ADVERTISEMENT

ಕಾಣದ ಸಿಬ್ಬಂದಿ; ನಗರಸಭೆ ಕಚೇರಿಗೆ ಮುತ್ತಿಗೆ

ಸಮೀಕ್ಷೆಗೆ ಹೋಗಿದ್ದಾರೆ ಎಂದು ನಗರಸಭೆ ಆಯುಕ್ತರು ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 3:20 IST
Last Updated 14 ಅಕ್ಟೋಬರ್ 2025, 3:20 IST
ಕೋಲಾರದಲ್ಲಿ ಸೋಮವಾರ ನಗರಸಭೆ ಕಚೇರಿಗೆ ಸದಸ್ಯರು ಮುತ್ತಿಗೆ ಹಾಕಿ ಸಿಬ್ಬಂದಿ ಇಲ್ಲದಿರುವುದಕ್ಕೆ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
ಕೋಲಾರದಲ್ಲಿ ಸೋಮವಾರ ನಗರಸಭೆ ಕಚೇರಿಗೆ ಸದಸ್ಯರು ಮುತ್ತಿಗೆ ಹಾಕಿ ಸಿಬ್ಬಂದಿ ಇಲ್ಲದಿರುವುದಕ್ಕೆ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು   

ಕೋಲಾರ: ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವಲ್ಲಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ವಿಫಲರಾಗಿದ್ದಾರೆ. ಕಚೇರಿಯಿಂದ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ಸೋಮವಾರ ನಗರಸಭೆ ಸದಸ್ಯರು, ಮಾಜಿ ಸದಸ್ಯರು, ಸಾರ್ವಜನಿಕರು ಕೋಲಾರ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಳಿಕ ಆಯುಕ್ತ ನವೀನ್‌ ಚಂದ್ರ ಅವರ ಕೊಠಡಿಗೂ ಮುತ್ತಿಗೆ ಹಾಕಿ, ಕಚೇರಿಯಲ್ಲಿ ಸಿಬ್ಬಂದಿ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ ಎಂದು ಹರಿಹಾಯ್ದರು.

‘ನಗರಸಭೆಯಲ್ಲಿ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಜನ ಸಾಮಾನ್ಯರು, ಬಡವರು ಕೆಲಸ ಮಾಡಿಸಿಕೊಳ್ಳಲು ಬಂದರೆ ಒಬ್ಬ ಸಿಬ್ಬಂದಿಯೂ ಕಾಣುತ್ತಿಲ್ಲ. ಸಮೀಕ್ಷೆ ನೆಪ ಮಾಡಿಕೊಂಡು ಇಡೀ ದಿನ ಕಚೇರಿಗೆ ಬರುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ‘ಖಾತೆ ಬದಲಾವಣೆ, ತೆರಿಗೆ ಪಾವತಿ, ಟ್ರೇಡ್ ಲೈಸೆನ್ಸ್, ದಾಖಲೆ ತಿದ್ದುಪಡಿ ಹೀಗೆ ಹಲವು ಕೆಲಸಗಳಿಗೆ ನಗರವಾಸಿಗಳು ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಹಿರಿಯ ನಾಗರಿಕರು ಪ್ರತಿದಿನ ಕಚೇರಿಗೆ ಅಲೆದಾಡಿದರೂ ಅರ್ಜಿ ವಿಲೇವಾರಿ ಆಗಿರುವುದಿಲ್ಲ. ಕಚೇರಿಯಲ್ಲಿ ಸಿಬ್ಬಂದಿಯೇ ಕಾಣುತ್ತಿಲ್ಲ. ಜನರು ಎಷ್ಟೇ ಸಮಸ್ಯೆ ಅನುಭವಿಸುತ್ತಿದ್ದರೂ ಅಧಿಕಾರಿಗಳಿಗೆ, ಸಿಬ್ಬಂದಿಗೆ ಗಂಭೀರತೆ ಇಲ್ಲವಾಗಿದೆ. ದಲ್ಲಾಳಿಗಳಿಗೆ ಇರುವ ಗೌರವ ಸದಸ್ಯರಿಗೂ ಇಲ್ಲವಾಗಿದೆ’ ಎಂದು ದೂರಿದರು.

‘ಮಳೆ ಕಾರಣ ನಗರದ ವಿವಿಧ ವಾರ್ಡ್‌ಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ, ಚರಂಡಿ ಉಕ್ಕಿ ಹರಿದಿವೆ. ಉದ್ಯಾನಗಳು ಜಲಾವೃತವಾಗಿವೆ. ನಗರಸಭೆಯ ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಿದರೆ ಉತ್ತರ ನೀಡುವವರು ಇಲ್ಲ. ಎಂಜಿನಿಯರ್‌ಗಳು ಕೈಗೆ ಸಿಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಯುಕ್ತ ನವೀನ್‌ ಚಂದ್ರ ಮಾತನಾಡಿ, ‘ಸಿಬ್ಬಂದಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ನಾನು ಕೂಡ ಬೆಳಿಗ್ಗೆ ಹೋಗಿದ್ದೆ. ಬೇಕಾದರೆ ನೋಡಿ’ ಎಂದು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ತೋರಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ ಬಳಿ ಮಾತನಾಡುತ್ತೇನೆ ಎಂದು ಅವರು ಪ್ರತಿಭಟನಕಾರರಿಗೆ ಮನನ ಮಾಡಲು ಪ್ರಯತ್ನಿಸಿದರು.

ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಸದಸ್ಯರಾದ ಸೋಮಶೇಖರ್‌, ವಿ.ಕೆ.ರಾಜೇಶ್, ಶ್ರೀನಾಥ್‌ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.