ಕೋಲಾರ: ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಮುಲ್) ಆಡಳಿತ ಮಂಡಳಿಯ ಚುಕ್ಕಾಣಿಯನ್ನು ಕಾಂಗ್ರೆಸ್ ಪಕ್ಷದ ಬೆಂಬಲಿತರು ಮತ್ತೊಮ್ಮೆ ಹಿಡಿಯುವುದು ನಿಚ್ಚಳವಾಗಿದೆ.
12 ನಿರ್ದೇಶಕರ ಕ್ಷೇತ್ರಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ‘ಕೈ’ ಬೆಂಬಲಿತರು ಜಯಭೇರಿ ಬಾರಿಸಿದ್ದು, ಒಂದು ಕ್ಷೇತ್ರದಲ್ಲಿ ಶಾಸಕ ಕೆ.ವೈ.ನಂಜೇಗೌಡ ಈಗಾಗಲೇ ಅವಿರೋಧ ಅಯ್ಕೆಯಾಗಿದ್ದಾರೆ. ಇದರಿಂದಾಗಿ ಒಟ್ಟು 13 ನಿರ್ದೇಶಕರ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷದ ಬೆಂಬಲಿಗರು ಒಂಬತ್ತು ಸ್ಥಾನ ಗೆದ್ದಂತಾಗಿದೆ. ಇದರಲ್ಲಿ ಕೆ.ಎಚ್.ಮುನಿಯಪ್ಪ ಬಣದ ಮಹಾಲಕ್ಷ್ಮಿ (ಕೋಲಾರ ಮಹಿಳಾ ಉತ್ತರ ಕ್ಷೇತ್ರ) ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ (ಬಂಗಾರಪೇಟೆ ಕ್ಷೇತ್ರ) ಸೇರಿದ್ದಾರೆ.
ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಣಗಳ ಬೆಂಬಲಿತ ಅಭ್ಯರ್ಥಿಗಳ ನಡುವೆಯೇ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಕೇವಲ ನಾಲ್ಕು ನಿರ್ದೇಶಕ ಸ್ಥಾನ ಗೆದ್ದ ಜೆಡಿಎಸ್–ಬಿಜೆಪಿ ಮೈತ್ರಿಕೂಟ ನಿರಾಸೆ ಅನುಭವಿಸಿತು.
ಕೋಮುಲ್ ಅಧ್ಯಕ್ಷ ಸ್ಥಾನದ ಮೇಲೆ ಶಾಸಕರಾದ ಕೆ.ವೈ.ನಂಜೇಗೌಡ ಹಾಗೂ ಎಸ್.ಎನ್.ನಾರಾಯಣಸ್ವಾಮಿ ಕಣ್ಣಿಟ್ಟಿದ್ದು, ಕುತೂಹಲ ಮೂಡಿಸಿದೆ. ಹೈಕಮಾಂಡ್ ಸೂಚನೆಗೆ ಬದ್ಧರಿರುವುದಾಗಿ ನಂಜೇಗೌಡ ಹೇಳಿದ್ದಾರೆ. ಒಂದೇ ಪಕ್ಷದ ಈ ಇಬ್ಬರ ನಡುವೆ ಬಹಳ ದಿನಗಳಿಂದ ಮಾತಿನ ಯುದ್ಧವೇ ನಡೆಯುತ್ತಿದೆ.
ಕೋಮುಲ್‌ನಲ್ಲಿ ಚುನಾಯಿತ 13 ನಿರ್ದೇಶಕರು ಹಾಗೂ ಸರ್ಕಾರದ 5 ಪ್ರತಿನಿಧಿಗಳು ಸೇರಿ ಒಟ್ಟು 18 ಸ್ಥಾನಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.