ADVERTISEMENT

ವಿಚಿತ್ರ ಪ್ರೇಮ ಪ್ರಕರಣ: ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ

ಕೆಂದಟ್ಟಿ ಬಳಿ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:13 IST
Last Updated 29 ಜನವರಿ 2026, 6:13 IST
ಯಲ್ಲೇಶ್
ಯಲ್ಲೇಶ್   

ಕೋಲಾರ: ಅಕ್ರಮ ಸಂಬಂಧ ಪ್ರಕರಣದಲ್ಲಿ ಲಾಂಗ್‌ಗಳಿಂದ ಹಲ್ಲೆ ನಡೆಸಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ –75ರ ಕೆಂದಟ್ಟಿ ಗೇಟ್ ಬಳಿ ನಡೆದಿದೆ.

ತಾಲ್ಲೂಕಿನ ನರಸಾಪುರದ ಯಲ್ಲೇಶ್ (45) ಕೊಲೆಯಾದ ವ್ಯಕ್ತಿ. ಕೆಂದಟ್ಟಿ ಬಳಿ ಶವ ಪತ್ತೆಯಾಗಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಇದೊಂದು ವಿಚಿತ್ರ ಪ್ರೇಮ ಪ್ರಕರಣವಾಗಿದೆ. ಪತಿಗೆ ಪತ್ನಿ ಮೇಲೆ ಪ್ರೀತಿ. ಆದರೆ, ಆ ಪತ್ನಿಗೆ ಪ್ರಿಯಕರನ ಮೇಲೆ ಪ್ರೀತಿ ಮೂಡಿದೆ. ಆಕೆಗಾಗಿ ಈ ಪ್ರಿಯಕರ ಕಟ್ಟಿಕೊಂಡ ಹೆಂಡತಿಯನ್ನೇ ಬಿಟ್ಟಿದ್ದ. ಅದೀಗ ಆತನ ಕೊಲೆಯಲ್ಲಿ ಅಂತ್ಯಗೊಂಡಿದೆ.

ADVERTISEMENT

ಕಳೆದ ರಾತ್ರಿ ಡೇರಿಗೆ ಹಾಲು ಹಾಕಿ ವಾಪಸ್ ಬರುವ ವೇಳೆ ಯಾರೋ ದುಷ್ಕರ್ಮಿಗಳು ಯಲ್ಲೇಶ್‌ ಅವರಿದ್ದ ಬೈಕ್ ಅಡ್ಡಗಟ್ಟಿ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ಲಾಂಗು ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆಯಾದ ಯಲ್ಲೇಶ್‌ ತನ್ನ ಪತ್ನಿಯನ್ನು ಬಿಟ್ಟು ನರಸಾಪುರ ಗ್ರಾಮದ ಸಂತೋಷ್ ಎಂಬುವರ ಹೆಂಡತಿಯನ್ನು ಕೆರೆದುಕೊಂಡು ಬಂದು ಮನೆಯಲ್ಲಿ ಇರಿಸಿಕೊಂಡು ಆರೇಳು ವರ್ಷಗಳಿಂದ ‌ಸಂಸಾರ ನಡೆಸುತ್ತಿದ್ದ. ಮೊದಲಿನ ಪತ್ನಿಯ ಯಲ್ಲೇಶ್ ನನ್ನು ಬಿಟ್ಟು ತವರು ಮನೆ ಸೇರಿಕೊಂಡಿದ್ದರು. ಈ ಮಧ್ಯೆ, ಯಲ್ಲೇಶ್‌ ಮೇಲೆ ಸಂತೋಷ್‌ ಹಗೆ ಸಾಗಿಸುತ್ತಿದ್ದ. ಈಚೆಗೆ ಯಲ್ಲೇಶ್ ನನ್ನು ಕೊಲೆ ಮಾಡುವುದಾಗಿ ಆಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿಯೇ ಬಿಟ್ಟಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ, ಸೋಕೋ ತಂಡ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸುವ ಕೆಲಸ ಮಾಡಿವೆ. ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.