ADVERTISEMENT

ಕೋಲಾರ: ₹2 ಕೋಟಿ ಗ್ರಂಥಾಲಯ ಸೆಸ್‌ ಬಾಕಿ...

ಪಾವತಿಗೆ ನಗರಸಭೆ, ಪುರಸಭೆಗಳು ಹಿಂಜರಿಕೆ; ಜಿಲ್ಲೆಯ ಗ್ರಂಥಾಲಯಗಳ ನಿರ್ವಹಣೆಗೂ ಸಂಕಷ್ಟ

ಕೆ.ಓಂಕಾರ ಮೂರ್ತಿ
Published 24 ಆಗಸ್ಟ್ 2024, 6:52 IST
Last Updated 24 ಆಗಸ್ಟ್ 2024, 6:52 IST
ಕೋಲಾರ ಜಿಲ್ಲಾ ಕೇಂದ್ರ ಗ್ರಂಥಾಲಯ
ಕೋಲಾರ ಜಿಲ್ಲಾ ಕೇಂದ್ರ ಗ್ರಂಥಾಲಯ   

ಕೋಲಾರ: ಜಿಲ್ಲೆಯ ಎರಡು ನಗರಸಭೆ ಹಾಗೂ ಮೂರು ಪುರಸಭೆಗಳು ಸುಮಾರು ₹ 2.03 ಕೋಟಿ ಸೆಸ್‌ ಬಾಕಿ ಉಳಿಸಿಕೊಂಡಿದ್ದು, ಗ್ರಂಥಾಲಯಗಳ ಅಭಿವೃದ್ಧಿಗೆ ದೊಡ್ಡ ಹೊಡೆತ ಬಿದ್ದಿದೆ.

ಸೆಸ್‌ ಪಾವತಿಸಲು ಸ್ಥಳೀಯ ಸಂಸ್ಥೆಗಳು ಐದಾರು ವರ್ಷಗಳಿಂದ ಹಿಂದೇಟು ಹಾಕುತ್ತಿವೆ. ಕಾಲಕ್ಕೆ ತಕ್ಕಂತೆ ಪಾವತಿಸದೆ ಬಾಕಿ ಮೊತ್ತ ಹೆಚ್ಚುತ್ತಾ ಸಾಗಿದೆ. ಹೀಗಾಗಿ, ಗ್ರಂಥಾಲಯ ಇಲಾಖೆಯಿಂದ ಜಿಲ್ಲೆಯಲ್ಲಿ ಹೊಸ ಕಟ್ಟಡ ನಿರ್ಮಾಣ ಹಾಗೂ ಸಂಚಾರ ಗ್ರಂಥಾಲಯ ವಾಹನ ಖರೀದಿ ಸಾಧ್ಯವಾಗುತ್ತಿಲ್ಲ. ಈಗಿರುವ ಗ್ರಂಥಾಲಯಗಳ ನಿರ್ವಹಣೆಯೂ ಕಷ್ಟಕರವಾಗಿ ಪರಿಣಮಿಸಿದೆ. ಹೊಸ ಪುಸ್ತಕಗ‌ಳ ಖರೀದಿಗೂ ಹಿನ್ನಡೆ ಉಂಟಾಗಿದೆ. ದುರದೃಷ್ಟಕರವೆಂದರೆ ಜಿಲ್ಲೆಯಲ್ಲಿ ಸಂಚಾರ ಗ್ರಂಥಾಲಯವೇ ಇಲ್ಲ. 

ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ಕರ ಪಾವತಿಸುವಂತೆ ಜಿಲ್ಲಾ ಕೇಂದ್ರ ಗ್ರಂಥಾಲಯ ಹೆಚ್ಚುವರಿ ಪ್ರಭಾರ ಉಪನಿರ್ದೇಶಕ ಸಿ.ಗಣೇಶ್‌ ಹಲವು ಬಾರಿ ಪತ್ರ ಬರೆದರೂ ಪ್ರಯೋಜವಾಗಿಲ್ಲ. ಅಲ್ಲದೇ, ಈ ವಿಚಾರ ಪ್ರಸ್ತಾಪಿಸಲು ಈ ವರ್ಷ ಗ್ರಂಥಾಲಯ ಪ್ರಾಧಿಕಾರದ ಸಭೆಯೂ ನಡೆದಿಲ್ಲ.

ADVERTISEMENT

ಮುಳಬಾಗಿಲು ನಗರಸಭೆ, ಕೋಲಾರ ನಗರಸಭೆ, ಶ್ರೀನಿವಾಸಪುರ ಪುರಸಭೆ, ಮಾಲೂರು ಪುರಸಭೆ ಹಾಗೂ ಬಂಗಾರಪೇಟೆ ಪುರಸಭೆಗಳು ಸರಿಯಾಗಿ ಸೆಸ್‌ ಪಾವತಿಸುತ್ತಿಲ್ಲ. ಕೆಜಿಎಫ್‌ ನಗರಸಭೆಯೂ ಕರ ಬಾಕಿ ಉಳಿಸಿಕೊಂಡಿದೆ. ಇದಕ್ಕೆ ಪ್ರತ್ಯೇಕ ಕೇಂದ್ರವಿದ್ದು, ಜಿಲ್ಲಾ ಕೇಂದ್ರ ಗ್ರಂಥಾಲಯದಡಿ ಬರುವುದಿಲ್ಲ.

‘ಸ್ಥಳೀಯ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಸೆಸ್‌ ದೊರೆತಲ್ಲಿ ಗ್ರಂಥಾಲಯ ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ, ಹೊಸ ಕಟ್ಟಡ ನಿರ್ಮಾಣ ಮಾಡಬಹುದು. ನೌಕರರ ವೇತನ ಹೊರತುಪಡಿಸಿ ಸರ್ಕಾರದಿಂದ ಗ್ರಂಥಾಲಯ ಇಲಾಖೆಗೆ ಯಾವುದೇ ನೇರ ಅನುದಾನ ಬರುವುದಿಲ್ಲ. ವಿದ್ಯುತ್‌, ನೀರಿನ ಶುಲ್ಕ ಕೂಡ ನಾವೇ ಪಾವತಿಸಬೇಕು. ಹೀಗಾಗಿ, ಸಂಪೂರ್ಣವಾಗಿ ಸ್ಥಳೀಯ ಸಂಸ್ಥೆಗಳ ಹಣದ ಮೇಲೆ ಅವಲಂಬಿತರಾಗಿದ್ದೇವೆ’ ಎಂದು ಗಣೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸಾರ್ವಜನಿಕ ಗ್ರಂಥಾಲಯ ಕಾಯ್ದೆ–1965’ ನಿಯಮ 30ರ ಪ್ರಕಾರ ಸ್ಥಳೀಯ ಸಂಸ್ಥೆಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಆಸ್ತಿ ತೆರಿಗೆಯ ಶೇ 6ರಷ್ಟನ್ನು ಗ್ರಂಥಾಲಯಗಳ ಅಭಿವೃದ್ಧಿಗೆ ನೀಡಬೇಕು.

ಸ್ಥಳೀಯ ಸಂಸ್ಥೆಗಳಿಂದ ನಿಯಮಿತವಾಗಿ ಸೆಸ್‌ ಬಂದರೆ ಓದುವ ಸಂಸ್ಕೃತಿ ಹೆಚ್ಚಿಸಲು, ಮೂಲಸೌಕರ್ಯ ಒದಗಿಸಲು, ಹೊಸ ಹೊಸ ಪುಸ್ತಕ ಖರೀದಿಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಜಿಲ್ಲೆಯ ಓದುಗರು.

ರಾಜ್ಯದಲ್ಲಿ ಸೆಸ್‌ ವ್ಯವಸ್ಥೆ ಇದೆ. ಆಂಧ್ರಪ್ರದೇಶ, ಕೇರಳ, ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರದಿಂದ ಗ್ರಂಥಾಲಯ ಇಲಾಖೆಗೆ ನೇರ ಅನುದಾನ ಬರುತ್ತದೆ.

ಜಿಲ್ಲೆಯಲ್ಲಿ ಒಟ್ಟು 182 ಗ್ರಂಥಾಲಯಗಳಿದ್ದು, ಅವುಗಳಲ್ಲಿ ಗ್ರಂಥಾಲಯ ಇಲಾಖೆಯಡಿ 25 ಘಟಕಗಳಿವೆ. ಇನ್ನುಳಿದ 157 ಗ್ರಂಥಾಲಯಗಳು ಗ್ರಾಮ ಪಂಚಾಯಿತಿ ಸುಪರ್ದಿಯಲ್ಲಿವೆ. ಗ್ರಂಥಾಲಯ ಇಲಾಖೆಯಿಂದ ಜಿಲ್ಲೆಯಲ್ಲಿ 5 ಸ್ವಂತ ಕಟ್ಟಡ, 3 ಬಾಡಿಗೆ ಕಟ್ಟಡ ಹಾಗೂ 17 ವಿವಿಧ ಇಲಾಖೆಗಳು ನೀಡಿದ ಉಚಿತ ಕಟ್ಟಡದಲ್ಲಿ ಗ್ರಂಥಾಲಯಗಳು ನಡೆಯುತ್ತಿವೆ.

ಕೋಲಾರದ ಅಂಬೇಡ್ಕರ್‌ ನಗರ, ಬಂಗಾರಪೇಟೆಯ ರಾಮಲಿಂಗಪುರ (ಅಲೆಮಾರಿ ಗ್ರಂಥಾಲಯ), ಮುಳಬಾಗಿಲಿನ ಕೊಂಡಪಲ್ಲಿಯಲ್ಲಿ (ಅಲೆಮಾರಿ ಗ್ರಂಥಾಲಯ) ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ಪುಸ್ತಕ
ಸೆಸ್ ಪಾವತಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ನಾನು ಹಲವಾರು ಬಾರಿ ಪತ್ರ ಬರೆದು ಮನವಿ ಮಾಡಿದ್ದೇನೆ. ಜಿಲ್ಲಾಧಿಕಾರಿ ಮೂಲಕವೂ ಹೇಳಿಸಿದ್ದೇನೆ. ಮುಂದಿನ ಸಭೆಯಲ್ಲೂ ಪ್ರಸ್ತಾಪಿಸುತ್ತೇನೆ
ಸಿ.ಗಣೇಶ್‌ ಹೆಚ್ಚುವರಿ ಪ್ರಭಾರ ಉಪನಿರ್ದೇಶಕ ಜಿಲ್ಲಾ ಗ್ರಂಥಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.