆಜ್ಜೆ ಹಾಕಿದ ವಿದ್ಯಾರ್ಥಿನಿಯರು   

ಕೋಲಾರ: ಜಿಲ್ಲೆಯಲ್ಲಿ ಉಷ್ಣಾಂಶ ಪ್ರಮಾಣ ದಾಖಲೆಯ 43.5 ಡಿಗ್ರಿ ಸೆಲ್ಸಿಯಸ್‌ಗೆ ಏರಿದ್ದು, ಜನರು ತಳಮಳಕ್ಕೆ ಒಳಗಾಗಿದ್ದಾರೆ.

ಕಳೆದ ಏಳೆಂಟು ವರ್ಷಗಳಲ್ಲಿ ಇದು ಅತ್ಯಧಿಕ ಪ್ರಮಾಣದ ತಾಪಮಾನವಾಗಿದ್ದು, ದಾಖಲೆ ಬರೆದಿದೆ. ಮನೆಯೊಳಗೂ ಇರಲಾಗದ, ಹೊರಗೂ ಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಉತ್ತರ ಕರ್ನಾಟಕದ ಜಿಲ್ಲೆಗಳ ಸಾಲಿಗೆ ಕೋಲಾರವೂ ಸೇರ್ಪಡೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಂಡು ಕೇಳರಿಯದ ತಾಪಮಾನ ಇದಾಗಿದೆ.

ದಕ್ಷಿಣ ಕರ್ನಾಟಕದ ಒಳನಾಡಿ ಜಿಲ್ಲೆಗಳಲ್ಲಿ ಕೋಲಾರ ಜಿಲ್ಲೆಯಲ್ಲಿ ಅತ್ಯಧಿಕ ಬಿಸಿಲು ಇದ್ದು, ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಲೆನಾಡು ಜಿಲ್ಲೆಗಳು ಹಾಗೂ ಕರಾವಳಿ ಪ್ರದೇಶಗಳಲ್ಲಿನ ಉಷ್ಣಾಂಶಕ್ಕೆ ಹೋಲಿಸಿದರೂ ಕೋಲಾರದಲ್ಲೇ ಅತ್ಯಧಿಕ. ಭೂಮಿ ಕಾದ ಕೆಂಡದಂತಾಗಿದೆ. 

ADVERTISEMENT

ಮೇ 1ರಂದು ಪಕ್ಕದ ಜಿಲ್ಲೆಗಳಾದ ಚಿಕ್ಕಬಳ್ಳಾಪುರದಲ್ಲಿ 41.2, ಬೆಂಗಳೂರು ಗ್ರಾಮಾಂತರದಲ್ಲಿ 40.6, ಬೆಂಗಳೂರು ನಗರದಲ್ಲಿ 41.1, ತುಮಕೂರಿನಲ್ಲಿ 41.7 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ಉತ್ತರ ಕರ್ನಾಟಕದ ಒಳನಾಡಿನ ಪ್ರದೇಶಗಳಾದ ರಾಯಚೂರು (46.7), ಕಲಬುರಗಿ (46.1), ಯಾದಗಿರಿ (46), ಬಳ್ಳಾರಿ (44.4), ಕೊಪ್ಪಳ (44), ವಿಜಯಪುರ (43.9), ಬೀದರ್ (43.6) ಹೊರತುಪಡಿಸಿದರೆ ಕೋಲಾರ ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ.

ರಾಜ್ಯ ಮಟ್ಟದಲ್ಲಿ ಗಮನಿಸುವುದಾದರೆ ಈ ವರ್ಷ ಸರಾಸರಿ 46.70 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ನಗರದ ಜ್ಯೂಸ್‌ ಅಂಗಡಿಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ರಸ್ತೆ ಬದಿಯೂ ಜ್ಯೂಸ್‌ ಅಂಗಡಿಗಳು ಹೊಸದಾಗಿ ತೆರೆದುಕೊಂಡಿವೆ. ತಾಟಿನಿಂಗು ಹಣ್ಣಿನ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚಿದ್ದು, ಭರ್ಜರಿ ಮಾರಾಟ ನಡೆಯುತ್ತಿದೆ. ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳ ಜ್ಯೂಸ್‌, ಐಸ್‌ ಕ್ರೀಂ, ಐಸ್‌ ಕ್ಯಾಂಡಿ, ಕಬ್ಬಿನ ಹಾಲು, ಸೋಡಾಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಬರಿಗಾಲಿನಲ್ಲಿ ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗದಷ್ಟು ಬಿಸಿಲು ಇದೆ. ಚಪ್ಪಲಿ ಅಥವಾ ಶೂ ಧರಿಸದಿದ್ದರೆ ತಾರಸಿ ಮೇಲೆ ನಡೆದಾಡಲು ಅಸಾಧ್ಯ. ಫ್ಯಾನ್‌, ಹವಾನಿಯಂತ್ರಿತ ಯಂತ್ರ ಅಥವಾ ಕೂಲರ್‌ ಇಲ್ಲದಿದ್ದರೆ ಮನೆಯೊಳಗೆ ಕೂರಲು, ಮಲಗಲು ಸಾಧ್ಯವಾಗದ ಪರಿಸ್ಥಿತಿ ನೆಲೆಸಿದೆ. ಶಿಶುಗಳು, ಮಕ್ಕಳನ್ನು ಸಮಾಧಾನಪಡಿಸಲು ತಾಯಂದಿರಿಗೆ ದೊಡ್ಡ ಸವಾಲು ಎದುರಾಗಿದೆ.

ನಗರದಲ್ಲಿ ವಿವಿಧ ಕೆಲಸಕ್ಕೆ ಬರುವವರು, ವಿದ್ಯಾರ್ಥಿಗಳು ತಲೆಗೆ ಮುಸುಕು ಹಾಕಿಕೊಂಡು ಅಥವಾ ಛತ್ರಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾಣಿ, ಪಕ್ಷಿಗಳು, ಬಿಡಾಡಿ ದನಕರುಗಳು, ಬೀದಿನಾಯಿಗಳೂ ಬಿಸಿಲಿನಿಂದ ಬಳಲುತ್ತಿವೆ. ಗಿಡ ಮರಗಳು ಒಣಗುತ್ತಿವೆ. 

ಕೋಲಾರ ನಗರದ ಜ್ಯೂಸ್‌ ಅಂಗಡಿಯೊಂದರಲ್ಲಿ ಜನರು
ಕೋಲಾರದ ರಸ್ತೆಯಲ್ಲಿ ಓಡಾಡುತ್ತಿದ್ದ ದನ ಕರುಗಳಿಗೆ ನೀರುಣಿಸಿದ ಮಹಿಳೆಯರು
ಕೋಲಾರದಲ್ಲಿ ತಾಟಿನಿಂಗು ಹಣ್ಣಿನ ಮಾರಾಟದಲ್ಲಿ ತೊಡಗಿದ್ದ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.