ಕೋಲಾರ: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ (4ನೇ ಹಂತ) ಕೋಲಾರ ನಗರಸಭೆಯಲ್ಲಿ ₹ 17.26 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಕಾಮಗಾರಿಯ ಅವಧಿ ಮುಗಿದು 9 ತಿಂಗಳಾದರೂ ಶೇ 30 ಕೆಲಸ ಮುಗಿದಿಲ್ಲ. ಇತ್ತ ನಗರಸಭೆಯಿಂದ ಯಾವುದೇ ಕ್ರಮವೂ ಆಗಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೇವಲ ಪತ್ರ ವ್ಯವಹಾರವಷ್ಟೇ ನಡೆಯುತ್ತಿದ್ದು, ನಗರೋತ್ಥಾನ ಕಾಮಗಾರಿಗೆ ಗ್ರಹಣ ಬಡಿದಿದೆ. ಅರ್ಧಂಬರ್ಧ ಕಾಮಗಾರಿ ನಡೆದಿದ್ದು, ಹೇಳುವವರು ಕೇಳುವವರು ಇಲ್ಲವಾಗಿದ್ದಾರೆ. ಈ ಬಗ್ಗೆ ಜಯನಗರ ವಾರ್ಡ್‌ನ ಎಸ್.ಆರ್.ಮುರಳಿಗೌಡ ಸೇರಿದಂತೆ ನಗರಸಭೆಯ ಕೆಲ ಸದಸ್ಯರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
35 ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ಸಂಬಂಧ 2023ರ ಫೆಬ್ರುವರಿ 20ರಂದು ಕಾರ್ಯಾದೇಶ ನೀಡಲಾಗಿತ್ತು. ಕಾಮಗಾರಿಗೆ ಮಾರ್ಚ್ 16ರಂದು ಅಂದಿನ ಶಾಸಕ ಕೆ.ಶ್ರೀನಿವಾಸಗೌಡ, ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್ ಗಾಂಧಿವನದ ಸಮೀಪ ಚಾಲನೆ ನೀಡಿದ್ದರು.
2024ರ ಆಗಸ್ಟ್ 19ರೊಳಗೆ ಅಂದರೆ 18 ತಿಂಗಳ ಅವಧಿಯಲ್ಲಿ ಶೇ 100ರಷ್ಟು ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಗಡುವು ನೀಡಲಾಗಿತ್ತು. ಆದರೆ, ಗಡುವು ಮುಗಿದು 9 ತಿಂಗಳು ಕಳೆದಿದ್ದು, ಶೇ 30ರಷ್ಟು ಕಾಮಗಾರಿಯೂ ಪೂರ್ಣಗೊಂಡಿಲ್ಲ. ಅನೇಕ ಬಾರಿ ನೋಟಿಸ್ ನೀಡಿದ್ದರೂ ಪ್ರಯೋಜನವಾಗಿಲ್ಲ.
ಈ ಯೋಜನೆಯಡಿ ಗುತ್ತಿಗೆದಾರರು ಕೈಗೊಳ್ಳದೇ ಇರುವ ಬಾಕಿ ಕಾಮಗಾರಿಗಳಿಗೆ ಹೊಸದಾಗಿ ಅಂದಾಜುಪಟ್ಟಿ ಸಿದ್ಧಪಡಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ ಕೋಲಾರ ನಗರಸಭೆ ಪೌರಾಯುಕ್ತ ಪ್ರಸಾದ್ ಅವರಿಗೆ ಕಳೆದ ತಿಂಗಳು ಪತ್ರ ಕೂಡ ಬರೆದಿದ್ದಾರೆ. ಇದಲ್ಲದೇ, ನಿಗದಿಪಡಿಸಿದ 18 ತಿಂಗಳ ಅವಧಿ ಮುಗಿಯುತ್ತಿದ್ದಂತೆ ಟೆಂಡರ್ ರದ್ದುಪಡಿಸಲು ಎರಡು ನೋಟಿಸ್ ಕೂಡ ನೀಡಲಾಗಿದೆ. ಹೆಚ್ಚುವರಿ ಕಾಲಾವಕಾಶ ನೀಡಿ 2024ರ ಡಿಸೆಂಬರ್ 14ರೊಳಗೆ ಕಾಮಗಾರಿ ಮುಗಿಸದಿದ್ದರೆ ಬ್ಯಾಂಕ್ ಗ್ಯಾರಂಟಿ ಮುಟ್ಟುಗೋಲು ಹಾಕಿಕೊಂಡು ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆಯನ್ನೂ ಗುತ್ತಿಗೆದಾರರಿಗೆ ನೀಡಲಾಗಿದೆ. ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ನಗರಸಭೆಯ ಸಾಮಾನ್ಯಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಪೌರಾಯುಕ್ತ ಕೂಡ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ (4ನೇ ಹಂತ) ಕೋಲಾರ ನಗರಸಭೆಗೆ ವಿವಿಧ ಕಾಮಗಾರಿಗಳಿಗೆ ಒಟ್ಟು ₹ 34 ಕೋಟಿ ಕ್ರಿಯಾ ಯೋಜನೆಗೆ ನಗರೋತ್ಥಾನ ರಾಜ್ಯಮಟ್ಟದ ಸಮಿತಿಯು 2022ರಲ್ಲಿ ಅನುಮೋದನೆ ನೀಡಿತ್ತು.
ಜಿಲ್ಲೆಯ ಮೂರು ನಗರಸಭೆ, ಮೂರು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿಗೆ ಒಟ್ಟು ₹ 114.75 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಒಟ್ಟು ₹ 145 ಕೋಟಿ ಅನುದಾನ ಹಂಚಿಕೆಯಾಗಿತ್ತು.
ಜಿಲ್ಲೆಯಲ್ಲಿ ಪೌರಾಡಳಿತ ಇಲಾಖೆಯ ಯೋಜನೆಗಳ ಪ್ರಗತಿ ಕುಂಠಿತವಾಗಿರುವ ಬಗ್ಗೆ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಏಕರೂಪ್ ಕೌರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಸಕ ಕೊತ್ತೂರು ಮಂಜುನಾಥ್ ಕೂಡ ಸಭೆ ನಡೆಸಿ ಚಾಟಿ ಬೀಸಿದ್ದರು.
ಕಪ್ಪುಪಟ್ಟಿ ಮುಟ್ಟುಗೋಲಿಗೆ ಪತ್ರ
ಕಾಮಗಾರಿ ಬೇಗನೇ ಮುಗಿಸಲು ಗುತ್ತಿಗೆದಾರರಿಗೆ ಹಲವು ಬಾರಿ ನೋಟಿಸ್ ಸೂಚನೆಯೊಂದಿಗೆ ಹೆಚ್ಚುವರಿ ಕಾಲಾವಕಾಶ ನೀಡಿದರೂ ಕೆಲಸ ಪೂರ್ಣಗೊಂಡಿಲ್ಲ. ಹೀಗಾಗಿ ಗುತ್ತಿಗೆದಾರರ ಬ್ಯಾಂಕ್ ಗ್ಯಾರಂಟಿ ಮುಟ್ಟುಗೋಲು ಹಾಕಿಕೊಳ್ಳಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಬ್ಯಾಂಕ್‌ಗೆ ಪತ್ರ ಬರೆದಿದ್ದಾರೆ. ಅಲ್ಲದೇ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ.
ಕಾನೂನು ಕ್ರಮಕ್ಕೆ ಡಿ.ಸಿಗೆ ಪತ್ರ
ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸದ ಗುತ್ತಿಗೆದಾರ ನಾರಾಯಣಸ್ವಾಮಿ ಎಂಬುವರ ಮೇಲೆ ಕಾನೂನು ಪ್ರಕಾರ ಕ್ರಮ ವಹಿಸುವಂತೆ ಕೋಲಾರ ನಗರಸಭೆ ಪೌರಾಯುಕ್ತ ಪ್ರಸಾದ್ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರಿಗೆ ಪತ್ರ ಕೂಡ ಬರೆದಿದ್ದಾರೆ. ನಗರಸಭೆ ಸಾಮಾನ್ಯಸಭೆಯಲ್ಲಿ ಕೈಗೊಂಡ ನಿರ್ಣಯವನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೂ ಕ್ರಮ ಅಗಿಲ್ಲ ಏಕೆ?
ಗುತ್ತಿಗೆ ಅವಧಿ ಮುಗಿದರೂ ಶೇ 30 ಕಾಮಗಾರಿ ಆಗಿಲ್ಲ. ವಾರ್ಡ್‌ಗಳಲ್ಲಿ ಜನರು ನಮಗೆ ಬಯ್ಯುತ್ತಿದ್ದಾರೆ. ಇಷ್ಟಾಗಿಯೂ ಈವರೆಗೆ ಗುತ್ತಿಗೆದಾರರ ಮೇಲೆ ಕ್ರಮ ಆಗಿಲ್ಲ ಏಕೆ? ಕೂಡಲೇ ಕಪ್ಪು ಪಟ್ಟಿಗೆ ಸೇರಿಸಬೇಕು ಟೆಂಡರ್ ರದ್ದುಪಡಿಸಿ ಹೊಸದಾಗಿ ಕರೆಯಬೇಕು. ಸದರಿ ಗುತ್ತಿಗೆದಾರರ ಹಿಂದೆಯೂ ವಿಳಂಬ ಮಾಡುತ್ತಿರುವ ಬಗ್ಗೆ ಎಚ್ಚರಿಸಿದ್ದರೂ ಮತ್ತೆ ಅವರಿಗೇ ಟೆಂಡರ್ ನೀಡಲಾಗಿತ್ತು. ಕಾಮಗಾರಿ ವಿಳಂಬವಾದರೆ ಹಣ ಸರ್ಕಾರಕ್ಕೆ ವಾಪಸ್ ಹೋಗುತ್ತದೆ. ಹಿಂದೆಯೂ ಏಳೆಂಟು ಕೋಟಿ ಹಣ ವಾಪಸ್ ಹೋಗಿತ್ತು. ಸರ್ಕಾರದ ಯೋಜನೆಗಳನ್ನು ಕಾಲಕ್ಕೆ ತಕ್ಕಂತೆ ಕ್ರಿಯಾಯೋಜನೆ ರೂಪಿಸಿ ಟೆಂಡರ್ ಕರೆದು ಕಾಮಗಾರಿ ಅನುಷ್ಠಾನಗೊಳಿಸಬೇಕು. ಎಸ್.ಆರ್.ಮುರಳಿಗೌಡ ನಗರಸಭೆ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.