ADVERTISEMENT

ನಗರಸಭೆ ಅನುದಾನದಲ್ಲಿ ಫುಡ್‌ ಕೋರ್ಟ್‌

ಬೀದಿಬದಿ ತಿನಿಸು ಅಂಗಡಿಗಳಿಗೆ ಅವಕಾಶ, ಸಮಿತಿ ಸಭೆ ನಡೆಸಿ ಹಂಚಿಕೆ: ನಗರಸಭೆ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 5:49 IST
Last Updated 17 ಆಗಸ್ಟ್ 2025, 5:49 IST
ಕೋಲಾರದಲ್ಲಿ ಫುಡ್‌ ಕೋರ್ಟ್‌ ನಿರ್ಮಾಣ
ಕೋಲಾರದಲ್ಲಿ ಫುಡ್‌ ಕೋರ್ಟ್‌ ನಿರ್ಮಾಣ   

ಕೋಲಾರ: ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಸರ್ವಜ್ಞ ಪಾರ್ಕ್‌ ಬಳಿ ನಗರಸಭೆ ಅನುದಾನದಿಂದ ಫುಡ್‌ ಕೋರ್ಟ್‌ ನಿರ್ಮಾಣ ಮಾಡಲಾಗಿದೆ ಎಂದು ಕೋಲಾರ ನಗರಸಭೆ ಅಧ್ಯಕ್ಷೆ ಕೆ.ಲಕ್ಷ್ಮಿದೇವಮ್ಮ ರಮೇಶ್‌ ತಿಳಿಸಿದರು.

‘ನಗರಸಭೆಯ ಸ್ವಂತ ನಿಧಿ ₹13.50 ಲಕ್ಷ ಹಾಗೂ 15ನೇ ಹಣಕಾಸು ಆಯೋಗದ ಅನುದಾನ ₹20.31 ಲಕ್ಷ ಸೇರಿ ಒಟ್ಟು ₹33.81 ಲಕ್ಷ ವೆಚ್ಚದಲ್ಲಿ ಫುಡ್‌ ಕೋರ್ಟ್‌ ನಿರ್ಮಿಸಲಾಗಿದೆ’ ಎಂದು ಶನಿವಾರ ಸ್ಪಷ್ಟಪಡಿಸಿದರು.

‘ಜಿಲ್ಲಾಧಿಕಾರಿಯಾಗಿದ್ದ ಅಕ್ರಂ ಪಾಷಾ ನಗರಸಭೆ ಆಡಳಿತಾಧಿಕಾರಿಯಾಗಿದ್ದಾಗ ಶಾಸಕ ಕೊತ್ತೂರು ಜಿ.ಮಂಜುನಾಥ್‌ ಅವರ ಮುತುವರ್ಜಿಯಿಂದ ಫುಡ್‌ಕೋರ್ಟ್‌ ನಿರ್ಮಾಣ ಆರಂಭವಾಯಿತು. ನಾವು ಅಧಿಕಾರಕ್ಕೆ ಬಂದ ಮೇಲೆ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದೆವು. ಈಗ ನಿರ್ಮಾಣ ಪೂರ್ಣಗೊಂಡಿದ್ದು, ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಉದ್ಘಾಟಿಸಿದ್ದಾರೆ’ ಎಂದರು.

ADVERTISEMENT

‘ಎರಡು ಹಂತಗಳಲ್ಲಿ ಕಾಮಗಾರಿ ನಡೆದಿದೆ. ಮೊದಲ ಹಂತದಲ್ಲಿ ನಗರಸಭೆಯ ಸ್ವಂತ ಅನುದಾನವಾದ ₹13.50 ಲಕ್ಷದಲ್ಲಿ ಫುಡ್‌ ಕೋರ್ಟ್‌ಗೆ ಫುಟ್‌ಪಾತ್‌ ನಿರ್ಮಿಸುವ ಕೆಲಸ ನಡೆದಿದೆ. ಇನ್ನು 2024–25ನೇ ಸಾಲಿನಲ್ಲಿ ಸರ್ಕಾರ ಬಿಡುಗಡೆ ಮಾಡಿರುವ 15ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನ ₹33.81 ಕೋಟಿಯಲ್ಲಿ ಫುಡ್‌ ಕೋರ್ಟ್‌ನ ಶೆಲ್ಟರ್‌ ನಿರ್ಮಿಸಲಾಗಿದೆ. ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದಂತೆ ಕೆಲಸ ನಡೆದಿದೆ. ಫುಡ್‌ ಕೋರ್ಟ್‌ ನಿರ್ಮಾಣಕ್ಕೆ ಸಿಎಸ್‌ಆರ್‌ ನಿಧಿ ಸೇರಿದಂತೆ ಬೇರೆ ಯಾವುದೇ ಅನುದಾನ ಬಳಸಿಕೊಂಡಿಲ್ಲ’ ಎಂದು ಹೇಳಿದರು.

‘ಆ ಭಾಗದ ಬೀದಿ ಬದಿಯಲ್ಲಿ ಹಲವಾರು ಮಂದಿ ಬೀದಿಬದಿ ತಿನಿಸು ಅಂಗಡಿ ಇಟ್ಟುಕೊಂಡಿದ್ದರು. ಅವರಿಗೆ ಫುಡ್ ಕೋರ್ಟ್‌ನಲ್ಲಿ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದೇವೆ. ಅವರಿಗೆ ನ್ಯಾಯ ಒದಗಿಸಿಕೊಡುತ್ತೇವೆ. ನಗರಸಭೆ ಸಮಿತಿ ಸಭೆಯಲ್ಲಿ ಚರ್ಚಿಸಿ ಶಾಸಕ ಕೊತ್ತೂರು ಮಂಜುನಾಥ್‌ ಅವರ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳುತ್ತೇವೆ. ಫುಡ್‌ ಕೋರ್ಟ್‌ನಲ್ಲಿ 27 ಕೌಂಟರ್‌ಗಳಿದ್ದು, ತಿನಿಸು ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.