ADVERTISEMENT

19 ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರದ ಸಾಧನೆ ಏನು?

ಏಳು ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಜಿಲ್ಲೆಗೆ ಏನೂ ತರಲಿಲ್ಲ: ಮಾಜಿ ಸಂಸದ ಆರೋಪ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 15:56 IST
Last Updated 21 ಫೆಬ್ರುವರಿ 2025, 15:56 IST
ಕೋಲಾರದಲ್ಲಿ ಶುಕ್ರವಾರ ಬಿಜೆಪಿ, ಜೆಡಿಎಸ್‌ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಂಸದ ಎಂ.ಮಲ್ಲೇಶ್‌ ಬಾಬು ಮಾತನಾಡಿದರು. ಎಸ್‌.ಮುನಿಸ್ವಾಮಿ, ಓಂಶಕ್ತಿ ಚಲಪತಿ, ಸಿಎಂಆರ್‌ ಶ್ರೀನಾಥ್‌ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಶುಕ್ರವಾರ ಬಿಜೆಪಿ, ಜೆಡಿಎಸ್‌ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಂಸದ ಎಂ.ಮಲ್ಲೇಶ್‌ ಬಾಬು ಮಾತನಾಡಿದರು. ಎಸ್‌.ಮುನಿಸ್ವಾಮಿ, ಓಂಶಕ್ತಿ ಚಲಪತಿ, ಸಿಎಂಆರ್‌ ಶ್ರೀನಾಥ್‌ ಪಾಲ್ಗೊಂಡಿದ್ದರು   

ಕೋಲಾರ: ‘ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮಂಜೂರಾಗಿದ್ದ ಕಾಮಗಾರಿಗಳಿಗೆ ಕಾಂಗ್ರೆಸ್‍ನವರು ಈಗ ಹಾರೆ, ಗುದ್ದಲಿಗಳನ್ನು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಹೋಗಿ ಭೂಮಿಪೂಜೆ ಮಾಡಿ ಜನರನ್ನು ಯಾಮಾರಿಸುತ್ತಿದ್ದಾರೆ. ಕಳೆದ 19 ತಿಂಗಳ ಅಧಿಕಾರಾವಧಿಯಲ್ಲಿ ಅವರು ಏನು ಮಾಡಿದ್ದಾರೆಂದು ಶ್ವೇತಪತ್ರ ಹೊರಡಿಸಲಿ’ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಸವಾಲು ಹಾಕಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಬಿಜೆಪಿ, ಜೆಡಿಎಸ್‌ನಿಂದ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಎಲ್ಲಾದರೂ ಒಂದು ಕಿ.ಮೀ. ರಸ್ತೆ ಅಭಿವೃದ್ಧಿ ಮಾಡಿದ್ದರೆ ತೋರಿಸಲಿ ನೋಡೋಣ. ನಮ್ಮ ಸರ್ಕಾರದ ಆರಂಭಿಸಿರುವ ಕಾಮಗಾರಿಗಳಿಗೆ ಟೇಪ್‌ ಕಟ್ ಮಾಡಲು ಅವರಿಗೆ ಸಮಯ ಸಾಕಾಗುವುದೇ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಸ್ವಾತಂತ್ರ್ಯ ನಂತರ ಕಾಂಗ್ರೆಸ್ಸೇತರ ಸಂಸದರನ್ನಾಗಿ ನನ್ನನ್ನು ಹಾಗೂ ಈ ಬಾರಿ ಮಲ್ಲೇಶ್ ಬಾಬು ಅವರನ್ನು ಕೋಲಾರ ಲೋಕಸಭಾ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ. ಆದರೆ, ಈ ಹಿಂದೆ 7 ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಯಾವ ಯೋಜನೆಯನ್ನೂ ಜಿಲ್ಲೆಗೆ ತರಲಿಲ್ಲ. ರೈಲ್ವೆ ಮಂತ್ರಿಯಾಗಿದ್ದರೂ ಅವರ ಕೊಡುಗೆ ಶೂನ್ಯ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ನಾನು ಸಂಸದನಾಗಿದ್ದ ವೇಳೆ ಜಿಲ್ಲೆಯ ರೈಲು ನಿಲ್ದಾಣಗಳ ಅಭಿವೃದ್ಧಿ, ಸೇತುವೆಗಳ ನಿರ್ಮಾಣ ಮಾಡಿದ್ದೇವೆ. ಅಂತರರಾಜ್ಯ ಸಂಪರ್ಕಕ್ಕೆ ಆದ್ಯತೆ ನೀಡಿದ್ದೇವೆ. ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್‌ ನಮ್ಮ ಭಾಗದಲ್ಲಿ ಪೂರ್ಣಗೊಳಿಸಲಾಗಿದೆ. ಹಲವಾರು ರಸ್ತೆ ಅಭಿವೃದ್ಧಿ ಮಾಡಿದ್ದೇವೆ’ ಎಂದರು.

‘ರಾಜ್ಯ ಸರ್ಕಾರ ಇಂದು ವಿದ್ಯುತ್ ಕಡಿತ ಮಾಡಿ ರೈತರಿಗೆ ತೊಂದರೆ ಕೊಡುತ್ತಿದೆ. ಟಿ.ಸಿ ಹಾಕಿಸಿಕೊಳ್ಳಲು ರೈತರು ₹ 2.5 ಲಕ್ಷ ನೀಡಬೇಕಿದೆ. ಜನನ ಮರಣ ಪ್ರಮಾಣ ಪತ್ರಕ್ಕೂ ಹಣ ಹೆಚ್ಚಿಸಿದ್ದಾರೆ. ನಗರ ಭಾಗದಲ್ಲಿ ಸರಿಯಾಗಿ ತೆರಿಗೆ ಸಂಗ್ರಹ ಮಾಡುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರು ವೇತನ ಹೆಚ್ಚಳಕ್ಕಾಗಿ ಹೋರಾಟ ಮಾಡಿದರೆ ಲಾಠಿ ಪ್ರಹಾರ ಮಾಡುತ್ತಾರೆ. ಜೆಜೆಎಂನಲ್ಲಿ ಕಳಪೆ ಕಾಮಗಾರಿಯಾಗುತ್ತಿದ್ದು, ಅಲ್ಲಿಯೂ ಗುತ್ತಿಗೆದಾರರ ಬಳಿ ಲಂಚ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ಗ್ಯಾರಂಟಿ ಯೋಜನೆಗಳು ಸರಿಯಾಗಿ ಜಾರಿಯಾಗುತ್ತಿಲ್ಲ. ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ಜನರು ಈ ಹಿಂದೆ 60 ವರ್ಷ ಕಾಂಗ್ರೆಸ್‍ ನೋಡಿದ್ದು, ರಾಜ್ಯ, ರಾಷ್ಟ್ರದ ಅಭಿವೃದ್ಧಿಗೆ ಎನ್‍ಡಿಎ ಅಗತ್ಯ ಎಂದು ತೀರ್ಮಾನಿಸಿದ್ದಾರೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಎಂದರೆ ಏನು ಅರ್ಥ? 14 ನಿವೇಶನ ವಾಪಸ್ ಮಾಡಿದ್ದು ಏಕೆ? ಕ್ಲೀನ್ ಚಿಟ್ ಬಂದಿದ್ದೇ ತಡ ಸಚಿವರು ಭಾರಿ ಖುಷಿಯಾಗಿದ್ದಾರೆ. ಲೋಕಾಯುಕ್ತಕ್ಕೆ ಬೇಕಿರುವ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ಪ್ರಕರಣವನ್ನು ಖುಲಾಸೆಗೊಳಿಸಿದ್ದಾರೆ. ಮುಂದೆ ಅವರಿಗೆ ಸಂಕಷ್ಟ ಎದುರಾಗಲಿದೆ’ ಎಂದು ಹೇಳಿದರು.

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ‘ಶ್ರೀನಿವಾಸಪುರದಲ್ಲಿ ರೈಲ್ವೆ ವರ್ಕ್‍ಶಾಪ್‍ಗೆ ನಿಗದಿಪಡಿಸಿರುವ ಭೂಮಿಯ ನವೀಕರಣವು ಪ್ರತಿವರ್ಷವೂ ನಡೆಯುತ್ತಲೇ ಇದೆ ಹೊರತು ಜಾರಿಯಾಗುತ್ತಿಲ್ಲ. ಕೆ.ಎಚ್.ಮುನಿಯಪ್ಪ ಸಂಸದರಾಗಿದ್ದ ವೇಳೆ ಆ ಕೆಲಸ ಮಾಡಿದ್ದರೆ ಎಲ್ಲವೂ ಸರಿಹೋಗುತ್ತಿತ್ತು’ ಎಂದರು.

‘ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುತ್ತೀರಿ. ಆದರೆ, ಕೇಂದ್ರದ ಯಾವುದೇ ಯೋಜನೆಗೆ ಭೂಮಿ ನೀಡಬೇಕಿರುವುದು ರಾಜ್ಯ ಸರ್ಕಾರ. ಅವರು ನೀಡದೇ ಇದ್ದರೆ ಏನು ಮಾಡುವುದಕ್ಕೆ ಆಗುತ್ತದೆ? ಇದರ ಬಗ್ಗೆಯೂ ಮಾತನಾಡಬೇಕಲ್ಲವೇ?’ ಎಂದರು.

‘ಈ ಬಾರಿ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಕೇಂದ್ರದ ಬಜೆಟ್ ಐತಿಹಾಸಿಕವಾಗಿದ್ದು, ಕೃಷಿ, ಎಂಎಸ್‌ಎಂಇ, ಬಂಡವಾಳ ಹೂಡಿಕೆ, ರಫ್ತಿಗೆ ಆದ್ಯತೆ ನೀಡಲಾಗಿದೆ. ರೈತರು, ಮಹಿಳೆಯರು, ಯುವಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ದೇಶವೂ ಅಭಿವೃದ್ಧಿ ಪಥದತ್ತ ಸಾಗುವಂತಾಗುತ್ತದೆ. ಕಾಂಗ್ರೆಸ್‍ನವರು ಆರೋಪ ಬಿಟ್ಟು ಅರ್ಥ ಮಾಡಿಕೊಳ್ಳಬೇಕು. ಮಾರ್ಚ್ 10 ರಂದು ಆರಂಭವಾಗಲಿರುವ ಸದನದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಕ್ಯಾನ್ಸರ್ ಆಸ್ಪತ್ರೆ ಆರಂಭಿಸುವುದು ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಮನವಿ ಸಲ್ಲಿಸಿ, ಚರ್ಚೆ ಮಾಡಲಾಗುವುದು. ಬಿಜಿಎಂಎಲ್‍ನಲ್ಲಿ ಸಂಗ್ರಹವಾಗಿರುವ ಗುಡ್ಡವನ್ನು ಫಿಲ್ಟರ್‌ ಮಾಡಲು ಜೂನ್-ಜುಲೈನಲ್ಲಿ ಟೆಂಡರ್ ಕರೆಯಲಾಗುವುದು’ ಎಂದು ಭರವಸೆ ನೀಡಿದರು.

‘ಬೆಮಲ್ ಹೊರಗುತ್ತಿಗೆ ಕಾರ್ಮಿಕರಿಗೆ ನಾನಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ, ಕಾರ್ಮಿಕರನ್ನು ಕಾಯಂಗೊಳಿಸಲು ಸಾಧ್ಯವಿಲ್ಲ ಎಂಬುದಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ’ ಎಂದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ‘ಮಹಿಳೆಯರು, ರೈತರಿಗೆ ಅತ್ಯುತ್ತಮ ಹಾಗೂ ಆಶಾದಾಯಕ ಬಜೆಟ್ ಇದಾಗಿದೆ. 100 ರೈತ ಜಿಲ್ಲೆ ಗುರುತಿಸಿ ವಿಶೇಷ ಪ್ರಾಧಾನ್ಯ ನೀಡಿ ಮಾದರಿ ಕೃಷಿ ಜಿಲ್ಲೆಗಳಾಗಿಸಲು ಪಣ ತೊಟ್ಟಿರುವುದು ಅಖಂಡ ಭಾರತದ ಎಲ್ಲ ವರ್ಗದವರು ಸ್ವಾಭಿಮಾನದಿಂದ ಬದುಕಲು ಸಹಕಾರಿಯಾಗಿದೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ, ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರೇಗೌಡ, ಮಾಧ್ಯಮ ಪ್ರಮುಖ್ ಪ್ರವೀಣ್ ಗೌಡ, ಸಹ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಅಪ್ಪಿ ನಾರಾಯಣಸ್ವಾಮಿ, ವಿಜಯಕುಮಾರ್‌, ರಾಜೇಶ್‌ ಸಿಂಗ್‌, ಬಾಲಾಜಿ, ಜೆಡಿಎಸ್ ಮುಖಂಡ ಬಣಕನಹಳ್ಳಿ ನಟರಾಜ್ ಇದ್ದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 19 ತಿಂಗಳಾಗಿದೆ. ಉಸ್ತುವಾರಿ ಸಚಿವರು ನಾಲ್ವರು ಶಾಸಕರು ಇದ್ದಾರೆ. ಅವರು ಜಿಲ್ಲೆಗೆ ಏನು ಮಾಡಿದ್ದಾರೆಂದು ಪತ್ರಕರ್ತರು ಪ್ರಶ್ನಿಸಬೇಕು.
–ಎಸ್‌.ಮುನಿಸ್ವಾಮಿ, ಮಾಜಿ ಸಂಸದ
ಕೆಜಿಎಫ್‌ನ ಉರಿಗಾಂ ಹಾಗೂ ಕೋರಮಂಡಲದ ನೂತನ ರೈಲು ನಿಲ್ದಾಣದ ಉದ್ಘಾಟನೆಗೆ ರೈಲ್ವೆ ಇಲಾಖೆ ರಾಜ್ಯ ಸಚಿವ ಸೋಮಣ್ಣ ಮಾರ್ಚ್ ಮೊದಲ ವಾರ ಜಿಲ್ಲೆಗೆ ಬರಲಿ‌ದ್ದಾರೆ.
–ಎಂ.ಮಲ್ಲೇಶ್‌ ಬಾಬು, ಸಂಸದ

‘ರಾಜ್ಯದಲ್ಲಿ ಷರಿಯಾ ಕಾನೂನು ಇದೆಯೇ’

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದಲೂ ಗಲಭೆ ಪ್ರಕರಣಗಳು ಹೆಚ್ಚಾಗಿವೆ. ಒಂದು ಸಮುದಾಯವನ್ನು ಮೆಚ್ಚಿಸುತ್ತಿದ್ದಾರೆ. ಮೈಸೂರಿನ ಉದಯಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥನನ್ನು ತಮಗೆ ಒಪ್ಪಿಸಿ ಶಿಕ್ಷೆ ನೀಡುತ್ತೇವೆ ಎಂಬುದಾಗಿ ಕೆಲವರು ಹೇಳುತ್ತಾರೆ. ಪೊಲೀಸ್ ಠಾಣೆಗೆ ಕಲ್ಲು ಹೊಡೆದರೂ ಅಂಥವರನ್ನು ಬಂಧಿಸುವುದಿಲ್ಲ. ರಾಜ್ಯದಲ್ಲಿ ಏನಾದರೂ ಷರಿಯಾ ಕಾನೂನು ಇದೆಯೇ? ಆ ರೀತಿ ಮಾಡುವುದಾದರೆ ಪಾಕಿಸ್ತಾನಕ್ಕೆ ಹೋಗಿ’ ಎಂದು ಮಾಜಿ ಸಂಸದ ಮುನಿಸ್ವಾಮಿ ಕಿಡಿಕಾರಿದರು.

ಕೋಚಿಮುಲ್–ತನಿಖೆಗೆ ಒತ್ತಾಯ

ಕೋಚಿಮುಲ್‌ನಲ್ಲಿ ನಡೆದಿರುವ ಭಷ್ಟಾಚಾರಗಳ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕೆಂದು ಸಂಸದ ಎಂ.ಮಲ್ಲೇಶ್‌ ಬಾಬು ಆಗ್ರಹಿಸಿದರು.

‘ಹಾಲು ಒಕ್ಕೂಟದ ಅವ್ಯವಹಾರಗಳ ಬಗ್ಗೆ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರೇ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರು ವಿರುದ್ಧ ಕ್ರಮ ವಹಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.