ADVERTISEMENT

ಕೋಲಾರ: ನೇತ್ರದಾನ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 17:42 IST
Last Updated 1 ಸೆಪ್ಟೆಂಬರ್ 2018, 17:42 IST

ಕೋಲಾರ: ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣಾ ಘಟಕವು ಇಲ್ಲಿ ಶನಿವಾರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಎಸ್ಎನ್ಆರ್ ಸುಗುಣ ಹಾಗೂ ಸುವರ್ಣ ಸೆಂಟ್ರಲ್ ಶಾಲೆ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ನೇತ್ರದಾನ ಮಾಡುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ನೇತ್ರದಾನದ ಮಹತ್ವ ಸಾರುವ ಫಲಕಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಕರಪತ್ರ ಹಂಚಿದರು.

‘ಮನುಷ್ಯನ ಸಾವಿನ ನಂತರ ಕಣ್ಣುಗಳನ್ನು ಸುಡದೆ ಅಥವಾ ಮಣ್ಣು ಮಾಡದೆ ಅಂಧರಿಗೆ ದಾನ ಮಾಡುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಿ. ಯಾವುದೇ ವಯೋಮಾನದವರು ನೇತ್ರ ದಾನ ಮಾಡಬಹುದು. ಸಾವಿನ ನಂತರ 6 ತಾಸಿನೊಳಗೆ ನೇತ್ರದಾನ ಮಾಡಬೇಕು’ ಎಂದು ವಿದ್ಯಾರ್ಥಿಗಳು ಸಲಹೆ ನೀಡಿದರು.

ADVERTISEMENT

‘ವಿಶ್ವದಲ್ಲಿ 40 ದಶಲಕ್ಷಕ್ಕೂ ಹೆಚ್ಚು ಅಂಧರಿದ್ದಾರೆ. ಭಾರತದಲ್ಲಿ ವಿವಿಧ ಕಾರಣಗಳಿಂದ 9 ದಶಲಕ್ಷ ಮಂದಿ ಅಂಧರಾಗಿದ್ದಾರೆ. ಕಾರ್ನಿಯಾ ಸಮಸ್ಯೆಯಿಂದ 3 ಲಕ್ಷ ಮಂದಿ ಅಂಧರಾಗಿದ್ದು, ಅವರಿಗೆ ಕಣ್ಣು ದಾನ ಮಾಡಿದರೆ ಕಾರ್ನಿಯಾ ಟ್ರಾನ್ಸ್‌ಪ್ಲಾಂಟ್ ಪರೀಕ್ಷೆ ಮಾಡಬಹುದು’ ಎಂದು ನೇತ್ರ ತಜ್ಞರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.