ಕೋಲಾರ: ಕೋಲಾರ ಜಿಲ್ಲೆಯ ರಾಜಕಾರಣದಲ್ಲಿ ಸಕ್ರಿಯವಾಗಿಯೇ ಇದ್ದೇನೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋಮುಲ್ ಚುನಾವಣೆಯಲ್ಲಿ ಗೆದ್ದು ಎಸ್.ಎನ್.ನಾರಾಯಣಸ್ವಾಮಿ ನಿರ್ದೇಶಕರಾಗಿದ್ದಾರೆ. ಪ್ರಸಾದ್ ಬಾಬು ಅವರ ಪತ್ನಿ ಮಹಾಲಕ್ಷ್ಮಿ ಕೂಡ ಜಯ ಗಳಿಸಿದ್ದಾರೆ. ಒಟ್ಟು 9 ಜನ ಕಾಂಗ್ರೆಸ್ಸಿಗರು ಗೆದ್ದಿದ್ದು, ಒಳ್ಳೆಯ ಕೆಲಸ ಮಾಡಲಿ, ರೈತರಿಗೆ ಒಳ್ಳೆಯದು ಮಾಡಲಿ. ಹಾಲು ಉತ್ಪಾದಕರ ಹಿತರಕ್ಷಣೆ ಮಾಡಲಿ’ ಎಂದು ಆಶಿಸಿದರು.
ಕೋಮುಲ್ ವಿಚಾರವಾಗಿ ಕಾಂಗ್ರೆಸ್ ವರಿಷ್ಠರ ಬಳಿ ತಮ್ಮ ನೇತೃತ್ವದಲ್ಲಿ ನಿಯೋಗ ಹೋಗಿದ್ದರ ಬಗ್ಗೆ ಪ್ರತಿಕ್ರಿಯಿಸಿ, ‘ಕೋಮುಲ್ ಅಧ್ಯಕ್ಷರ ಚುನಾವಣೆ ಸಂಬಂಧ ನಾನೇನು ಚರ್ಚೆ ಮಾಡಿಲ್ಲ, ನಿಯೋಗವೂ ಹೋಗಿಲ್ಲ. ಭೇಟಿ ಮಾಡಲು ಬಂದವರ ಜೊತೆ ಮಾತನಾಡಿದ್ದೇನೆ ಅಷ್ಟೆ. ಬಹುಮತ ಇದ್ದವರು ಅಧ್ಯಕ್ಷರಾಗಿದ್ದು, ಚೆನ್ನಾಗಿ ಅಧಿಕಾರ ನಡೆಸಿಕೊಂಡು ಹೋಗಲಿ’ ಎಂದರು.
ತಮ್ಮ ಬಣಕ್ಕೆ ಹಿನ್ನಡೆ ಆಗಲಿಲ್ಲವೇ ಎಂಬ ಪ್ರಶ್ನೆಗೆ, ‘ನಾನೇನು ಚುನಾವಣೆಗೆ ನಿಂತಿದ್ದೆನೆ? ನನಗೆ ಯಾವುದೇ ಬಣ ಇಲ್ಲ. ಎಲ್ಲರೂ ಕಾಂಗ್ರೆಸ್‌ನವರೇ’ ಎಂದು ತಿಳಿಸಿದರು.
ಶಾಸಕಿ ರೂಪಕಲಾ ಶಶಿಧರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯೇ ಎಂಬುದಕ್ಕೆ, ರೂಪಕಲಾ ಅವರನ್ನೇ ಕೇಳಿ ಎಂದು ಪ್ರತಿಕ್ರಿಯಿಸಿದರು.
‘ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಲಿ ಎಂದು ಬೇಡಿಕೊಂಡಿದ್ದೇನೆ. ಸಮಾಜದ ಎಲ್ಲ ವರ್ಗದ ಜನರನ್ನು ಸಮನಾಗಿ ನೋಡುವ ದೇವರು ಸಾಯಿಬಾಬಾ. ಮತಬೇಧ, ಧರ್ಮಭೇದ ಇಲ್ಲ. ಅಂಥವರ ಗುರು ಪೂರ್ಣಿಮೆ ದಿನ ಸಾಯಿಬಾಬಾನ ದರ್ಶನ ಪಡೆದಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.