ಮುಳಬಾಗಿಲು: ತಾಲ್ಲೂಕಿನಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ₹25 ಕೋಟಿ ಅನುದಾನದಲ್ಲಿ 24 ಕಿಲೋಮೀಟರ್ ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಕಾಶೀಪುರ ಗೇಟ್‌ನಿಂದ ರೆಡ್ಡಿಹಳ್ಳಿವರೆಗಿನ 3 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ಕೆ.ಬೈಯಪಲ್ಲಿ ರಸ್ತೆ, ತಾಯಲೂರು, ಪುಂಗನೂರು, ಶ್ರೀನಿವಾಸಪುರ ರಸ್ತೆಗಳ ಡಾಂಬರೀಕರಣ ಮುಗಿಸಲಾಗಿದೆ. ಈಗ ಕೆಜಿಎಫ್ ರಸ್ತೆ ಡಾಂಬರೀಕರಣ ಮಾಡಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಕೆಲವು ಯುವಕರು ಫೇಸ್ಬುಕ್, ವಾಟ್ಸಾಪ್‌ಗಳಲ್ಲಿ ತಾಲ್ಲೂಕಿನ ಹದಗೆಟ್ಟ ರಸ್ತೆಗಳ ಬಗ್ಗೆ ಕಮೆಂಟ್ ಮಾಡಿದ್ದರು. ಅದನ್ನೂ ಪರಿಗಣಿಸಿ, ರಸ್ತೆಗಳ ದುಸ್ಥಿತಿ ಬಗ್ಗೆ ಸರ್ಕಾರದ ಗಮನಕ್ಕೆ ತಂದು ವಿಶೇಷ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕರ್ತರಿಗೆ ಹೆಚ್ಚಿನ ಮನ್ನಣೆ: ಮುಂದಿನ ತಿಂಗಳು ಡಿಸಿಸಿ ಬ್ಯಾಂಕ್ ಹಾಗೂ ಕೋಮಲ್ ಚುನಾವಣೆಗಳು ಬರುತ್ತಿವೆ. ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಕಳೆದ ಬಾರಿ ನಲ್ಲೂರ ರಘುಪತಿ ರೆಡ್ಡಿ ಸ್ಪರ್ಧಿಸಿ ಸೋತಿದ್ದರು. ಆದ್ದರಿಂದ ಈ ಬಾರಿ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಉಳಿದಂತೆ ಕೋಮಲ್‌ನಲ್ಲಿ ಪೂರ್ವ ಮತ್ತು ಪಶ್ಚಿಮ ವಿಭಾಗಗಳಲ್ಲಿ ಪೂರ್ವ ಕ್ಷೇತ್ರಕ್ಕೆ ಕಾಡೆನಹಳ್ಳಿ ನಾಗರಾಜ್, ಚಾಮರೆಡ್ಡಿಹಳ್ಳಿ ಡಾ.ಪ್ರಕಾಶ್, ಕಲ್ಲುಪಲ್ಲಿ ಪ್ರಕಾಶ್, ಡೆಕ್ಕನ್ ಶ್ರೀನಿವಾಸ್ ಮತ್ತು ಪಶ್ಚಿಮ ಕ್ಷೇತ್ರದಲ್ಲಿ ಬಿ.ವಿ.ಸಾಮೇಗೌಡ, ಬಿಎಂಸಿ ವೆಂಕಟರಾಮೇಗೌಡ ಹಾಗೂ ಗೊಲ್ಲಹಳ್ಳಿ ಜಗದೀಶ್ ಆಕಾಂಕ್ಷಿಗಳಾಗಿದ್ದಾರೆ. ಆಗಸ್ಟ್ ತಿಂಗಳಲ್ಲಿ ಜಿ.ಪಂ ಮತ್ತು ತಾ.ಪಂ ಚುನಾವಣೆ ಬರಲಿದ್ದು ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತದೆ ಎಂದು ಹೇಳಿದರು. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್, ಸಾಮೇಗೌಡ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.