
ಕೋಲಾರ: ಭಾರತ ಸಂವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಮಾಜಿ ಸಚಿವ ಟಿ.ಚನ್ನಯ್ಯ ಅವರ 41ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಜ.18ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆಯಲಿದೆ ಎಂದು ಅವರ ಪುತ್ರ ಬಾಲಾಜಿ ಚನ್ನಯ್ಯ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಸಂಸದರು, ಶಾಸಕರು, ಅಧಿಕಾರಿಗಳು, ಮುಖಂಡರು ಪಾಲ್ಗೊಳ್ಳಲಿದ್ದಾರೆ. ಚನ್ಮಯ್ಯ ಅಭಿಮಾನಿಗಳು, ಹಿತೈಷಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕು ಎಂದರು.
ಚನ್ನಯ್ಯ ಅವರು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ಮಾತೃ. ಮುಳಬಾಗಿಲು ಕ್ಷೇತ್ರದಿಂದ ಅವಿರೋಧವಾಗಿ ಗೆದ್ದು ಶಾಸಕರಾಗಿದ್ದ ಅವರು ಕೆಂಗಲ್ ಹನುಮಂತಯ್ಯ ಸರ್ಕಾರದಲ್ಲಿ ಎಂಟು ಖಾತೆಗಳ ಸಚಿವರಾಗಿದ್ದರು. ಕೆಲ ಕಾಲ ತಮಿಳುನಾಡು ರಾಜ್ಯಪಾಲರಾಗಿದ್ದರು. ಅದಕ್ಕೂ ಮೊದಲು ರಾಜ್ಯಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯರಾಗಿದ್ದರು. ಕೋಲಾರ ಜಿಲ್ಲೆಗೆ ವಿದ್ಯುತ್ ಸಂಪರ್ಕ ತಂದರು. ಅನೇಕ ಅಭಿವೃದ್ಧಿ ಕೆಲಸದಲ್ಲಿ ತೊಡಗಿದ್ದ ಚನ್ನಯ್ಯ ಅವರಂಥ ಮಹಾನ್ ವ್ಯಕ್ತಿಯನ್ನು ಈಗಿನ ಜನಾಂಗ ಮರೆತಿದೆ ಎಂದು ಹೇಳಿದರು.
ಚನ್ನಯ್ಯ ಹೆಸರು ಉಳಿಯುವಂತಾಗಬೇಕು. ಹೀಗಾಗಿ, ಗಾಂಧಿನಗರದ ಸ್ನೇಹಿತರು ಚನ್ನಯ್ಯ ಸ್ಮರಣೆ ಹಮ್ಮಿಕೊಳ್ಳಲಾಗಿದೆ. ರಂಗಮಂದಿರ ಆವರಣದಲ್ಲಿ ಅವರ ಪ್ರತಿಮೆ ನಿರ್ಮಿಸಬೇಕು ಎಂದು ತಿಳಿಸಿದರು.
ಚನ್ನಯ್ಯ ಮೊಮ್ಮಗ ದೀಪಕ್ ಮಾತನಾಡಿ, ಚನ್ನಯ್ಯ ಹೆಸರಲ್ಲಿ ಮ್ಯೂಸಿಯಂ ಮಾಡಬೇಕು, ಗಾಂಧಿನಗರದ ಸಮೀಪದ ಪ್ರದೇಶಕ್ಕೆ ಟಿ.ಚನ್ನಯ್ಯ ಹೆಸರಿಡಲಾಗವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಚ್.ಬಿ.ಗೋಪಾಲ್, ಹೂವಳ್ಳಿ ನಾರಾಯಣಸ್ವಾಮಿ, ಉಮಾಶಂಕರ್, ಕೃಷ್ಣಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.