ಕೋಲಾರ: ಜಿಲ್ಲಾ ಸ್ಥಳೀಯ ಸಂಸ್ಥೆಗಳಿಂದ ₹2.51 ಕೋಟಿ ಗ್ರಂಥಾಲಯ ಕರ ಬಾಕಿ ಇದ್ದು, ಶೀಘ್ರ ವಸೂಲು ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಯೋಜನಾ ನಿರ್ದೇಶಕಿ ಅಂಬಿಕಾ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ 69 ನೇ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಗೆ ಬಂದು ಎಂಟು ತಿಂಗಳಾದರೂ ಇಷ್ಟೊಂದು ದೊಡ್ಡ ಮೊತ್ತದ ಗ್ರಂಥಾಲಯ ಕರ ಬಾಕಿ ಇರುವ ಬಗ್ಗೆ ತಮಗೆ ಮಾಹಿತಿ ನೀಡದಿರುವ ಬಗ್ಗೆ ಗ್ರಂಥಾಲಯ ಉಪನಿರ್ದೇಶಕ ಸಿ.ಗಣೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಯಾವ್ಯಾವ ವರ್ಷದಲ್ಲಿ ಎಷ್ಟು ಕರ ಬಾಕಿ ಇದೆ ಎಂಬ ಬಗ್ಗೆ ವಿವರಗಳನ್ನು ಯೋಜನಾ ನಿರ್ದೇಶಕರಿಗೆ ನೀಡಿ, ಶೀಘ್ರ ಬಾಕಿ ಕರ ವಸೂಲು ಮಾಡಿಸಿಕೊಳ್ಳುವಂತೆ ತಾಕೀತು ಮಾಡಿದರು.
ಇದೇ ಸಭೆಯಲ್ಲಿ 2025-26 ನೇ ಸಾಲಿಗೆ ₹1.45 ಕೋಟಿ ಮೊತ್ತದ ಬಜೆಟ್‍ಗೆ ಮತ್ತು ವಿವೇಚನಾ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಖರೀದಿಸಿರುವ ಪುಸ್ತಕಗಳ ಪಟ್ಟಿಗೆ ಅನುಮೋದನೆ ನೀಡಲಾಯಿತು. ಸ್ವಚ್ಛತಾ ಕೆಲಸ ಮಾಡುತ್ತಿರುವ ಶುಚಿಗಾರರು ಮತ್ತು ಗಣಕ ಯಂತ್ರ ನಿರ್ವಹಕರಾಗಿ ಕೆಲಸ ನಿರ್ವಹಿಸುತ್ತಿರುವವರ ಮಾಸಿಕ ₹1 ಸಾವಿರ ವೇತನ ಹೆಚ್ಚಿಸಲು ಒಪ್ಪಿಗೆ ಸೂಚಿಸಲಾಯಿತು. ಹಲವು ವರ್ಷಗಳಿಂದಲೂ ನನೆಗುದಿಗೆ ಬಿದ್ದಿರುವ ಹೈಟೆಕ್ ಗ್ರಂಥಾಲಯ ನಿರ್ಮಾಣದ ವಿಚಾರವಾಗಿಯೂ ಚರ್ಚೆ ನಡೆಯಿತು.
ಕೋಲಾರ ಹೊರವಲಯದ ಟಮಕ ಕೈಗಾರಿಕಾ ಪ್ರದೇಶದಲ್ಲಿ ಗ್ರಂಥಾಲಯ ಇಲಾಖೆಗೆ ನೀಡಿರುವ 4 ಶೆಡ್‍ಗಳಲ್ಲಿ 2 ಶೆಡ್‍ಗಳನ್ನು ಬಾಡಿಗೆ ನೀಡುವ ವಿಚಾರಕ್ಕೆ ಎಂ.ಆರ್.ರವಿ ಆಕ್ಷೇಪ ವ್ಯಕ್ತಪಡಿಸಿದರು.
ಗ್ರಂಥಾಲಯ ಬಳಕೆಗೆ ನೀಡಿರುವ ಶೆಡ್‍ಗಳನ್ನು ಬಾಡಿಗೆಗೆ ನೀಡುವುದು ಸರಿಯಾದ ನಿರ್ಧಾರವಲ್ಲ, ಶೆಡ್‍ಗಳ ಕುರಿತು ಸಂಪೂರ್ಣ ಮಾಹಿತಿ ಮತ್ತು ಜಾಗದ ಲಭ್ಯತೆ ಕುರಿತು ಮತ್ತೊಮ್ಮೆ ಮಾಹಿತಿ ನೀಡುವಂತೆ ಗ್ರಂಥಾಲಯ ಉಪನಿರ್ದೇಶಕರಿಗೆ ಸೂಚಿಸಿದರು.
ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಸಮಿತಿ ಸದಸ್ಯರಾದ ಬಿ.ವಿ.ಗೋಪಿನಾಥ್, ಕೆ.ಎಸ್.ಗಣೇಶ್, ಡಿಡಿಪಿಐ ಕೃಷ್ಣಮೂರ್ತಿ, ಬಿಇಒ ಮಧುಮಾಲತಿ, ಮಹಿಳಾ ಕಾಲೇಜಿನ ಪ್ರಾಂಶುಪಾಲ ಗಂಗಾಧರರಾವ್ ಇದ್ದರು.
ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಸಿ.ಗಣೇಶ ಸ್ವಾಗತಿಸಿ, ಗ್ರಂಥಾಲಯಾಧಿಕಾರಿ ನಾಗಮಣಿ ವಂದಿಸಿದರು.
ಹೈಟೆಕ್ ಗ್ರಂಥಾಲಯ ನಿರ್ಮಾಣ ಸಂಬಂಧ ಮೂರು ತಿಂಗಳೊಳಗಾಗಿ ಪರಿಷ್ಕೃತ ಯೋಜನಾ ವರದಿ ಸ್ವೀಕರಿಸಿ ಪ್ರಾಧಿಕಾರದ ಸಭೆ ಕರೆದು ಮಂಡಿಸಿದರೆ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದುಎಂ.ಆರ್.ರವಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.