ADVERTISEMENT

ಕೋಲಾರದ ಬಿಜೆಪಿ, ಕಾಂಗ್ರೆಸ್‌ ಒಳ ಒಪ್ಪಂದ: ಪರಿಷತ್‌ ಸದಸ್ಯ ಗೋವಿಂದರಾಜು

ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ನ ಇಂಚರ ಗೋವಿಂದರಾಜು ಆರೋಪ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 6:50 IST
Last Updated 6 ಜನವರಿ 2023, 6:50 IST
ಇಂಚರ ಗೋವಿಂದರಾಜು
ಇಂಚರ ಗೋವಿಂದರಾಜು   

ಕೋಲಾರ: ‘ಜಿಲ್ಲೆಯ ಅಭಿವೃದ್ಧಿಯನ್ನು ಬಿಜೆಪಿ ಸರ್ಕಾರ ಕಡೆಗಣಿಸಿದ್ದು, ಕಾಂಗ್ರೆಸ್‌ ಶಾಸಕರು ನಿಷ್ಕ್ರಿಯರಾಗಿದ್ದಾರೆ. ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿರುವಂತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಜೆಡಿಎಸ್‌ನ ಇಂಚರ ಗೋವಿಂದರಾಜು
ಟೀಕಿಸಿದರು.

‘ಬೀದಿದೀಪಗಳು ಮತ್ತು ರಸ್ತೆಗಳು ಹಾಳಾಗಿ ವರ್ಷವಾದರೂ ದುರಸ್ತಿ ಮಾಡುವ ಕೆಲಸ ಮಾಡುತ್ತಿಲ್ಲ. ಉಸ್ತುವಾರಿ ಸಚಿವ ಮುನಿರತ್ನ ಕೆಡಿಪಿ ಸಭೆ ನಡೆಸುತ್ತಿಲ್ಲ. ಒಮ್ಮೆ ಮನಸ್ಸೋ ಇಚ್ಛೆ ನಡೆಸಿದ ಸಭೆಗೆ ಕಾಂಗ್ರೆಸ್‌ ಶಾಸಕರು, ಬಿಜೆಪಿ ಸಂಸದರು ಬರಲಿಲ್ಲ. ಟೆಂಡರ್‌ ಆದರೂ ವರ್ಕ್‌ ಆರ್ಡರ್‌ ನೀಡುತ್ತಿಲ್ಲ. ಸರ್ಕಾರ ಇದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ’ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಇಟಿಸಿಎಂ ಆಸ್ಪತ್ರೆಯ ಪಕ್ಕದ ರಸ್ತೆಗೆ ಡಾಂಬಾರು ಹಾಕಲು ಗುತ್ತಿಗೆದಾರರಿಗೆ ₹52 ಲಕ್ಷ ಬಿಡುಗಡೆಯಾಗಿದ್ದರೂ ವಿಳಂಬವಾಗುತ್ತಿರುವುದೇಕೆ’ ಎಂದು ಪ್ರಶ್ನಿಸಿದರು.

ADVERTISEMENT

‘ಅತಿವೃಷ್ಟಿಯಿಂದ ಹಾನಿಯಾದ ರೈತರ ಬೆಳೆಗೆ ಪರಿಹಾರ ಸಿಕ್ಕಿಲ್ಲ, ಖಾಸಗಿ ಕಂಪನಿಗಳು ಬೆಳೆ ವಿಮೆ ಪರಿಹಾರ ನೀಡಿಲ್ಲ. ವಿಮೆ ಕಂಪನಿಗಳು ಸರ್ಕಾರದೊಂದಿಗೆ ಒಳ ಒಪ್ಪಂದ ಮಾಡಿ
ಕೊಂಡು ರೈತರಿಗೆ ಮೋಸ ಮಾಡುತ್ತಿವೆ. ಈ ಬಗ್ಗೆ ಜನಪ್ರತಿನಿಗಳು‌ ಸದನದಲ್ಲಿ ಚರ್ಚೆ ಮಾಡುತ್ತಿಲ್ಲ. ಚರ್ಮಗಂಟು ರೋಗದಿಂದ ಜಾನುವಾರು ಮೃತಪಟ್ಟಿದ್ದು, ಸಮೀಕ್ಷೆ ನಡೆಸಿಲ್ಲ. ನರಸಾಪುರ, ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಶೇ 50ಕ್ಕೂ ಅಧಿಕ ನಿವೇಶನಗಳು ಖಾಲಿ ಬಿದ್ದಿವೆ. ಬಿಜಿಎಂಎಲ್‌ನಲ್ಲಿ ಗಣಿ ಕಾರ್ಮಿಕರಿಗೆ ನಿವೇಶನ ಕೊಡಬೇಕು. ಕೆಐಎಡಿಬಿ ಮಾಲೂರು ತಾಲ್ಲೂಕು ಮಿಂಡಿಹಳ್ಳಿ ಮತ್ತಿತರ ಕಡೆ ರೈತರ ಫಲವತ್ತಾದ ಜಮೀನು ಸ್ವಾಧೀನಪಡಿಸಿಕೊಂಡು ಸರಿಯಾಗಿ ಪರಿಹಾರ ನೀಡದೆ ವಂಚಿಸುತ್ತಿವೆ’ ಎಂದು ಹರಿಹಾಯ್ದರು.

‘ಬಾಡಿಗೆ ಕಟ್ಟಡದಲ್ಲಿರುವ ನೋಂದಾಣಿಧಿಕಾರಿ ಕಚೇರಿಯನ್ನು ಉದ್ದೇಶಪೂರ್ವಕವಾಗಿ ಸ್ಥಳಾಂತರಿಸುತ್ತಿಲ್ಲ. ಭ್ರಷ್ಟಾಚಾರಕ್ಕೆ, ವೈಯಕ್ತಿಕ ಹಿತಾಸಕ್ತಿಯೇ ಇದಕ್ಕೆ ಕಾರಣ‍. ಈ ಕಚೇರಿಯಲ್ಲಿ ₹ 52 ಲಕ್ಷ ದುರುಪಯೋಗವಾಗಿದೆ’ ಎಂದು ಆರೋಪಿಸಿದರು.

‘ಕುಕ್ಕುಟೋದ್ಯಮವನ್ನು ಕೃಷಿ ಎಂಬುದಾಗಿ ಸರ್ಕಾರ ಒಪ್ಪಿಕೊಂಡಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭೂಪರಿವರ್ತನೆಗೆ ಅವಕಾಶ ಕೊಡಲಾಗಿದೆ’ ಎಂದರು.

‘ಡಿಸಿಸಿ ಬ್ಯಾಂಕ್‌ನಿಂದ ಸಾಲ ವಿತರಣೆಗೆ ವಿರೋಧ ಇಲ್ಲ. ಶಾಸಕರನ್ನು ಜತೆಯಲ್ಲಿಟ್ಟುಕೊಂಡು ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಿಸಿ ಆಣೆ, ಪ್ರಮಾಣ ಮಾಡಿಸಿಕೊಳ್ಳುವುದಕ್ಕೆ ವಿರೋಧವಿದೆ. ಬ್ಯಾಂಕ್ ಆಡಳಿತ ವಿರುದ್ಧ ಸರ್ಕಾರ ಇನ್ನೂ ಏಕೆ ಕ್ರಮ ಜರುಗಿಸಿಲ್ಲ ಎಂಬುದು ಅರ್ಥವಾಗುತ್ತಿಲ್ಲ’ ಎಂದರು.

‘ಪೌರಾಯುಕ್ತರ ಕೆಲಸಕ್ಕೆ ಅಡ್ಡಿ’

‘ಕೋಲಾರ ನಗರಸಭೆಯಲ್ಲಿ ಸದಸ್ಯರು ಹಾಗೂ ಪೌರಾಯುಕ್ತರ ನಡುವೆ ಹೊಂದಾಣಿಕೆ ಕೊರತೆಯಿಂದ ಯಾವುದೇ ಕೆಲಸ ನಡೆಯದೆ ಜನ ಅತಂತ್ರರಾಗಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸದಸ್ಯರು ಪೌರಾಯುಕ್ತೆ ಬಿ.ಎಸ್‌.ಸುಮಾ ಅವರಿಗೆ ಕೆಲಸ ಮಾಡಲೂ ಬಿಡುತ್ತಿಲ್ಲ. ಇದರಿಂದ ಅವರು ರಜೆ ಹಾಕಿ ಹೋಗಿದ್ದಾರೆ ಎಂಬುದು ಗೊತ್ತಾಗಿದೆ’ ಎಂದರು.

‘ಮುಖ್ಯಮಂತ್ರಿ ಬಳಿ ಕೇಳಿ ಕೋಲಾರಕ್ಕೆ ನಗರೋತ್ಥಾನದಲ್ಲಿ ₹ 40 ಕೋಟಿ, ವಿಶೇಷ ಅನುದಾನದಲ್ಲಿ ₹ 5 ಕೋಟಿ ಬಿಡುಗಡೆ ಮಾಡಿಸಿದೆವು. ಆದರೆ. ನಗರಸಭೆಯಲ್ಲಿ ಕೆಲಸವೇ ನಡೆಯುತ್ತಿಲ್ಲ. ಪೌರಾಡಳಿತ ಸಚಿವ ಎಂಟಿಬಿ ನಾಗರಾಜ, ಉಸ್ತುವಾರಿ ಸಚಿವ ಮುನಿರತ್ನ ಮಧ್ಯ ಪ್ರವೇಶಿಸಿ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.