ಕೋಲಾರ: ಜಿಲ್ಲೆಯಲ್ಲಿ ಕೈಗೊಂಡಿರುವ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಪಿಡಿಒಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
‘ಮನೆ ಮನೆಗೂ ಶುದ್ಧ ನೀರು ಸರಬರಾಜು ಮಾಡಲು ಸರ್ಕಾರವು ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ. ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಿ ಎಲ್ಲಾ ಗ್ರಾಮಗಳಿಗೆ ನೀರು ಪೂರೈಸಲು ಕ್ರಮ ವಹಿಸಬೇಕು’ ಎಂದರು.
‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಘಟಕಗಳಲ್ಲಿ ಸಮಸ್ಯೆಯಾದರೆ ತಕ್ಷಣವೇ ಕ್ರಮವಹಿಸಬೇಕು. ನೀರಿನ ಘಟಕಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ಶುದ್ಧ ಕುಡಿಯುವ ನೀರು ನೀಡಲು ನಿಗಾ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಬೂದು ನೀರು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸಮುದಾಯ ಇಂಗುಗುಂಡಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಯಾಗಬೇಕು. ಪಂಚಾಯಿತಿ ಸಿಬ್ಬಂದಿ ಈ ಬಗ್ಗೆ ಪರಿಶೀಲಿಸಿ ಬೂದು ನೀರು ನಿರ್ವಹಣಾ ಕಾಮಗಾರಿಗಳ ಉದ್ದೇಶ ಈಡೇರುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಸ್ವಚ್ಛ ಸಂಕೀರ್ಣ ಘಟಕಗಳಿಗೆ ಜಾಗದ ಸಮಸ್ಯೆ ಇರುವ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
‘ನರೇಗಾ ಯೋಜನೆ ವಿಚಾರವಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ಕೂಲಿಕಾರರ ಎಂಎಂಎಂಎಸ್ ಫೋಟೋಗಳ ಪರಿಶೀಲನೆ ಮಾಡಬೇಕು. ಈ ಫೋಟೋಗಳಲ್ಲಿ ಕೆಲ ಲೋಪಗಳು ಕಂಡು ಬರುತ್ತಿದ್ದು, ಈ ಬಗ್ಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ. ಇನ್ನುಮುಂದೆ ಯಾವುದೇ ಲೋಪ ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಬಗ್ಗೆ ಪ್ರಚಾರ ಮಾಡಬೇಕು. ಪಿಎಂಜೆಜೆಬಿವೈ ಒಂದು ಜೀವ ವಿಮಾ ಯೋಜನೆಯಾಗಿದ್ದು, ವಾರ್ಷಿಕ ಪ್ರೀಮಿಯಂ ₹ 436ಗೆ ₹ 2 ಲಕ್ಷದವರೆಗೆ ವಿಮೆ ದೊರೆಯಲಿದೆ. ಪಿಎಂಎಸ್‌ಬಿವೈ ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ಪ್ರೀಮಿಯಂ ₹ 20 ಕಟ್ಟಿದರೆ ₹ 2 ಲಕ್ಷದವರೆಗಿನ ರಕ್ಷಣೆ ಒದಗಿಸುತ್ತದೆ. ಗ್ರಾಮೀಣ ಭಾಗದ ಎಲ್ಲಾ ಅರ್ಹರನ್ನು ಈ ಯೋಜನೆಗೆ ನೋದಾಯಿಸಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್ ಮಾತನಾಡಿ, ‘ಜಿಲ್ಲೆಯಲ್ಲಿ ಕೂಸಿನ ಮನೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಕೂಸಿನ ಮನೆ ಕೇರ್ ಟೇಕರ್‌ಗಳಿಗೆ, ಗ್ರಂಥಪಾಲಕರಿಗೆ ಹಾಗೂ ಪಂಚಾಯಿತಿ ಸಿಬ್ಬಂದಿಗೆ ನಿಗದಿತ ಸಮಯದಲ್ಲಿ ವೇತನ ಪಾವತಿಸಬೇಕು. ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು. ತೆರಿಗೆ ವಸೂಲಾತಿ ಸೇರಿದಂತೆ ನಿಗದಿತ ಕೆಲಸ ಕಾರ್ಯಗಳನ್ನು ಯಾವುದೇ ವಿಳಂಬವಿಲ್ಲದೆ ಮುಗಿಸಬೇಕು’ ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎಚ್.ಎನ್.ಮಂಜುನಾಥ್ ಸ್ವಾಮಿ, ಸಹಾಯಕ ಯೋಜನಾ ಅಧಿಕಾರಿ ಎಸ್. ವೆಂಕಟಚಲಪತಿ, ಕಾರ್ಯಪಾಲಕ ಎಂಜಿನಿಯರ್, ಎಲ್ಲಾ ತಾಲ್ಲೂಕು ಕಾರ್ಯನಿರ್ವಾಅಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು, ಸಹಾಯಕ ನಿರ್ದೇಶಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಹಾಗೂ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಸಾರ್ವಜನಿಕರಿಂದ ಇ–ಸ್ವತ್ತುಗಳ ಬಗ್ಗೆ ದೂರುಗಳು ಬರುತ್ತಿದ್ದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿಮಯನುಸಾರ ಅರ್ಜಿಗಳನ್ನು ನಿಗದಿಯ ಸಮಯದಲ್ಲಿ ವಿಲೇವಾರಿ ಮಾಡಬೇಕುಡಾ.ಪ್ರವೀಣ್ ಪಿ.ಬಾಗೇವಾಡಿ ಜಿಲ್ಲಾ ಪಂಚಾಯಿತಿ ಸಿಇಒ
ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು. ತೆರಿಗೆ ವಸೂಲಾತಿ ಸೇರಿ ನಿಗದಿತ ಕೆಲಸ ಕಾರ್ಯಗಳನ್ನು ವಿಳಂಬವಿಲ್ಲದೆ ಮುಗಿಸಬೇಕುಟಿ.ಕೆ.ರಮೇಶ್ ಉಪಕಾರ್ಯದರ್ಶಿ ಜಿ.ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.