ADVERTISEMENT

ಕೋಲಾರ: ಮನೆ, ಮನೆಗೆ ತೆರಳಿ ಕುಟುಂಬದ ಸಮೀಕ್ಷೆ

ಸಾಮಾಜಿಕ, ಶೈಕ್ಷಣಿಕ ಜಾತಿವಾರು ಸಮೀಕ್ಷೆಗೆ ಚಾಲನೆ, ಕುಟುಂಬದ ಮಾಹಿತಿ ಒದಗಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 3:06 IST
Last Updated 23 ಸೆಪ್ಟೆಂಬರ್ 2025, 3:06 IST
ಕೋಲಾರದಲ್ಲಿ ಸೋಮವಾರ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಮಾಹಿತಿ ನೀಡಿರುವ ಮೂಲಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಿದರು
ಕೋಲಾರದಲ್ಲಿ ಸೋಮವಾರ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಮಾಹಿತಿ ನೀಡಿರುವ ಮೂಲಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಿದರು    

ಕೋಲಾರ: ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಗೆ ಸೋಮವಾರ ಚಾಲನೆ ಲಭಿಸಿದ್ದು, ಹಲವೆಡೆ ತಾಂತ್ರಿಕ ಸಮಸ್ಯೆಗಳ ಕಾರಣ ಕೆಲಹೊತ್ತು ತೊಡಕು ಉಂಟಾಯಿತು.

ಜಿಲ್ಲೆಯ ಪ್ರಮುಖರ ಮನೆಗಳಲ್ಲಿನ ಕುಟುಂಬದವರ ಸಮೀಕ್ಷೆ ನಡೆಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ವಿವಿಧ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ನಿಖರವಾಗಿ ಅರಿಯುವ ಉದ್ದೇಶದಿಂದ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತದಿಂದ ಸೆ.22ರಿಂದ ಅ.7ರವರೆಗೆ ಈ ಸಮೀಕ್ಷೆ ಕೈಗೊಳ್ಳಲಾಗಿದೆ.

ಕೈಪಿಡಿ, ಬ್ಯಾಗ್‌ ಒಳಗೊಂಡ ಕಿಟ್‌ಗಳೊಂದಿಗೆ ಗಣತಿದಾರರು 15 ತಾಲ್ಲೂಕುಗಳಲ್ಲಿನ ಮನೆ–ಮನೆಗೆ ತೆರಳಿ, ಸಮೀಕ್ಷೆ ಕೈಗೊಂಡರು.

ADVERTISEMENT

ಕೋಲಾರ ನಗರದ ವ್ಯಾಪ್ತಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಅವರ ನಿವಾಸದಿಂದ ಮಾಹಿತಿ ಕಲೆಹಾಕಲು ಆರಂಭಿಸಿದರು. ನೆಟ್‌ವರ್ಕ್ ಸಮಸ್ಯೆಯಿಂದ ಕೆಲವೆಡೆ ಸಮೀಕ್ಷೆಗೆ ತೊಡಕಾಯಿತು.

ಸಿಬ್ಬಂದಿ ನೀಡಿದ ವಿಶೇಷ ಗುರುತು ಸ್ಟಿಕ್ಕರ್ ಅನ್ನು ತಮ್ಮ ನಿವಾಸದ ಪ್ರವೇಶ ದ್ವಾರಕ್ಕೆ ಅಂಟಿಸುವ ಮೂಲಕ ಅನಿಲ್‌ ಕುಮಾರ್‌ ಚಾಲನೆ ನೀಡಿದರು. ನಂತರ ಮಾತನಾಡಿ, ‘ಪ್ರತಿಯೊಂದು ಕುಟುಂಬದವರು ಸಾಮಾಜಿಕ, ಶೈಕ್ಷಣಿಕ ಜಾತಿ ಗಣತಿಯ ಸಮೀಕ್ಷೆಯಲ್ಲಿ ಪಾಲ್ಗೊಂಡು ಸಮಗ್ರ ಮಾಹಿತಿ ಒದಗಿಸಬೇಕು. ಯಾವುದೇ ಭಯವಿಲ್ಲದೆ, ನಿಖರವಾದ ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಸ್ವಾತಂತ್ರ್ಯ ಬಂದ ನಂತರ ಅನೇಕ ಪಕ್ಷಗಳು ಅಧಿಕಾರಕ್ಕೆ ಬಂದು ಹೋಗಿವೆ. ವಿವಿಧ ಸರ್ಕಾರಗಳು ದೇಶ, ರಾಜ್ಯದ ಅಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯಕ್ರಮ ಜಾರಿಗೆ ತಂದಿವೆ. ಯೋಜನೆಗಳ ಪ್ರಯೋಜನ ಎಷ್ಟರ ಮಟ್ಟಿಗೆ ಜನಕ್ಕೆ ತಲುಪಿದೆ? ಎಷ್ಟರ ಮಟ್ಟಿಗೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ ಎಂಬುದು ಸಮೀಕ್ಷೆಯ ಮೂಲಕ ಗೊತ್ತಾಗಲಿದೆ ಎಂದು ತಿಳಿಸಿದರು.

ಕಾಟಾಚಾರಕ್ಕೆ ಸುಳ್ಳು ಮಾಹಿತಿ ನೀಡಬಾರದು. ನಿವೇಶನ, ಜಮೀನು, ವಾಹನ, ಬಂಗಾರ ಹೀಗೆ ಇಲ್ಲದೆ ಇರುವುದನ್ನು ಬರೆಯಿಸುವುದು ಬೇಡ. ಸತ್ಯ ಮಾಹಿತಿ ನೀಡಬೇಕು ಎಂದರು.

ಪ್ರತಿ ಮನೆಯ ಪ್ರತಿ ಸದಸ್ಯರ ಸಾಮಾಜಿಕ ಹಿನ್ನೆಲೆ, ಶೈಕ್ಷಣಿಕ ಅರ್ಹತೆ, ಉದ್ಯೋಗ, ಆದಾಯ ಮತ್ತು ವಾಸಸ್ಥಳದ ಕುರಿತು 60 ಪ್ರಶ್ನೆಗಳನ್ನು ಕೇಳಿ ಆ್ಯಪ್‌ನಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿರುವ 4,17,305 ಕುಟುಂಬಗಳ ಮನೆಗಳಿವೆ. ಪ್ರತಿ 150 ಮನೆಗಳಿಗೆ ಒಬ್ಬ ಗಣತಿದಾರರಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಗುರುತಿಸಲಾಗಿದೆ. ಪ್ರತಿ 15 ರಿಂದ 20 ಗಣತಿದಾರರಿಗೆ ಒಬ್ಬರಂತೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು, ಬಿಆರ್‌ಸಿ-ಸಿಆರ್‌ಸಿಗಳು ಮೇಲ್ವಿಚಾರಕರಾಗಿ ನಿಗಾ ವಹಿಸಿತ್ತಿದ್ದಾರೆ. ಪ್ರತಿ 50 ಗಣತಿದಾರರಿಗೆ ಒಬ್ಬ ಮಾಸ್ಟರ್ ಟ್ರೇನರ್ ನಿಯೋಜನೆ ಮಾಡಲಾಗಿದೆ.

ಬೆಸ್ಕಾಂ ಸಿಬ್ಬಂದಿ ಎರಡು ವಾರಗಳಿಂದ ಪ್ರತಿ ಮನೆಗಳ ವಿದ್ಯುತ್‌ ಮೀಟರ್‌ಗೆ ಸ್ಟಿಕ್ಕರ್‌ ಅಂಟಿಸಿ, ಯೂನಿಕ್‌ ಹೌಸಿಂಗ್‌ ಐಡೆಂಟಿಫಿಕೇಷನ್‌(ಯುಎಚ್‌ಐಡಿ) ನಿಗದಿಪಡಿಸಿದ್ದರು. ಇದರಿಂದ ಸಮೀಕ್ಷೆ ಕೈಗೊಳ್ಳಲು ಸುಲಭವಾಗಿದೆ.

‘ಸಣ್ಣ–ಪುಟ್ಟ ತಾಂತ್ರಿಕ ಸಮಸ್ಯೆ ಬಿಟ್ಟರೆ, ಇಡೀ ಜಿಲ್ಲೆಯಲ್ಲಿ ಸಮೀಕ್ಷೆ ಸುಗಮವಾಗಿ ನಡೆಯುತ್ತಿದೆ. ತರಬೇತಿ ಪಡೆದ ಗಣತಿದಾರರು ತಮಗೆ ಕರ್ತವ್ಯಕ್ಕೆ ನಿಯೋಜಿಸಿದ ಸ್ಥಳದಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಾ, ಪೌರಾಯುಕ್ತ ನವೀನ್ ಚಂದ್ರ, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ್, ಕಂದಾಯ ಅಧಿಕಾರಿ ವೇಣು ಇದ್ದರು.

ಸಮೀಕ್ಷೆಗೆ ಹಲವೆಡೆ ತಾಂತ್ರಿಕ ಅಡಚಣೆ

ಕೋಲಾರ ಜಿಲ್ಲೆಯಲ್ಲಿ ಸೋಮವಾರ ಆರಂಭವಾದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಆರಂಭದಲ್ಲೇ ಹಲವೆಡೆ ತಾಂತ್ರಿಕ ಅಡಚಣೆ ಉಂಟಾಯಿತು. ಬೆಳಿಗ್ಗೆ ಆ್ಯಪ್‌ನಲ್ಲಿ ಮಾಹಿತಿ ನಮೂದಿಸಲು ಸಾಧ್ಯವಾಗಲಿಲ್ಲ. ಮಧ್ಯಾಹ್ನದ ವೇಳೆಗೆ ಸರ್ವರ್‌ ಡೌನ್‌ ಆಗಿ ಸಮಸ್ಯೆ ಉಂಟಾಯಿತು. ನಂತರ ಸರಿ ಹೋಯಿತು. ಜೊತೆಗೆ ನೆಟ್ವರ್ಕ್‌ ಕಿರಿಕಿರಿ ಒಟಿಪಿ ಬಾರದೆ ಕೆಲಸ ಸಮಸ್ಯೆಯಾಯಿತು ಎಂದು ಜಾತಿವಾರು ಗಣತಿಯಲ್ಲಿ ತೊಡಗಿರುವ ಶಿಕ್ಷಕರೊಬ್ಬರು ಮಾಹಿತಿ ನೀಡಿದರು. ಅಲ್ಲದೇ ಆ್ಯ‌ಪ್‌ನಲ್ಲಿ ಮಾಹಿತಿ ಯಾವ ರೀತಿ ನಮೂದಿಸಿಕೊಳ್ಳುವುದು ಎಂಬುದು ಗೊತ್ತಾಗದೆ ಕೆಲ ಶಿಕ್ಷಕರು ಪರದಾಡಿದರು. ಇದರಿಂದ ಹಲವೆಡೆ ವಿಳಂಬ ಉಂಟಾಯಿತು. ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಕೆಲ ಗಣತಿದಾರರು ಮ್ಯಾನ್ಯುಯಲ್‌ ಆಗಿ ಮಾಹಿತಿ ನಮೂದಿಸಿಕೊಳ್ಳಲು ಮುಂದಾದರು ಎಂಬ ಆರೋಪ ಕೇಳಿಬಂದಿದೆ.

ಕೈಯಲ್ಲಿ ಬರೆದುಕೊಂಡ ಗಣತಿದಾರರು!

ಸಮೀಕ್ಷೆಯ ಮಾಹಿತಿಯನ್ನು ಆ್ಯಪ್‌ನಲ್ಲಿಯೇ ನಮೂದಿಸಬೇಕು ಎಂಬ ಸೂಚನೆ ಇದ್ದರೂ ಬಂಗಾರಪೇಟೆಯಲ್ಲಿ ಗಣತಿದಾರರು ಸೋಮವಾರ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರಿಗೆ ಸಂಬಂಧಿಸಿದ ಸಮೀಕ್ಷೆ ನಡೆಸುವಾಗ ಮಾಹಿತಿಯನ್ನೇ ಕೈಯಲ್ಲಿ ಬರೆದುಕೊಂಡರು. ‘ತಾಂತ್ರಿಕ ಸಮಸ್ಯೆಯಿಂದಾಗಿ ಕೆಲವೆಡೆ ಮೊಬೈಲ್‌ ಆ್ಯಪ್‌ ಕಾರ್ಯನಿರ್ವಹಿಸುತ್ತಿಲ್ಲ. ಅಧಿಕೃತವಾಗಿ ಚಾಲನೆ ನೀಡುವ ಉದ್ದೇಶದಿಂದ ಕೈಯಲ್ಲಿಯೇ ನಮೂದಿಸಲಾಗಿದೆ. ಸಮಸ್ಯೆ ಸರಿ ಹೋದ ಮೇಲೆ ಆ್ಯಪ್‌ನಲ್ಲಿಯೇ ನಡೆಸಲಾಗುವುದು’ ಎಂದು ತಹಶೀಲ್ದಾರ್‌ ಕೆ.ಎನ್‌.ಸುಜಾತಾ ತಿಳಿಸಿದರು.

ರಾಜ್ಯ ಸರ್ಕಾರದ ಆದೇಶದಂತೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಲಾಗುತ್ತಿದೆ. ಇದು ಕೇವಲ ಸಮೀಕ್ಷೆಯಲ್ಲ; ರಾಜ್ಯದ ಅಭಿವೃದ್ಧಿಯ ದಿಕ್ಕನ್ನು ನಿರ್ಧರಿಸುವ ಐತಿಹಾಸಿಕ ಕಾರ್ಯ
–ಎಂ.ಎಲ್‌.ಅನಿಲ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.