ADVERTISEMENT

ತಾಲ್ಲೂಕು ಮಟ್ಟದ ಕ್ರೀಡಾಕೂಟದ ರಂಗು

ದಸರಾ ಕ್ರೀಡಾಕೂಟಕ್ಕೆ ಚಾಲನೆ; 200ಕ್ಕೂ ಅಧಿಕ ಅಥ್ಲೀಟ್‌ಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 5:49 IST
Last Updated 17 ಆಗಸ್ಟ್ 2025, 5:49 IST
ಕೋಲಾರದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಹೈಜಂಪ್‌ ಸ್ಪರ್ಧೆಯಲ್ಲಿ ಜೈಹಿಂದ್ ಜಿಗಿದ ಪರಿ
ಕೋಲಾರದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಹೈಜಂಪ್‌ ಸ್ಪರ್ಧೆಯಲ್ಲಿ ಜೈಹಿಂದ್ ಜಿಗಿದ ಪರಿ   

ಕೋಲಾರ: 2025–26ನೇ ಸಾಲಿನ ದಸರಾ ಕ್ರೀಡಾಕೂಟಕ್ಕೆ ಚಾಲನೆ ಲಭಿಸಿದ್ದು, ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಈಗ ಆಟದ ರಂಗು, ಕ್ರೀಡಾಪಟುಗಳ ಕಲರವ.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ ಶನಿವಾರ ನಡೆದ ಕೋಲಾರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ 200ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಅವರಲ್ಲಿ ಡಿವೈಇಎಸ್‌ ವಿದ್ಯಾರ್ಥಿಗಳೇ ಅಧಿಕ.

ಮಹಿಳೆಯರ ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿ ಮಾನಸ ವಿ. ಮೊದಲ ಸ್ಥಾನ ಪಡೆದರೆ, ಸುಶ್ಮಿತಾ ಎರಡನೇ ಸ್ಥಾನ ಗಳಿಸಿದರು. ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಅನುಶ್ರೀ ಪ್ರಥಮ ಹಾಗೂ ಅಮರಾವತಿ ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡರು.

ADVERTISEMENT

ಟ್ರಿಪಲ್‌ ಜಂಪ್‌ನಲ್ಲಿ ಅನುಷಾ 7.63 ಮೀಟರ್‌ ದೂರ ಜಿಗಿದು ಪ್ರಥಮ ಸ್ಥಾನ ಪಡೆದರು. ಅವರಿಗೆ ಸ್ಪರ್ಧೆ ನೀಡಿದ ಚಂದನಾ 7.60 ಮೀಟರ್‌ ದೂರ ಜಿಗಿದು ದ್ವಿತೀಯ ಸ್ಥಾನ ಪಡೆದರು.

ಪುರುಷರ ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿ ಮಾರ್ಜೇನಹಳ್ಳಿಯ ಜೈಹಿಂದ್‌ ಅಗ್ರಸ್ಥಾನ ಸಂಪಾದಿಸಿದರು. ಡಿವೈಇಎಸ್‌ನ ನಂದನ್‌ ಎರಡನೇ ಸ್ಥಾನ ಗಳಿಸಿದರು.

ಎತ್ತರ ಜಿಗಿತ ಸ್ಪರ್ಧೆಯಲ್ಲಿ ಮೂವರ ನಡುವೆ ಭಾರಿ ಸ್ಪರ್ಧೆ ನಡೆಯಿತು. ಹೇಮಂತ್‌, ಜೈಹಿಂದ್‌, ಮೋನಿಷ್‌ ಗೌಡ ಪೈಪೋಟಿಯಲ್ಲಿ ಜಿಗಿದರು. ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಇದಕ್ಕೂ ಮೊದಲು ಕ್ರೀಡಾಕೂಟದಲ್ಲಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ ಚಾಲನೆ ನೀಡಿದರು.

‘ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು (ವೈಯಕ್ತಿಕ ವಿಭಾಗ) ಹಾಗೂ ಗುಂಪು ವಿಭಾಗದಲ್ಲಿ ಮೊದಲ ಸ್ಥಾನ ಪಡೆದವರು ಸೆ.6 ಹಾಗೂ 7ರಂದು ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗುತ್ತಾರೆ’ ಎಂದು ಅವರು ತಿಳಿಸಿದರು.

‘ಜಿಲ್ಲಾಮಟ್ಟದಲ್ಲಿ ಗೆದ್ದವರು ವಲಯ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ವಲಯದ ಮಟ್ಟದ ಕ್ರೀಡಾಕೂಟದ ಆಯೋಜನೆಗೆ ದಿನಾಂಕ ಹಾಗೂ ಸ್ಥಳ ಇನ್ನೂ ನಿಗದಿಯಾಗಿಲ್ಲ. ಅಲ್ಲಿ ಗೆದ್ದವರು ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ’ ಎಂದು ಮಾಹಿತಿ ನೀಡಿದರು.

‘ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆನ್‌ಲೈನ್‌ನಲ್ಲಿ ನೋಂದಣಿಗೆ ಅವಕಾಶ ಮಾಡಿ ಕೊಡಲಾಗಿದೆ. ಲಿಂಕ್‌ ಕೂಡ ಕೊಟ್ಟಿದ್ದು, ಮೊಬೈಲ್‌ನಲ್ಲೇ ನೋಂದಣಿ ಮಾಡಿಕೊಂಡು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬಹುದು. ಸ್ಥಳಕ್ಕೆ ಬಂದು ಕೂಡ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದು ಮುಕ್ತ ಕ್ರೀಡಾಕೂಟವಾಗಿದ್ದು, ತಾಲ್ಲೂಕು ಮಟ್ಟದಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು’ ಎಂದರು.

ಕೋಚ್‌ ವೆಂಕಟೇಶ್‌ ಮಾರ್ಗದರ್ಶನದಲ್ಲಿ ಸ್ಪರ್ಧೆಗಳು ನಡೆದವು. ಶಾಲಾ ಶಿಕ್ಷಣ ಇಲಾಖೆಯ ಮುರಳಿ ಮೋಹನ್‌ ಹಾಗೂ ನಾಗರಾಜ್‌ ಸಹಕರಿಸಿದರು. ಎಸ್‌.ಚೌಡಪ್ಪ ಹಾಗೂ ವೆಂಕಟೇಶ್‌ ಸಂಚಾಲಕರಾಗಿದ್ದಾರೆ. ತಾಲ್ಲೂಕಿನ ವಿವಿಧೆಡೆಯಿಂದ ಮಕ್ಕಳು ಬಂದು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಇದಲ್ಲದೇ, ಬಂಗಾರಪೇಟೆ ಹಾಗೂ ಕೆಜಿಎಫ್‌ನಲ್ಲೂ ದಸರಾ ಕ್ರೀಡಾಕೂಟ ಶನಿವಾರ ನಡೆಯಿತು. ಆ.18ರಂದು ಮುಳಬಾಗಿಲು, 26ರಂದು ಮಾಲೂರು, 30ರಂದು ಶ್ರೀನಿವಾಸಪುರ ತಾಲ್ಲೂಕು ಮಟ್ಟದ ಕ್ರೀಡಾಕೂಟ ನಡೆಯಲಿದೆ. ಅಥ್ಲೆಟಿಕ್ಸ್‌, ವಾಲಿಬಾಲ್‌, ಫುಟ್‌ಬಾಲ್‌, ಕೊಕ್ಕೊ, ಥ್ರೋಬಾಲ್‌, ಕಬಡ್ಡಿ, ಯೋಗ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.

ಕೋಲಾರದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಹೈಜಂಪ್‌ ಸ್ಪರ್ಧೆಯಲ್ಲಿ ಹೇಮಂತ್‌ ಜಿಗಿದ ಪರಿ
ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಚಂದನಾ ಜಿಗಿದ ಪರಿ. ಅನುಷಾ ಮೊದಲ ಸ್ಥಾನ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.