ಕೆಜಿಎಫ್: ನಗರದ ಅರ್ಧ ಭಾಗವು ಕೇಂದ್ರ ಸರ್ಕಾರ ಮತ್ತು ಉಳಿದ ಅರ್ಧ ಭಾಗವು ರಾಜ್ಯ ಸರ್ಕಾರ ವ್ಯಾಪ್ತಿಗೆ ಸೇರುತ್ತದೆ. ಹೀಗಾಗಿ, ನಗರದ ಅಭಿವೃದ್ಧಿಗೆ ಸಂಸದ ಮತ್ತು ಶಾಸಕರು ಒಟ್ಟಾಗಿ ಯೋಜನೆ ರೂಪಿಸಬೇಕು ಎಂದು ಕಾರ್ಮಿಕ ಮುಖಂಡ ಕೆ. ರಾಜೇಂದ್ರನ್ ಮನವಿ ಮಾಡಿದರು.
ರಾಬರ್ಟ್‌ಸನ್‌ಪೇಟೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ಸಂಸದ ಮತ್ತು ಶಾಸಕರ ಮಧ್ಯೆ ಅಹಂ ಇಲ್ಲ. ಆದಾಗ್ಯೂ, ಇಬ್ಬರು ಒಟ್ಟಿಗೆ ಸೇರಿ ಯೋಜನೆ ರೂಪಿಸಿದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಡೆಯಬಹುದಾದ ಸವಲತ್ತುಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಈ ಇಬ್ಬರು ಜನಪ್ರತಿನಿಧಿಗಲು ಒಟ್ಟಾಗಿ, ಪಕ್ಷಾತೀತವಾಗಿ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.
ಹಲವಾರು ವರ್ಷಗಳಿಂದ ಪಾಳು ಬಿದ್ದಿದ್ದ ಜಿಮಖಾನ ಮೈದಾನವನ್ನು ಪುನರುಜ್ಜೀವನ ಮಾಡಿ, ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಮಾಡುವ ಕೆಲಸ ನಡೆಯುತ್ತಿದೆ. ಬಿಜಿಎಂಎಲ್‌ನ ಊರಿಗಾಂ ಪ್ರದೇಶದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ 12 ವರ್ಷದಿಂದ ನನೆಗುದಿಗೆ ಬಿದ್ದಿತ್ತು. ಹಣ ಕಟ್ಟಿದ್ದರೂ, ಭೂ ಸ್ವಾಧೀನವಾಗಿರಲಿಲ್ಲ. ಈಗ ಎಲ್ಲ ವಿಭಾಗದ ಅಧಿಕಾರಿಗಳು ಯೋಜನೆ ರೂಪುಗೊಳ್ಳುವ ಸ್ಥಳ ಪರಿಶೀಲನೆ ಮಾಡಿದ್ದಾರೆ. ಮೇಲ್ಸೇತುವೆ ನಿರ್ಮಾಣಕ್ಕೆ ಕೆಲವು ಮನೆಗಳನ್ನು ಸ್ಥಳಾಂತರ ಮಾಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಅಭಿವೃದ್ಧಿಗಾಗಿ ಸ್ಥಳೀಯ ನಿವಾಸಿಗಳು ಕೆಲವು ತ್ಯಾಗ ಮಾಡಬೇಕಾಗುತ್ತದೆ ಎಂದರು.
ಸೌತ್ ಟ್ಯಾಂಕ್ ಬ್ಲಾಕ್‌ನಿಂದ ನಾರ್ಥ್ ಟ್ಯಾಂಕ್ ಬ್ಲಾಕ್‌ಗೆ ಹೋಗಲು ಉಪಯೋಗಿಸುತ್ತಿದ್ದ ರೈಲ್ವೆ ಹಳಿಗಳ ಕೆಳಗೆ ಹೋಗುವ ಮಾರ್ಗವನ್ನು ಈಚೆಗೆ ಭದ್ರತೆ ನೆಪವೊಡ್ಡಿ ರೈಲ್ವೆ ಅಧಿಕಾರಿಗಳು ಮುಚ್ಚಿದ್ದರು. ಸಂಸದ ಮಲ್ಲೇಶಬಾಬು ರೈಲ್ವೆ ಇಲಾಖೆ ಅಧಿಕಾರಿಗಳೊಡನೆ ಸ್ಥಳ ಪರಿಶೀಲನೆ ಮಾಡಿದ ನಂತರ ಈಗ ಹೊಸ ಜಾಗದಲ್ಲಿ ಸಂಪರ್ಕ ರಸ್ತೆ ನಿರ್ಮಿಸಲು ರೈಲ್ವೆ ಇಲಾಖೆ ಸಮ್ಮತಿ ನೀಡಿದೆ ಎಂದರು.
ಎಂ.ಜಿ.ಮಾರುಕಟ್ಟೆ ತೀರಾ ಅಧ್ವಾನವಾಗಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ. ಹೊಸದಾಗಿ ಮಾರುಕಟ್ಟೆ ನವೀಕರಣ ಮಾಡಬೇಕಿದೆ. ನಗರದ ಮುಖ್ಯ ಬೀದಿಗಳಲ್ಲಿ ಹೆಚ್ಚಿನ ದೀಪಗಳನ್ನು ಅಳವಡಿಸಲಾಗಿದೆ. ಆದರೆ ನಗರದ ಒಳಪ್ರದೇಶದಲ್ಲಿ ದೀಪಗಳೇ ಇಲ್ಲ. ಎಲ್ಲೆಡೆ ಬೀದಿದೀಪ ಅಳವಡಿಸಬೇಕಿದೆ. ಮೈನಿಂಗ್ ಪ್ರದೇಶದ ಅಭಿವೃದ್ಧಿ ಕೂಡ ಆಗಬೇಕಿದೆ. ಆದ್ದರಿಂದ ಇಬ್ಬರೂ ಜನಪ್ರತಿನಿಧಿಗಳು ಒಟ್ಟಾಗಿ ಕೆಲಸ ಮಾಡಬೇಕು. ಹೆಚ್ಚಿನ ಅನುದಾನ ತರಬೇಕು ಎಂದು ಮನವಿ ಮಾಡಿದರು.
ಮುಖಂಡ ಪಾಂಡ್ಯನ್, ರಾಜಶೇಖರ್, ಸಾದಿಕ್, ಸುಡರ್, ದಂಡಪಾಣಿ, ಉದಯಕುಮಾರ್, ಶಾಂತರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.