ADVERTISEMENT

ಔತಣಕೂಟಕ್ಕೆ ಹೋದವರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 16:36 IST
Last Updated 20 ಜೂನ್ 2020, 16:36 IST
ಬಂಗಾರಪೇಟೆಯಲ್ಲಿ ಶನಿವಾರ ಪತ್ತೆಯಾದ ಕೊರೊನಾ ಸೋಂಕಿತರನ್ನು ಆರೋಗ್ಯ ಇಲಾಖೆ ಸಿಬ್ಬಂದಿಯು ಆಂಬುಲೆನ್ಸ್‌ನಲ್ಲಿ ಕರೆದೊಯ್ದರು.
ಬಂಗಾರಪೇಟೆಯಲ್ಲಿ ಶನಿವಾರ ಪತ್ತೆಯಾದ ಕೊರೊನಾ ಸೋಂಕಿತರನ್ನು ಆರೋಗ್ಯ ಇಲಾಖೆ ಸಿಬ್ಬಂದಿಯು ಆಂಬುಲೆನ್ಸ್‌ನಲ್ಲಿ ಕರೆದೊಯ್ದರು.   

ಕೋಲಾರ: ಔತಣಕೂಟಕ್ಕಾಗಿ ಬೆಂಗಳೂರಿಗೆ ಹೋಗಿ ಬಂದಿದ್ದ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಒಂದೇ ಕುಟುಂಬ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ.

ಬಂಗಾರಪೇಟೆಯ ಸಿಂಗ್‌ ಲೇಔಟ್‌ನ ಯುವತಿ ಹಾಗೂ ಅವರ ತಮ್ಮ ಬೆಂಗಳೂರಿನ ಯಲಹಂಕದಲ್ಲಿನ ದೊಡ್ಡಪ್ಪನ ಮನೆಯಲ್ಲಿ ಇತ್ತೀಚೆಗೆ ನಡೆದ ಔತಣಕೂಟಕ್ಕೆ ಹೋಗಿ ಬಂದಿದ್ದರು. ನಂತರ ಅವರ ದೊಡ್ಡಪ್ಪನಿಗೆ ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ಹೀಗಾಗಿ ಅವರ ಆರೋಗ್ಯ ತಪಾಸಣೆ ಮಾಡಿದಾಗ ಸೋಂಕು ಇರುವುದು ಜೂನ್‌ 18ರಂದು ಖಚಿತವಾಗಿತ್ತು.

ಬಂಗಾರಪೇಟೆಗೆ ಮರಳಿದ್ದ ಯುವತಿ ಮತ್ತು ಅವರ ತಮ್ಮನ ಬಗ್ಗೆ ಮಾಹಿತಿ ಕಲೆ ಹಾಕಿದ ಆರೋಗ್ಯ ಇಲಾಖೆ ಅಧಿಕಾರಿಗಳು ಅವರ ಕಫಾ ಹಾಗೂ ರಕ್ತ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಶನಿವಾರ ರಾತ್ರಿ ಪ್ರಯೋಗಾಲಯ ವರದಿ ಬಂದಿದ್ದು, ಸೋಂಕು ಇರುವುದು ಖಚಿತವಾಗಿದೆ. ಇವರಿಬ್ಬರಿಗೂ ಸೋಂಕಿತ ದೊಡ್ಡಪ್ಪನಿಂದ ಸೋಂಕು ತಗುಲಿದೆ.

ADVERTISEMENT

ಸೋಂಕಿತ ಅಕ್ಕ ಮತ್ತು ತಮ್ಮನ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಕುಟುಂಬ ಸದಸ್ಯರನ್ನು ಕ್ವಾರಂಟೈನ್‌ ಮಾಡಲಾಗಿದೆ. ಸಿಂಗ್‌ ಲೇಔಟ್‌ ಅನ್ನು ಸೀಲ್‌ಡೌನ್‌ ಮಾಡಲಾಗಿದೆ.

ಆತಂಕ ಹೆಚ್ಚಿಸಿದ ಪ್ರಕರಣ: ವೈದ್ಯಕೀಯ ಉಪಕರಣ ಅಳವಡಿಕೆಗಾಗಿ ಕೋಲಾರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿತರಾಗಿರುವುದು ಗೊತ್ತಾಗಿದೆ. ಇವರು ವೈದ್ಯಕೀಯ ಉಪಕರಣ ಅಳವಡಿಕೆಗಾಗಿ ಹಲವು ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದು, ಆತಂಕ ಹೆಚ್ಚಿಸಿದೆ. ಇವರು ಭೇಟಿ ನೀಡಿದ್ದ ಆಸ್ಪತ್ರೆಗಳಲ್ಲಿ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಇವರು ಬೆಂಗಳೂರಿನವರಾದ ಕಾರಣ ಜಿಲ್ಲೆಯಲ್ಲಿ ಚಿಕಿತ್ಸೆ ನೀಡಬೇಕೆ ಅಥವಾ ಬೆಂಗಳೂರಿಗೆ ಸ್ಥಳಾಂತರಿಸಬೇಕೆ ಎಂಬ ಬಗ್ಗೆ ಚರ್ಚೆ ನಡೆದಿದೆ.

ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಪೈಕಿ ಕೋಲಾರ ತಾಲ್ಲೂಕಿನ ಇಬ್ಬರು ಮತ್ತು ಬಂಗಾರಪೇಟೆ ತಾಲ್ಲೂಕಿನ ಒಬ್ಬರು ಗುಣಮುಖರಾಗಿ ಶನಿವಾರ ಮನೆಗೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.