ADVERTISEMENT

ಕೋಲಾರ | ಬಿಜೆಪಿಯಲ್ಲೂ ಮನೆಯೊಂದು ಮೂರು ಬಾಗಿಲು!

ಕಮಲ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದ ಕೆಜಿಎಫ್‌ನ ಸಂಪಂಗಿ ಕುಟುಂಬದ ‘ನಾಮಪತ್ರ ವಾಪಸ್‌ ಪ್ರಕರಣ'

ಕೆ.ಓಂಕಾರ ಮೂರ್ತಿ
Published 2 ಜೂನ್ 2025, 7:29 IST
Last Updated 2 ಜೂನ್ 2025, 7:29 IST
ವೈ.ಸಂಪಂಗಿ
ವೈ.ಸಂಪಂಗಿ   

ಕೋಲಾರ: ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆ ಕಾಂಗ್ರೆಸ್‌ ಬಣಗಳ ನಡುವೆ ಅಲ್ಲೋಲಕಲ್ಲೋಹ ಮೂಡಿಸಿದ್ದರೆ, ಕೆಜಿಎಫ್‌ ನಾಮಪತ್ರ ವಾಪಸ್‌ ಪ್ರಕರಣ ಬಿಜೆಪಿಯಲ್ಲೂ ಬಿರುಗಾಳಿ ಎಬ್ಬಿಸಿದೆ.

ಪ್ರಮುಖ ಪ್ರತಿಪಕ್ಷವಾಗಿ ಕಾಂಗ್ರೆಸ್‌ ಬಣಗಳ ಜಗಳದ ಪ್ರಯೋಜನ ಪಡೆದು ತಿರುಗೇಟು ನೀಡಬೇಕಿದ್ದ ಕಮಲ ಪಾಳಯದಲ್ಲಿ ಈಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

ಮಾಜಿ ಸಚಿವ, ಮಾಜಿ ಶಾಸಕ, ಮಾಜಿ ಸಂಸದ ಹಾಗೂ ಜಿಲ್ಲಾ ಅಧ್ಯಕ್ಷರ ಮಾತುಗಳು ಹಾಗೂ ಪರಸ್ಪರ ಆರೋಪ, ಪ್ರತ್ಯಾರೋಪ ಜಿಲ್ಲೆಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿವೆ.

ADVERTISEMENT

ಇದಕ್ಕೆಲ್ಲಾ ಮುಖ್ಯ ಕಾರಣ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಟಿಎಪಿಸಿಎಂಎಸ್‌ ನಿರ್ದೇಶಕ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕೆಜಿಎಫ್‌ ಮಾಜಿ ಶಾಸಕ ವೈ.ಸಂಪಂಗಿ ಪುತ್ರ ಪ್ರವೀಣ್‌ ಕುಮಾರ್‌ ನಾಮಪತ್ರ ವಾಪಸ್‌ ಪಡೆದ ಪ್ರಕರಣ. ಇದರಿಂದ ಕೋಲಾರ ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್‌ ಅವಿರೋಧವಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ವಿಚಾರ ಸಾರ್ವಜನಿಕವಾಗಿ ಹಲವು ವದಂತಿಗಳಿಗೆ ಕಾರಣವಾಗಿತ್ತು. ಆದರೆ, ಅದಕ್ಕೆ ಬಿಜೆಪಿ ಮುಖಂಡರೇ ವಿವಿಧ ಬಣ್ಣ ಕಟ್ಟಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ಬಿಜೆಪಿ ಮುಖಂಡರೇ ಕಾಂಗ್ರೆಸ್‌ ಶಾಸಕನಿಗೆ ಹಾದಿ ಸುಲಭ ಮಾಡಿಕೊಟ್ಟ ಈ ಪ್ರಕರಣ ಈಗಾಗಲೇ ವಿಚಾರ ಬಿಜೆಪಿ ರಾಜ್ಯ ವರಿಷ್ಠರ ಗಮನಕ್ಕೂ ಬಂದಿದ್ದು ಕಾರಣ ಕೇಳಿದ್ದಾರೆ. ಈ ಸಂಬಂಧ ವರಿಷ್ಠರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಸಮಗ್ರ ಮಾಹಿತಿ ರವಾನಿಸಿದ್ದಾರೆ.

ಅಷ್ಟರಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್‌ ಹಾಗೂ ಖುದ್ದು ಸಂಪಂಗಿ ಪರಸ್ಪರ ಆರೋಪ ಮಾಡಿಕೊಂಡಿರುವುದು ಹೊಸ ತಿರುವು ನೀಡಿದೆ. ವರ್ತೂರು ಪ್ರಕಾಶ್‌ ಸಹಕಾರ ನೀಡದ ಕಾರಣ ವಾಪಸ್ ಪಡೆದಿರುವುದಾಗಿ ಸಂಪಂಗಿ ಹೇಳಿಕೊಂಡಿದ್ದಾರೆ. ಜೊತೆಗೆ ಕೆಜಿಎಫ್‌ ರಾಜಕೀಯ ಲೆಕ್ಕಾಚಾರದ (ಶತ್ರುವಿನ ಶತ್ರು ಮಿತ್ರ) ಹಿನ್ನೆಲೆ ನೀಡಿದ್ದಾರೆ.

ಈ ನಡುವೆ, ವರ್ತೂರು ಪ್ರಕಾಶ್‌ ಪತ್ರಿಕಾಗೋಷ್ಠಿ ನಡೆಸಿ ಸ್ವಪಕ್ಷೀಯರ ವಿರುದ್ಧವೇ ಗುಡುಗಿರುವುದು ಬಿರುಗಾಳಿ ಎಬ್ಬಿಸಿದೆ. ‘ಬಿಜೆಪಿ ದೊಡ್ಡವರೇ ಸೇರಿ ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್‌ ಬಳಿ ಮಣ್ಣು ತಿಂದು ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದ್ದಾರೆ’ ಎಂಬ ಆರೋಪ ಗಂಭೀರವಾದ ವಿಚಾರ. ಅವರ ಬಣದ ಮುಖಂಡರು ಮಾಜಿ ಸಂಸದ ಎಸ್‌.ಮುನಿಸ್ವಾಮಿ ಅವರನ್ನೂ ಎಳೆದು ತಂದಿದ್ದಾರೆ. ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಆರೋಪವನ್ನೂ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಹಣದ ವಿಚಾರವನ್ನು ಅಲ್ಲಗಳೆದಿರುವ ಕೊತ್ತೂರು ಮಂಜುನಾಥ್‌, ಸಂಪಂಗಿ ಕುಟುಂಬದೊಂದಿಗೆ ಮಾತುಕತೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ‘ಬಿಜೆಪಿಯವರು ನನಗೆ ಯಾವ ಬೆಂಬಲ ನೀಡಿಲ್ಲ. ಕೆಜಿಎಫ್ ಮಾಜಿ ಶಾಸಕಿ ರಾಮಕ್ಕ ಬಳಿ ಚರ್ಚಿಸಿದ ಅವರ ಬಳಿಕ ಮೊಮ್ಮಗನ ನಾಮಪತ್ರ ವಾಪಸ್ ಆಗಿದೆ. ಹೊರತು ಹಣ ನೀಡಿಲ್ಲ. ಕೋಟಿ ಕೋಟಿ ಕೊಡಲು ಸಾಧ್ಯವೇ ಇಲ್ಲ. ಒಂದು ವೇಳೆ ಕೊಡಬೇಕೆಂದರೆ ನೋಟನ್ನು ಝೆರಾಕ್ಸ್ ಮಾಡಿ ಹಂಚಬೇಕಾಗುತ್ತದೆ ಅಷ್ಟೇ’ ಎಂದಿದ್ದಾರೆ.

ಒಟ್ಟಿನಲ್ಲಿ ಡಿಸಿಸಿ ಬ್ಯಾಂಕ್‌ ಚುನಾವಣೆ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಮುಂದೆ ಹಾಲು ಒಕ್ಕೂಟದ (ಕೋಮುಲ್‌) ಚುನಾವಣೆಗೆ ದಿನಗಣನೇ ಆರಂಭವಾಗಿದ್ದು ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ವರ್ತೂರು ಪ್ರಕಾಶ್‌
ಓಂಶಕ್ತಿ ಚಲಪತಿ

‘ಮಣ್ಣು ತಿಂದು ವರ್ತೂರು ಪ್ರಕಾಶ್‌ಗೆ ಅಭ್ಯಾಸ’

‘ಮಣ್ಣು ತಿಂದ ಅಭ್ಯಾಸ ವರ್ತೂರು ಪ್ರಕಾಶ್‌ ಅವರಿಗೆ ಇರಬಹುದು. ಅದಕ್ಕೇ ಈ ರೀತಿ ಮಾತನಾಡುತ್ತಿದ್ದಾರೆ ಎಂಬುದು ನನ್ನ ಭಾವನೆ’ ಎಂದು ಮಾಜಿ ಶಾಸಕ ವೈ.ಸಂಪಂಗಿ ತಿರುಗೇಟು ನೀಡಿದ್ದಾರೆ. ‘ಬಾಯಿಗೆ ಬಂದಂತೆ ಮಾತನಾಡುವ ಅವರ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡಲಾರೆ. ಯಾರನ್ನೋ ಖುಷಿಪಡಿಸಲು ಮಾತನಾಡಿದ್ದಾರೆ. ಮೊದಲು ಪಕ್ಷದಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ. ಪಕ್ಷದ ಸಿದ್ಧಾಂತ ತಿಳಿದುಕೊಂಡು ಆಮೇಲೆ ನನಗೆ ಬುದ್ಧಿ ಹೇಳಲಿ. ಅವರಿಂದ ಪಾಠ ಕಲಿಯಬೇಕಿಲ್ಲ’ ಎಂದಿದ್ದಾರೆ. ‘ಚುನಾವಣೆ ವಿಚಾರದಲ್ಲಿ ಸಂಪಂಗಿ ಜೊತೆ ಮಾತನಾಡಿ ಎಂದು ಚಿಕ್ಕಬಳ್ಳಾಪುರದ ಮುನಿರಾಜು ಸಲಹೆ ನೀಡಿದ್ದಾರೆ. ಆದಕ್ಕೆ ವರ್ತೂರು ಪ್ರಕಾಶ್‌ ‘ಆ ನನ್ನ ಮಕ್ಕಳ ಜೊತೆ ಏಕೆ ಮಾತನಾಡಬೇಕು’ ಎಂದಿದ್ದಾರೆ. ನಾವೇನೂ ಇವರ ಮನೆ ಹಾಳುಗಳೇ’ ಎಂದು ಸಂಪಂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕೆಜಿಎಫ್‌ನಲ್ಲಿ ನನ್ನ ರಾಜಕೀಯ ಭಾಗವಾಗಿ ನಾನು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ರೂಪಕಲಾ ಗೋವಿಂದಗೌಡ ನನ್ನ ರಾಜಕೀಯ ವಿರೋಧಿಗಳು. ಅದೂ ಗೊತ್ತಿದ್ದು ಗೋವಿಂದಗೌಡ ಅಧ್ಯಕ್ಷರಾಗುತ್ತಾರೆ ಎಂದು ವರ್ತೂರು ಹೇಳುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದ್ದಾರೆ.

ಅವಕಾಶ ಕೊಟ್ಟ ಪಕ್ಷಕ್ಕೆ ಸಂಪಂಗಿ ಮೋಸ

ಶಾಸಕ ಸ್ಥಾನ ಅನುಭವಿಸಿದ್ದ ತಾಯಿಗೆ ಶಾಸಕ ಸ್ಥಾನ ಕಲ್ಪಿಸಿದ್ದ ಮಗಳಿಗೆ ಅವಕಾಶ ನೀಡಿದ್ದ ಪಕ್ಷಕ್ಕೇ ವೈ.ಸಂಪಂಗಿ ಮೋಸ ಮಾಡಿ ಯಾವುದೋ ಆಸೆಗೆ ಕಾಂಗ್ರೆಸ್ ಶಾಸಕರೊಂದಿಗೆ ಕೈಜೋಡಿಸಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಅನಿಲ್ ಕುಮಾರ್ ಬಲಗೈ ಬಂಟ ಮೈಲಾಂಡಹಳ್ಳಿ ಮುರಳಿ ಸಂಪಂಗಿ ಮಗನನ್ನು ಬೆಂಗಳೂರಿನಿಂದ ಕರೆದುಕೊಂಡು ಬಂದು ನಾಮಪತ್ರ ವಾಪಸ್ ತೆಗೆಸಿದ್ದಾರೆ. ಪಕ್ಷಕ್ಕೆ ಮೋಸ ಮಾಡುವುದು ಒಂದೇ ಹೆತ್ತ ತಾಯಿಗೆ ಮೋಸ ಮಾಡುವುದೂ ಒಂದೇ. ಇವರ ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ನಾನೂ ಹಾಗೂ ಪಕ್ಷದ ಜಿಲ್ಲಾ ಅಧ್ಯಕ್ಷರೂ ರಾಜ್ಯ ಅಧ್ಯಕ್ಷರ ಗಮನಕ್ಕೆ ತಂದಿದ್ದೇವೆ ವರ್ತೂರು ಪ್ರಕಾಶ್‌ ಮಾಜಿ ಸಚಿವ

ವರಿಷ್ಠರ ಗಮನಕ್ಕೆ ತರಲಾಗಿದೆ

ಬಿಜೆಪಿ ಮಾಜಿ ಶಾಸಕ ವೈ.ಸಂಪಂಗಿ ಪುತ್ರ ಪ್ರವೀಣ್‌ ಕುಮಾರ್‌ ನಾಮಪತ್ರ ಸಲ್ಲಿಸಿ ವಾಪಸ್‌ ಪಡೆದ ವಿಚಾರವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ನಾಮಪತ್ರ ಹಿಂಪಡೆಯುವ ಸಂಬಂಧ ಅವರು ನಮ್ಮೊಂದಿಗೆ ಚರ್ಚಿಸಿಲ್ಲ. ಈ ಬೆಳವಣಿಗೆಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಸೇರಿದಂತೆ ಹಲವು ಹಿರಿಯ ಗಮನಕ್ಕೆ ತಂದಿದ್ದೇನೆ. ಕ್ರಮ ಕೈಗೊಳ್ಳುವುದು ಅವರಿಗೆ ಬಿಟ್ಟ ವಿಚಾರ. ಪ್ರವೀಣ್‌ ಕುಮಾರ್‌ ಗೆಲ್ಲುವ ಭರವಸೆ ಇತ್ತು ಬಹಳಷ್ಟು ನಿರೀಕ್ಷೆ ಇತ್ತು. ಏಕೆ ವಾಪಸ್‌ ಪಡೆದಿದ್ದಾರೆ ಎಂಬುದೂ ಗೊತ್ತಿಲ್ಲ ಓಂಶಕ್ತಿ ಚಲಪತಿ ಜಿಲ್ಲಾ ಬಿಜೆಪಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.