ADVERTISEMENT

ನಗರದ ವಿವಿಧೆಡೆ ತಪಾಸಣೆ, ಮುನ್ನೆಚ್ಚರಿಕೆ

ಅನುಮಾನಾಸ್ಪದ ವಸ್ತು, ವ್ಯಕ್ತಿ ಕಂಡುಬಂದರೆ 112ಕ್ಕೆ ಕರೆ ಮಾಡಲು ಮನವಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 6:23 IST
Last Updated 13 ನವೆಂಬರ್ 2025, 6:23 IST
ಕೋಲಾರ ನಗರದ ರೈಲು ನಿಲ್ದಾಣದಲ್ಲಿ ಬುಧವಾರ ಪೊಲೀಸರು ಬ್ಯಾಗ್‌ಗಳನ್ನು ತಪಾಸಣೆ ನಡೆಸಿದರು
ಕೋಲಾರ ನಗರದ ರೈಲು ನಿಲ್ದಾಣದಲ್ಲಿ ಬುಧವಾರ ಪೊಲೀಸರು ಬ್ಯಾಗ್‌ಗಳನ್ನು ತಪಾಸಣೆ ನಡೆಸಿದರು   

ಕೋಲಾರ: ನವದೆಹಲಿಯಲ್ಲಿ ಸಂಭವಿಸಿದ ಸ್ಫೋಟ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಟ್ಟೆಚ್ಚರ ವಹಿಸಲಾಗಿದೆ. ಸಂಭಾವ್ಯ ಅನಾಹುತ ತಡೆಯಲು ಪೊಲೀಸರು ಕೆಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು, ಮುಖ್ಯ ಸರ್ಕಾರಿ ಕಟ್ಟಡಗಳು ಸೇರಿದಂತೆ ಜನದಟ್ಟಣೆಯ ಜಾಗಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ.

ಸ್ಫೋಟ ಪ್ರಕರಣ ಹಿನ್ನೆಲೆಯಲ್ಲಿ ಇಡೀ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಹೀಗಾಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಪಿ. ಮಾರ್ಗದರ್ಶನದಲ್ಲಿ  ನಗರದ ಹಲವು ಸ್ಥಳಗಳಲ್ಲಿ ಪೊಲೀಸರು ಬುಧವಾರ ತಪಾಸಣೆ ನಡೆಸಿದರು. ತಾಲ್ಲೂಕು ಕೇಂದ್ರಗಳ ಪ್ರಮುಖ ಸ್ಥಳಗಳಲ್ಲಿಯೂ ಸುತ್ತಾಡಿ ಪರಿಶೀಲಿಸಿದರು.

ADVERTISEMENT

ವಿಧ್ವಂಸಕ ಕೃತ್ಯ ತಡೆ ತಂಡದ ನೇತೃತ್ವದಲ್ಲಿ ಶ್ವಾನದಳ ಮತ್ತು ಸ್ಫೋಟಕ ಪತ್ತೆ ತಜ್ಞರು ತಪಾಸಣೆ ಪ್ರಕ್ರಿಯೆ ನಡೆಸಿದರು.

ನಗರದ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರ ಬ್ಯಾಗ್‌ಗಳನ್ನು ತಪಾಸಣೆ ನಡೆಸಿದರು. ನಂತರ, ಪ್ರತಿಯೊಂದು ಸ್ಥಳದಲ್ಲಿಯೂ ಪ್ರತಿಯೊಂದು ಅನುಮಾನಾಸ್ಪದ ವಸ್ತುಗಳನ್ನು ಲೋಹ ಶೋಧಕದಿಂದ ತಪಾಸಣೆ ನಡೆಸಿದರು.

‌ಜಿಲ್ಲೆಯ ಗಡಿ ಪ್ರವೇಶಿಸುವ ಸ್ಥಳಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಜಿಲ್ಲಾಸ್ಪತ್ರೆ, ಎಪಿಎಂಸಿ ಮಾರುಕಟ್ಟೆ, ತಾಲ್ಲೂಕು ಕಚೇರಿ ಆವರಣ, ಎಂ.ಜಿ.ರಸ್ತೆ, ದೊಡ್ಡಪೇಟೆ ರಸ್ತೆ, ಕಾಳಮ್ಮ ಗುಡಿ ರಸ್ತೆ ಸೇರಿದಂತೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ತಪಾಸಣೆ ನಡೆಸಿದರು.

ಸಾರ್ವಜನಿಕರಲ್ಲಿ ವಿನಂತಿ: ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳನ್ನು ನೋಡಿದರೆ ತಕ್ಷಣ 112 ಅಥವಾ 948080260‌0 ಅಥವಾ 8277962929 ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು. ತುರ್ತು ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ ಉಂಟುಮಾಡುವ ಪದಗಳು ಅಥವಾ ಸುಳ್ಳು ಸಂದೇಶಗಳನ್ನು ಹರಡಬೇಡಿ ಎಂದು ಮನವಿ ಮಾಡಿದ್ದಾರೆ.

ಕೋಲಾರ ನಗರದ ರೈಲು ನಿಲ್ದಾಣದಲ್ಲಿ ಬುಧವಾರ ಬಾಂಬ್ ನಿಷ್ಕ್ರಿಯ ದಳದವರು ಶ್ವಾನದ ನೆರವಿನೊಂದಿಗೆ ತಪಾಸಣೆ ನಡೆಸಿದರು
ಕೋಲಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬುಧವಾರ ಬಾಂಬ್ ನಿಷ್ಕ್ರಿಯ ದಳದವರು ಶ್ವಾನದ ನೆರವಿನೊಂದಿಗೆ ಪರಿಶೀಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.