ಕೋಲಾರ: ಗ್ರಾಮ ಪಂಚಾಯಿತಿ ನೌಕರರ ಬಾಕಿ ವೇತನ ಬಿಡುಗಡೆ, ಮುಂಬಡ್ತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಇಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸಿದರು.
‘ಗ್ರಾ.ಪಂ ನೌಕರರಿಗೆ ಸುಮಾರು 2 ವರ್ಷದಿಂದ ವೇತನ ಕೊಟ್ಟಿಲ್ಲ. ಇದರಿಂದ ನೌಕರರಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಬಡ್ಡಿ ಸಾಲ ಮಾಡಿ ಜೀವನ ಸಾಗಿಸುವಂತಾಗಿದೆ. ಆದರೆ, ಅಧಿಕಾರಿಗಳಿಗೆ ನೌಕರರ ಕಷ್ಟದ ಅರಿವಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
‘ಅನುಮೋದಿತರಾದ ಹಾಗೂ ಅನುಮೋದಿತರಲ್ಲದ ನೌಕರರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಈವರೆಗೂ ವೇತನ ಬಿಡುಗಡೆ ಮಾಡಿಲ್ಲ. ವೇತನವನ್ನೇ ನಂಬಿ ಬದುಕು ಸಾಗಿಸುತ್ತಿರುವ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.
‘ರಾಜ್ಯದ 6,025 ಗ್ರಾ.ಪಂಗಳ 65 ಸಾವಿರ ನೌಕರರಿಗೆ ವೇತನಕ್ಕೆ ವರ್ಷಕ್ಕೆ ₹ 900 ಕೋಟಿ ಹಣ ಬೇಕಾಗುತ್ತದೆ. ಆದರೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆದೇಶ ಪಾಲಿಸದೆ ನೌಕರರನ್ನು ಶೋಷಿಸುತ್ತಿದ್ದಾರೆ. ನೌಕರರ ಖಾತೆಗೆ ಬೆಂಗಳೂರಿನಿಂದಲೇ ವೇತನ ಪಾವತಿ ಮಾಡುವಂತೆ ಮನವಿ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.
ಸೇವಾ ನಿಯಮಾವಳಿ: ‘ಗ್ರಾ.ಪಂ ನೌಕರರ ವಿವರವನ್ನು ಪಂಚ ತಂತ್ರಾಂಶದಲ್ಲಿ ಅಡಕ ಮಾಡಿ ಬಾಕಿ ವೇತನ ಪಾವತಿಸಬೇಕು. ಭವಿಷ್ಯ ನಿಧಿ, ವೈದ್ಯಕೀಯ ವೆಚ್ಚ, ಗ್ರಾಚ್ಯುಟಿ ಮತ್ತು ವಿಮೆ ಸವಲತ್ತು ಕಲ್ಪಿಸಬೇಕು. ನಗರಾಭಿವೃದ್ಧಿ ಇಲಾಖೆಯಲ್ಲಿ ಇರುವಂತೆ ಗ್ರಾ.ಪಂ ನೌಕರರಿಗೂ ಸೇವಾ ನಿಯಮಾವಳಿ ರೂಪಿಸಬೇಕು. ಬಡ್ತಿ ನಿರೀಕ್ಷೆಯಲ್ಲಿರುವ ಸಿಬ್ಬಂದಿಗೆ ಬಡ್ತಿ ನೀಡಬೇಕು’ ಎಂದು ಧರಣಿನಿರತರು ಮನವಿ ಮಾಡಿದರು.
ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಅಧ್ಯಕ್ಷ ಅಮರನಾರಾಯಣ, ಕಾರ್ಯದರ್ಶಿ ಯಲ್ಲಪ್ಪ, ಖಜಾಂಚಿ ಕೇಶವರಾವ್ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.