ಕೋಲಾರ: ‘ಪಿ.ಎಂ ರ‍್ಯಾಲಿಯಲ್ಲಿ ಭಾಗಿ ಆಗಿದ್ದು, ಪ್ರಧಾನಿ ನಿವಾಸಕ್ಕೆ ತೆರಳಿ ನರೇಂದ್ರ ಮೋದಿ ಜೊತೆ ಫೋಟೊ ತೆಗೆಸಿಕೊಂಡಿದ್ದು, ಉಪರಾಷ್ಟ್ರಪತಿ, ರಕ್ಷಣಾ ಸಚಿವ ಹಾಗೂ ವಿವಿಧ ಪಡೆಗಳ ಅಧಿಕಾರಿಗಳನ್ನು ಭೇಟಿಯಾಗಿದ್ದು ಜೀವನದಲ್ಲಿ ಎಂದಿಗೂ ಮರೆಯಲಾಗದ ಕ್ಷಣ. ಮತ್ತಷ್ಟು ಸಾಧಿಸುವ ಛಲವನ್ನು ನನ್ನಲ್ಲಿ ತುಂಬಿದೆ’
ನವದೆಹಲಿಯಲ್ಲಿ ಈಚೆಗೆ ನಡೆದ ಗಣರಾಜ್ಯೋತ್ಸವ ಪರೇಡ್ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಬ್ಯಾನರ್ ಹಾಗೂ ಚಾಂಪಿಯನ್ಸ್ ಟ್ರೋಫಿ ಜಯಿಸಿದ ಕರ್ನಾಟಕ–ಗೋವಾ ಎನ್‌ಸಿಸಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಕೋಲಾರದ ಕೆ.ಎಂ.ಶ್ರುತಿ ಅವರ ಖುಷಿಯ ಮಾತುಗಳಿವು.
ರಾಷ್ಟ್ರದ ವಿವಿಧ ರಾಜ್ಯಗಳ 17 ಎನ್‌ಸಿಸಿ ನಿರ್ದೇಶನಾಲಯ ಘಟಕಗಳಿಂದ ಆಯ್ಕೆಯಾಗಿದ್ದ ಕೆಡೆಟ್‌ಗಳು ಗಣರಾಜ್ಯೋತ್ಸವದ ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
‘ಗಣರಾಜ್ಯೋತ್ಸವ ಪರೇಡ್ ಹಾಗೂ ಪ್ರಧಾನಿಯನ್ನು ಕೇವಲ ಪತ್ರಿಕೆ, ಟಿ.ವಿಗಳಲ್ಲಷ್ಟೇ ನೋಡಿದ್ದೆ. ಈಗ ಅವರ ಮುಂದೆಯೇ ನಿಂತು ಸಂವಾದ ನಡೆಸುವ, ಪಥಸಂಚಲನ ನಡೆಸುವ ಅವಕಾಶ ನನಗೆ ಲಭಿಸಿತು. ಅವರು ಯುವ ಶಕ್ತಿ, ವಿಕಸಿತ ಭಾರತದ ಬಗ್ಗೆ ಮಾತನಾಡಿದರು. ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಂದ ಪ್ರಶಸ್ತಿ ಪಡೆಯುವ ಸುಯೋಗ ಸಿಕ್ಕಿತು. ಸಮೂಹ ನೃತ್ಯದಲ್ಲಿ ಮೊದಲ ಸ್ಥಾನದೊಂದಿಗೆ ಮೆಡಲ್ ಸಿಕ್ಕಿತು. ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿ ಸಮಗ್ರ ಚಾಂಪಿಯನ್ ಆಗಿ ಪ್ರಧಾನಮಂತ್ರಿ ಟ್ರೋಫಿ ಎತ್ತಿ ಹಿಡಿದೆವು’ ಎಂದು ಹೇಳುತ್ತಾ ಸಂಭ್ರಮಿಸಿದರು.
‘ನವದೆಹಲಿಯ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ನಡೆದ ಪಿ.ಎಂ ರ‍್ಯಾಲಿ ಕಾರ್ಯಕ್ರಮದಲ್ಲಿ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಲ್ಗೊಂಡಿದ್ದರು. ಪಥಸಂಚಲನ ನಡೆಸಿ ಅವರಿಗೆ ಗೌರವ ವಂದನೆ ಸಲ್ಲಿಸಿದೆವು’ ಎಂದರು.
‘ಈ ಗೌರವ ಎಲ್ಲರಿಗೂ ಸಿಗುವಂಥದ್ದಲ್ಲ. ಸತತ ಪರಿಶ್ರಮ, ಪೋಷಕರ ಸಹಕಾರ, ಕಾಲೇಜಿನ ಪ್ರೋತ್ಸಾಹ ಹಾಗೂ ಎನ್‌ಸಿಸಿ ಅಧಿಕಾರಿಗಳ ಮಾರ್ಗದರ್ಶನ ನನಗೆ ಈ ಅವಕಾಶ ಕಲ್ಪಿಸಿತು. ಬೆಂಗಳೂರಿಗೆ ಬಂದಾಗ ಅದ್ದೂರಿ ಸ್ವಾಗತ ಲಭಿಸಿತು, ರಾಜ್ಯಪಾಲರನ್ನು ಭೇಟಿ ಮಾಡಿದೆವು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಶ್ರುತಿ ಬೆಂಗಳೂರಿನ ನಾಗರಬಾವಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ತಾಂತ್ರಿಕ ಸಂಸ್ಥೆಯಲ್ಲಿ ಬಿ.ಇ (ಕಂಪ್ಯೂಟರ್ ಸೈನ್ಸ್) ಐದನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆಯಷ್ಟೇ ಎನ್‌ಸಿಸಿಗೆ ಸೇರಿದ್ದರು. ಇವರ ತಂದೆ ಎನ್.ಮಹದೇವ್. ತಾಯಿ ಸಿ.ಎನ್.ಕಸ್ತೂರಿ ಕೋಲಾರದ ಸುವರ್ಟ್ ಸೆಂಟ್ರಲ್ ಶಾಲೆಯಲ್ಲಿ ಮ್ಯೂಸಿಕ್ ಟೀಚರ್ ಆಗಿದ್ದಾರೆ. ಸಹೋದರ ಕೆ.ಎಂ.ಮನು ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾನೆ.
ಬೆಂಗಳೂರಿನಲ್ಲಿ ಬಿ.ಇ ಓದುತ್ತಿರುವ ಕೆ.ಎಂ.ಶ್ರುತಿ ಗಣರಾಜ್ಯೋತ್ಸವ ಪರೇಡ್ ಸಂಭ್ರಮದ ಅನುಭವ ಹಂಚಿಕೊಂಡ ಸಾಧಕಿ ಶಿಬಿರಕ್ಕೆ ಲೀಡ್ ಸಿಂಗರ್ ಆಗಿ ಅವಕಾಶ
ಪ್ರಧಾನಿ ಭೇಟಿಯಾಗುವ ಅವಕಾಶ ಸಿಗುತ್ತದೆ ಎಂಬ ಆಸೆಯಿಂದಲೇ ನಾನು ಎನ್‌ಸಿಸಿ ಸೇರಿದ್ದೆ. ಆ ನನ್ನ ಕನಸು ನನಸು ಮಾಡಿಕೊಳ್ಳುವುದರ ಜೊತೆಗೆ ಎಲ್ಲರಿಂದ ಮೆಚ್ಚುಗೆಯೂ ಸಿಗುತ್ತಿದೆಕೆ.ಎಂ.ಶ್ರುತಿ ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.