ಶ್ರೀನಿವಾಸಪುರ: ಪಟ್ಟಣದಲ್ಲಿ ಶುಕ್ರವಾರ ಸುರಿದ ಮಳೆಯಿಂದಾಗಿ ಅಂಬೇಡ್ಕರ್ ಪಾಳ್ಯ, ಗಫಾರ್ ಖಾನ್ ಮೊಹಲ್ಲಾ ಬಡವಾಣೆಯಲ್ಲಿನ ಚರಂಡಿ ನೀರು ಉಕ್ಕಿ ರಸ್ತೆಗೆ ಹರಿಯುತ್ತಿದೆ, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದೆ.
ಮನೆ ಹಾಗೂ ಆವರಣ ಸ್ವಚ್ಛಗೊಳಿಸಿ ವರಮಹಾಲಕ್ಷ್ಮಿ ಹಬ್ಬ ಆಚರಣೆಯಲ್ಲಿ ತೊಡಗಿದ್ದರು. ಸಂಜೆ ಬಿದ್ದ ಮಳೆಯಿಂದ ಮನೆಯೊಳಗೆ ಚರಂಡಿ ನೀರು ನುಗ್ಗಿದೆ. ಇದರಿಂದ ಬಡಾವಣೆಗಳ ನಿವಾಸಿಗಳು ಪುರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ರಸ್ತೆಯಲ್ಲಿ ನೀರು ನಿಂತಿದ್ದ ಕಾರಣ ನಾಗರಿಕರು ಹಾಗೂ ದ್ವಿಚಕ್ರವಾಹನ ಸವಾರರು ಪರದಾಡಿದರು. ಕೆಲ ದಿನಗಳ ಹಿಂದೆ ಮಳೆ ಬಂದು ಸಮಸ್ಯೆ ಆಗಿದ್ದಾಗ ಒಂದು ಭಾಗದ ಚರಂಡಿಯನ್ನು ಮಾತ್ರ ಸ್ವಚ್ಛಗೊಳಿಸಿ ಹೋಗಿದ್ದರು. ಶುಕ್ರವಾರ ಬಿದ್ದ ಮಳೆಯಿಂದ ಚರಂಡಿ ನೀರು ರಸ್ತೆ ಉದ್ದಗಲಕ್ಕೂ ಹರಡಿಕೊಂಡು ಮನೆಗಳಿಗೆ ನುಗ್ಗಿತು. ಅಂದೇ ಎಲ್ಲಾ ಭಾಗದಲ್ಲಿ ಸರಿಪಡಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಬಂದಾಗಲೆಲ್ಲಾ ಇದೇ ಸಮಸ್ಯೆ ಉಂಟಾಗುತ್ತಿದ್ದು, ಸಮಸ್ಯೆಗೆ ಸ್ಪಂದಿಸುವವರು ಇಲ್ಲ ಎಂದು ಬಡವಾಣೆಯ ನಿವಾಸಿಗಳ ತಮ್ಮ ಆಳಲು ತೋಡಿಕೊಂಡರು.
‘ಕೇಂದ್ರ ಸರ್ಕಾರದಿಂದ ಸ್ವಚ್ಛ ಭಾರತ್ ಯೋಜನೆಗಾಗಿ ಕೋಟ್ಯಂತರ ಅನುದಾನ ಬರುತ್ತದೆ. ಆದರೆ, ಇದು ಲೆಕ್ಕಕ್ಕೆ ಮಾತ್ರ ಅನ್ವಯಿಸುತ್ತದೆ, ಕೆಲಸ ಏನೂ ನಡೆಯಲ್ಲ’ ಎಂದು ಆರೋಪಿಸಿದರು.
‘ಸ್ವಚ್ಛಭಾರತ್ ಯೋಜನೆಯಲ್ಲಿ ಮೊದಲ ಆದ್ಯತೆಯೇ ಚರಂಡಿ ನೈರ್ಮಲ್ಯ ಕಾಪಾಡುವುದು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ. ಪ್ರತಿ ವರ್ಷವೂ ಮಳೆಗಾಲ ಬಂದರೆ ಪಟ್ಟಣದ ಕೆಲ ಬಡವಾಣೆಗಳು ಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತದೆ. ಇದರೊಂದಿಗೆ ತಗ್ಗು ಪ್ರದೇಶದ ಮನೆಗಳ ನುಗ್ಗಿ ಅವಾಂತರ ಸೃಷ್ಟಿ ಮಾಡುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.