ADVERTISEMENT

ತಾಂತ್ರಿಕ ಅಡಚಣೆ, ಸಮೀಕ್ಷೆ ವಿಳಂಬ!

ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿ ಸಮೀಕ್ಷೆ; ನಿಗದಿತ ಗುರಿ ತಲುಪಲು ಪರದಾಟ

ಕೆ.ಓಂಕಾರ ಮೂರ್ತಿ
Published 11 ಮೇ 2025, 5:36 IST
Last Updated 11 ಮೇ 2025, 5:36 IST
ಕೋಲಾರದಲ್ಲಿ ಪರಿಶಿಷ್ಟ ಜಾತಿಯ ಜನಗಣತಿ ಸಮೀಕ್ಷೆಯಲ್ಲಿ ತೊಡಗಿರುವ ಗಣತಿದಾರರು ಹಾಗೂ ಮೇಲ್ವಿಚಾರಕರು
ಕೋಲಾರದಲ್ಲಿ ಪರಿಶಿಷ್ಟ ಜಾತಿಯ ಜನಗಣತಿ ಸಮೀಕ್ಷೆಯಲ್ಲಿ ತೊಡಗಿರುವ ಗಣತಿದಾರರು ಹಾಗೂ ಮೇಲ್ವಿಚಾರಕರು   

ಕೋಲಾರ: ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಜಾತಿ ಸಮೀಕ್ಷೆಯು ಜಿಲ್ಲೆಯಲ್ಲಿ ತಾಂತ್ರಿಕ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಆಮೆಗತಿಯಲ್ಲಿ ಸಾಗಿದೆ.

ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ನೇತೃತ್ವದಲ್ಲಿ ಮೇ 5ರಂದು ಮೊದಲ ಹಂತದ ಸಮೀಕ್ಷೆ ಆರಂಭವಾಗಿದೆ. ಈಗಾಗಲೇ ಆರು ದಿನ ಕಳೆದಿದ್ದು, ಜಿಲ್ಲೆಯು ನಿಗದಿತ ಗುರಿ ಮುಟ್ಟಿಲ್ಲ.

ಜಿಲ್ಲೆಯಲ್ಲಿ 4 ಲಕ್ಷಕ್ಕೂ ಅಧಿಕ ಕುಟುಂಬಗಳಿವೆ. ಅದರಲ್ಲಿ ಪರಿಶಿಷ್ಟ ಜಾತಿಯ ಸುಮಾರು 1.32 ಲಕ್ಷ ಕುಟುಂಬಗಳಿವೆ. ಸಮೀಕ್ಷೆಗಾಗಿ 1,538 ಬೂತ್‌ ಗುರುತಿಸಿದ್ದು, ಅಷ್ಟೇ ಗಣತಿದಾರರನ್ನು ನೇಮಿಸಲಾಗಿದೆ. ಸಮೀಕ್ಷೆಯಲ್ಲಿ ದಿನಕ್ಕೆ 37 ಸಾವಿರ ಕುಟುಂಬ ತಲುಪುವ ಗುರಿ ಹೊಂದಲಾಗಿದೆ.

ADVERTISEMENT

ಸಮೀಕ್ಷೆಯಲ್ಲಿ ಒಂದು ಮನೆಯ ಮಾಹಿತಿ ಪಡೆಯಲು 20 ನಿಮಿಷ ನಿಗದಿಪಡಿಸಲಾಗಿದೆ. ಆದರೆ, 42 ಪ್ರಶ್ನೆ ಕೇಳಿ ಆ್ಯಪ್‌ನಲ್ಲಿ ಮನೆಯ ಸದಸ್ಯರ ಮಾಹಿತಿಯನ್ನು ಭರ್ತಿ ಮಾಡಲು ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳುತ್ತಿರುವುದಾಗಿ ಗಣತಿದಾರರು ಹೇಳುತ್ತಿದ್ದಾರೆ. ಹೀಗಾಗಿ, ನಿತ್ಯ ನಿಗದಿಯಂತೆ ಮನೆಗಳನ್ನು ತಲುಪಲು ಆಗುತ್ತಿಲ್ಲ.

ಇದಕ್ಕೆ ಆ್ಯಪ್‌ ಸಮಸ್ಯೆ, ಸರ್ವರ್‌ ಡೌನ್‌ ಆಗುವುದು ಸೇರಿದಂತೆ ಹಲವು ಕಾರಣಗಳನ್ನು ಅವರು ಹೇಳುತ್ತಿದ್ದಾರೆ. ಹೊಸ ಆ್ಯಪ್‌ ಬಳಸುತ್ತಿದ್ದರೂ ಅದಕ್ಕೆ ಗಣತಿದಾರರು ಇನ್ನು ಹೊಂದಿಕೊಂಡಿಲ್ಲ.

ಜೊತೆಗೆ ಗಣತಿದಾರರನ್ನಾಗಿ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕರನ್ನು ನೇಮಿಸಲಾಗಿದೆ. ಆದರೆ, ಅವರು ವಿವಿಧ ಕಾರಣವೊಡ್ಡಿ ಸಮೀಕ್ಷೆಗೆ ತಪ್ಪಿಸಿಕೊಳ್ಳುತ್ತಿದ್ದಾರೆ, ರಜೆ ಹಾಕುತ್ತಿದ್ದಾರೆ. ಜೊತೆಗೆ ಕೆಲವರು ಇನ್ನೂ ಲಾಗಿನ್‌ ಆಗಿಲ್ಲ.

ಗಣತಿಗೆ ಗೈರು ಹಾಜರಾಗುವವರ ವಿರುದ್ಧ ಕ್ರಮ ವಹಿಸುವುದಾಗಿ ಈಗಾಗಲೇ ಜಿಲ್ಲಾಧಿಕಾರಿ ಎಂ.ಆರ್‌.ರವಿ ಕೂಡ ಎಚ್ಚರಿಕೆ ನೀಡಿದ್ದಾರೆ.

ನಿತ್ಯ ಬೆಳಿಗ್ಗೆ 6.30ಕ್ಕೆ ಸಮೀಕ್ಷೆ ಆರಂಭಿಸಬೇಕು. ಆದರೆ, ಗಣತಿದಾರರು ಸಮೀಕ್ಷೆಗಾಗಿ ಮನೆಗಳನ್ನು ತಲುಪುವುದೇ ಎರಡು ಗಂಟೆ ತಡವಾಗಿ. ಅಂದರೆ ಬೆಳಿಗ್ಗೆ 8.30ಕ್ಕೆ ಸಮೀಕ್ಷೆ ಆರಂಭಿಸುವುದು ಕೆಲವೆಡೆ ಕಂಡುಬಂದಿದೆ.

ಸಮೀಕ್ಷೆ ನಡೆಸಲು ಒಬ್ಬೊಬ್ಬ ಗಣತಿದಾರರಿಗೆ 150ರಿಂದ 200 ಮನೆಗಳನ್ನು ನಿಗದಿಪಡಿಸಲಾಗಿದೆ. ಕೆಲವರು ನಿಗದಿಪಡಿಸಿದಂತೆ ಪ್ರಗತಿ ಸಾಧಿಸಿದ್ದರೆ, ಇನ್ನು ಕೆಲವರು ಬಹಳ ಹಿಂದೆ ಉಳಿದಿದ್ದಾರೆ.

ಮೇ 6ರಂದು ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಖುದ್ದಾಗಿ ಕೋಲಾರಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಯುತ್ತಿರುವ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಯಾವುದೇ ಗೊಂದಲ ಇಲ್ಲದಂತೆ, ಸಂಯಮದಿಂದ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದರು. ಜಿಲ್ಲೆಯಲ್ಲಿನ ಪ್ರಗತಿ ಪರಿಶೀಲನೆ ಸಭೆ ಕೂಡ ನಡೆಸಿದ್ದರು. 

ಮೊದಲ ಹಂತದಲ್ಲಿ ಮನೆ ಮನೆ ಸಮೀಕ್ಷೆ ಮೇ 17 ರವರೆಗೆ ನಡೆಯಲಿದೆ. ಮೇ 19 ರಿಂದ 21 ರವರೆಗೆ ಆಯಾ ಗ್ರಾಮ ಪಂಚಾಯ್ತಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಲಾಗುತ್ತದೆ. ಕೂಲಿಕಾರ್ಮಿಕರು, ವಲಸೆ ಹೋಗಿರುವಂಥವರನ್ನು ಸಮೀಕ್ಷೆ ಮಾಡಲಾಗುವುದು. 3ನೇ ಹಂತದಲ್ಲಿ ಆನ್‌ಲೈನ್‌ನಲ್ಲಿ ಸಮೀಕ್ಷೆಗೆ ಮಾಹಿತಿಯನ್ನು ನಮೂದಿಸುವ ಅವಕಾಶ ಕಲ್ಪಿಸಲಾಗಿದೆ.

ಕೋಲಾರದಲ್ಲಿ ಪರಿಶಿಷ್ಟ ಜಾತಿಯ ಜನಗಣತಿ ಸಮೀಕ್ಷೆಯಲ್ಲಿ ತೊಡಗಿರುವ ಗಣತಿದಾರರು ಹಾಗೂ ಮೇಲ್ವಿಚಾರಕರು

ತಾಂತ್ರಿಕ ಸಮಸ್ಯೆಯಿಂದ ವಿಳಂಬ

ಮೊದಲಿನ ಆ್ಯಪ್‌ ಬದಲಿಸಿ ಎರಡು ದಿನಗಳಿಂದ ಹೊಸ ಆ್ಯಪ್‌ ಬಳಸುತ್ತಿದ್ದ ಅದಕ್ಕೆ ಗಣತಿದಾರರು ಹೊಂದಿಕೊಳ್ಳಬೇಕು. 42 ಪ್ರಶ್ನೆ ಕೇಳಲು 20 ನಿಮಿಷ ನಿಗದಿಪಡಿಸಲಾಗಿದೆ. ಕೆಲ ನಿಮಿಷ ಹೆಚ್ಚು ತೆಗೆದುಕೊಳ್ಳುತ್ತಿದ್ದಾರೆ. ನಿರೀಕ್ಷಿತ ಗುರಿ ಮುಟ್ಟಲು ಪ್ರಯತ್ನ ಹಾಕುತ್ತಿದ್ದೇವೆ. ಸರ್ವರ್‌ ಸಮಸ್ಯೆ ಸೇರಿದಂತೆ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದೆ. ಜೊತೆಗೆ ತರಬೇತಿ ನೀಡುವ ಬಗ್ಗೆಯೂ ಚಿಂತಿಸುತ್ತಿದ್ದೇವೆ ಎಂ.ಶ್ರೀನಿವಾಸನ್‌ ಜಂಟಿ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.