ADVERTISEMENT

ಕೋಲಾರ: 11ಕ್ಕೆ ಸ್ನಾತಕೋತ್ತರ ಕೋರ್ಸ್‌ಗಳ ಉದ್ಘಾಟನೆ

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಉತ್ತರ ವಿ.ವಿ ಕುಲಪತಿ ಕೆಂಪರಾಜು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 12:43 IST
Last Updated 1 ಸೆಪ್ಟೆಂಬರ್ 2018, 12:43 IST

ಕೋಲಾರ: ‘2018–19ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಉದ್ಘಾಟನಾ ಸಮಾರಂಭ ನಗರದ ದೇವರಾಜ ಅರಸು ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಸೆ.3ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಂಗಳೂರು ವಿ.ವಿ ವಿಭಜನೆ ನಂತರ ಸ್ನಾತಕೋತ್ತರ ಪ್ರಥಮ ವರ್ಷಕ್ಕೆ ಶೇ 95ರಷ್ಟು ವಿದ್ಯಾರ್ಥಿಗಳು ದಾಖಲಾಗಿದ್ದಾರೆ’ ಎಂದರು.

‘ದೇವರಾಜ ಅರಸು ವೈದ್ಯಕೀಯ ವಿಶ್ವವಿದ್ಯಾಲಯ ಕುಲಪತಿ ಡಾ.ಸಿ.ವಿ.ರಘುವೀರ್ ಸಮಾರಂಭ ಉದ್ಘಾಟಿಸುತ್ತಾರೆ. ಬೆಂಗಳೂರು ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎ.ರಂಗನಾಥ್, ವಾಣಿಜ್ಯ ಮತ್ತು ನಿರ್ವಹಣಾ ನಿಕಾಯ ನಿವೃತ್ತ ಡೀನ್ ಕೆ.ಈರೇಶಿ, ಕಲಾ ನಿಕಾಯ ನಿವೃತ್ತ ಡೀನ್ ಪಿ.ಎಸ್.ಜಯರಾಮು ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ’ ಎಂದು ಹೇಳಿದರು.

ADVERTISEMENT

‘ವಿ.ವಿ ವ್ಯಾಪ್ತಿಯ ಸರ್ಕಾರಿ ಕಾಲೇಜುಗಳಲ್ಲಿ ಶೇ 94 ರಷ್ಟು ಹಾಗೂ ಖಾಸಗಿ ಕಾಲೇಜುಗಳಲ್ಲಿ ಶೇ 70ರಷ್ಟು ದಾಖಲಾತಿಯಾಗಿದೆ. ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಕೋರ್ಸ್‌ಗಳಿಗೆ ಲಭ್ಯವಿರುವ ಸೀಟುಗಳಿಗೆ ಮೆರಿಟ್‌ ಮತ್ತು ಮೀಸಲಾತಿ ಆಧಾರದಲ್ಲಿ ಪ್ರವೇಶ ಪ್ರಕ್ರಿಯೆ ನಡೆಸಲಾಗಿದೆ. ಸಮಾಜ ಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಭೌತಶಾಸ್ತ್ರ, ಎಂ.ಕಾಂ ಹಾಗೂ ಗ್ರಂಥಾಲಯ ವಿಜ್ಞಾನ ಕೋರ್ಸ್‌ಗಳಿಗೆ ಶೇ 100ರಷ್ಟು ದಾಖಲಾತಿಯಾಗಿದೆ’ ಎಂದು ವಿವರಿಸಿದರು.

ಹೊಸ ಕೋರ್ಸ್‌: ‘ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ 4 ಹಳೆ ಕೋರ್ಸ್‌ಗಳ ಜತೆಗೆ ಹೊಸದಾಗಿ 8 ಕೋರ್ಸ್‌ ಆರಂಭವಾಗಿವೆ. ಕುಟುಂಬದ ಏಕೈಕ ಹೆಣ್ಣು ಮಗಳಿಗೆ ವಿಶೇಷ ಪ್ರಾತಿನಿಧ್ಯವಾಗಿ 1 ಸೀಟು, ಕ್ರೀಡೆ, ಎನ್‍ಎಸ್‍ಎಸ್ ಮತ್ತು ಕನ್ನಡ ಮಾಧ್ಯಮದಲ್ಲಿ ಓದಿರುವ, ಎನ್‌ಸಿಸಿ ಘಟಕದಲ್ಲಿ ಉತ್ತಮ ಸಾಧನೆ ತೋರಿರುವವರಿಗೆ ತಲಾ 1 ಸೀಟಿನ ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಸೆ.4ರಂದು ಓರಿಯಂಟೇಷನ್ ಕೋರ್ಸ್ ಹಮ್ಮಿಕೊಳ್ಳಲಾಗಿದೆ. ಪದವಿ ಮುಗಿಸಿ ಸ್ನಾತಕೋತ್ತರ ಹಂತಕ್ಕೆ ಬರುವ ವಿದ್ಯಾರ್ಥಿಗಳ ಮನೋಭಾವ, ಕಲಿಕಾ ವಿಧಾನ ಬದಲಾಗಬೇಕು. ಆಂತರಿಕ ಮೌಲ್ಯಮಾಪನದ ಮಹತ್ವ, ಸ್ಪರ್ಧಾತ್ಮಕ ಯುಗದಲ್ಲಿ ತರಗತಿಯ ಆಚೆ ಕಲಿಯುವ ಮತ್ತು ಇತರ ಕೌಶಲಗಳನ್ನು ವಿದ್ಯಾರ್ಥಿಗಳು ಕಲಿಯಬೇಕಿದ್ದು, ಈ ಕುರಿತು ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದರು.

ಬೆಂಗಳೂರು ಉತ್ತರ ವಿ.ವಿ ಕುಲಸಚಿವ ಪ್ರೊ.ಎಂ.ಎಸ್.ರೆಡ್ಡಿ, ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಪ್ರೊ.ಸುಂದರರಾಜ್‌ ಅರಸ್‌, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಡೋಮಿನಿಕ್ ಹಾಜರಿದ್ದರು.

* 246 ಕಾಲೇಜುಗಳು ವಿ.ವಿ ವ್ಯಾಪ್ತಿಯಲ್ಲಿವೆ
* 12 ಕೋರ್ಸ್‌ಗಳ ಆರಂಭ
* ಶೇ 95ರಷ್ಟು ದಾಖಲಾತಿ ಸಾಧನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.