ಮುಳಬಾಗಿಲು: ನಂಗಲಿ ಗ್ರಾಮದಲ್ಲಿ ದ್ರೌಪದಮ್ಮ ಕರಗ ಮಹೋತ್ಸವ ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು.
ಪ್ರತಿ ವರ್ಷದಂತೆ ಸಾಂಪ್ರದಾಯಿಕವಾಗಿ ನಡೆದ ಕರಗ ಮಹೋತ್ಸವ ಪ್ರಯುಕ್ತ ದೇವಾಲಯದಲ್ಲಿ ಗಣಪತಿ ಪೂಜೆ, ಧ್ವಜಾರೋಹಣ, ಕಲ್ಯಾಣೋತ್ಸವ, ಹಸಿಕರಗ, ಮತ್ತಿತರ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಬುಧವಾರ ರಾತ್ರಿ ಕರಗ ಮಹೋತ್ಸವ ಪ್ರಯುಕ್ತ ದೇವರ ಮೂಲ ವಿಗ್ರಹವನ್ನು ವಿಶೇಷವಾದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಬುಧವಾರ ರಾತ್ರಿಯಿಂದ ಗುರುವಾರ ಸಂಜೆವರೆಗೂ ಗ್ರಾಮದಲ್ಲಿ ಕರಗದ ಮೆರವಣಿಗೆ ನಡೆಯಿತು. ನಂತರ ಅಗ್ನಿಕುಂಡ ಪ್ರವೇಶ, ವಸಂತೋತ್ಸವ, ಒನಕೆ ಕರಗ ಮತ್ತಿತರ ವಿಶೇಷ ಆಚರಣೆ ನಡೆಯಿತು.
ಕರಗ ನೋಡಲು ಸುತ್ತಮುತ್ತಲಿನ ಗ್ರಾಮಗಳ ಜತೆಗೆ ನೆರೆಯ ಆಂಧ್ರಪ್ರದೇಶದ ಪಲಮನೇರು, ವಿ.ಕೋಟ, ಪುಂಗನೂರು, ರಾಮಸಮುದ್ರಂ ಮತ್ತಿತರ ಕಡೆಗಳಿಂದಲೂ ಸಾವಿರಾರು ಭಕ್ತರು ದೇವಾಲಯದ ಬಳಿ ಸೇರಿದ್ದರು. ಕೆಲವು ಯುವಕರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಬುಧವಾರ ಮಧ್ಯರಾತ್ರಿ ಗ್ರಾಮದ ಗಂಗಮ್ಮ, ಕೋದಂಡರಾಮಸ್ವಾಮಿ, ಚೌಡೇಶ್ವರಿ, ನಾಗದೇವತಾ, ಗಣಪತಿ, ಸಾಯಿಬಾಬ ಮತ್ತಿತರ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ಕರಗದಾರಿ ವಿಜಯ್ ಕುಮಾರ್ ದೇವಾಲಯದ ಮುಂಭಾಗದ ವೇದಿಕೆ ಮೇಲೆ ನೃತ್ಯ ಮಾಡಿದರು. ಭಕ್ತರಿಗೆ ಅನ್ನದಾನ ಕಾರ್ಯಕ್ರಮ ನಡೆಯಿತು.
ದೇವಾಲಯದ ಧರ್ಮದರ್ಶಿ ತಾಂಡ್ರಾಯಪ್ಪ ಕೋದಂಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಶ್ರೀಧರ್, ಶಿನಿಗೇನಹಳ್ಳಿ ಜಿ.ಆನಂದ ರೆಡ್ಡಿ, ಶ್ರೀನಿವಾಸ ರೆಡ್ಡಿ, ಎನ್.ಸಿ.ಶೇಷಾದ್ರಿ, ಡೇರಿ ಅಮರ್, ಮುರುಗ, ಮುರುಗೇಶ್ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.