ADVERTISEMENT

ಬೇತಮಂಗಲ | ಕೆರೆಯಂತಾದ ಶಾಲಾ ಆವರಣ!

ಶಿಥಿಲಾವಸ್ಥೆ ಹಂತಕ್ಕೆ ತಲುಪಿದ ಸರ್ಕಾರಿ ಶಾಲೆಯ ಕೊಠಡಿಗಳ ಗೋಡೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 8:47 IST
Last Updated 12 ಆಗಸ್ಟ್ 2024, 8:47 IST
ಬೇತಮಂಗಲ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಳೆ ನೀರು ನಿಂತು ಕೆರೆಯಂತಾಗಿರುವುದು 
ಬೇತಮಂಗಲ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಳೆ ನೀರು ನಿಂತು ಕೆರೆಯಂತಾಗಿರುವುದು    

ಬೇತಮಂಗಲ: ಇಲ್ಲಿನ ಹಳೆಯ ಬಡಾವಣೆಯಲ್ಲಿರುವ ಸರ್ಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಯು ಅವ್ಯವಸ್ಥೆಗಳ ಆಗರವಾಗಿ ಮಾರ್ಪಟ್ಟಿದೆ. 

ಮಳೆ ಬಂದರೆ ಶಾಲೆಯ ಮುಂಭಾಗದ ಆವರಣದಲ್ಲಿ ನೀರು ವ್ಯಾಪಿಸಿಕೊಂಡು, ಕೆರೆಯಂತಾಗುತ್ತದೆ. ಇದರಿಂದ ಶಾಲೆಗೆ ಬರುವ ಮಕ್ಕಳು ಇದೇ ನೀರಿನಲ್ಲಿ ಕಾಲಿಟ್ಟುಕೊಂಡು ಬರಬೇಕಾಗುತ್ತದೆ. ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಶಾಲೆಯ ಆವರಣದಲ್ಲಿ ನೀರು ನಿಂತುಕೊಂಡಿದ್ದು, ಈವರೆಗೂ ಆ ನೀರನ್ನು ತೆರವುಗೊಳಿಸುವ ಕೆಲಸ ಆಗಿಲ್ಲ. ಇದರಿಂದಾಗಿ ಶನಿವಾರ ವಿದ್ಯಾರ್ಥಿಗಳು ಈ ನೀರಿನಲ್ಲೇ ಕಾಲಿಟ್ಟುಕೊಂಡೇ ಶಾಲೆಗೆ ಹೋಗಿ, ವಾಪಸ್ ಮನೆಗೆ ಹೋಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. 

ಶತಮಾನ ಪೂರೈಸಿರುವ ಸರ್ಕಾರಿ ಮಾದರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಕಾಯಕಲ್ಪ ಬೇಕಿದೆ ಎಂದು ಸಾರ್ವಜನಿಕರ ಒತ್ತಾಯವಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕಲ್ಪಿಸಿ, ಉನ್ನತ ಸ್ಥಾನಕ್ಕೆ ಏರಿಸಿರುವ ಇತಿಹಾಸ ಹೊಂದಿದ ಶಾಲೆಯನ್ನು ಇನ್ನಾದರೂ ಅಭಿವೃದ್ಧಿಪಡಿಸಬೇಕು. ಈ ಮೂಲಕ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಅನುಕೂಲಕರ ವಾತಾವರಣ ಕಲ್ಪಿಸಿಕೊಡಬೇಕಿದೆ. ಆದರೆ, ಈ ಶಾಲೆಯನ್ನು ಅಭಿವೃದ್ಧಿಪಡಿಸಲು ಯಾರೂ ಮುಂದಾಗದಿರುವುದು ದುರದೃಷ್ಟಕರ ಸಂಗತಿ. 

ADVERTISEMENT

ಮಳೆ ಬಂದರೆ ಶಾಲಾ ಆವರಣದಲ್ಲಿ ಸಂಗ್ರಹವಾಗುವ ನೀರು ಹೋಗಲು ದಾರಿಯೇ ಇಲ್ಲ. ಹೀಗಾಗಿ ಪ್ರತಿ ಬಾರಿಯು ಮಳೆ ಬಂದಾಗ ಶಾಲೆಯ ಆವರಣವು ಸಣ್ಣ ಕೆರೆಯಂತೆ ಉದ್ಭವಿಸುತ್ತದೆ. 

ಪಿಎಂಶ್ರೀ ಯೋಜನೆಯಡಿ ₹48 ಲಕ್ಷ ಅನುದಾನ: ಶತಮಾನ ಪೂರೈಸಿದ ಮಾದರಿ ಶಾಲೆಯ ಅಭಿವೃದ್ಧಿಗಾಗಿ ಪಿಎಂಶ್ರೀ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಬರೋಬ್ಬರಿ ₹48 ಲಕ್ಷ ಅನುದಾನವೂ ಮಂಜೂರು ಆಗಿದೆ. ಆದರೆ, ಹೊಸ ಕೊಠಡಿಗಳ ನಿರ್ಮಾಣಕ್ಕೆ ಇದುವರೆಗೆ ಮುಂದಾಗಿಲ್ಲ. ಶಾಲೆಯ ಕಟ್ಟಡವು ಬಿರುಕು ಬಿಟ್ಟಿರುವ ಕಾರಣ ಅದು ಯಾವಾಗ ಕುಸಿದುಬೀಳುತ್ತದೆಯೊ ಎಂಬ ಭಯದಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸುವಂತಾಗಿದೆ ಎಂದು ಪೋಷಕರು ಅವಲತ್ತುಕೊಂಡಿದ್ದಾರೆ. 

ಇನ್ನಾದರೂ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಈ ಮೂಲಕ ಅನಾಹುತ ಸಂಭವಿಸುವ ಮುನ್ನು ಶಾಲೆಯ ಕಟ್ಟಡ ಮತ್ತು ಶಾಲಾ ಆವರಣದಲ್ಲಿ ನೀರು ನಿಂತುಕೊಳ್ಳುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಗಳ ಹಿಂಭಾಗದ ಗೋಡೆಯ ಪ್ಲಾಸ್ಟಿಂಗ್ ಕಳಚಿಬಿದ್ದು ಬಿರುಕು ಬಿಟ್ಟಿರುವುದು

ಗ್ರಾಮ ಪಂಚಾಯಿತಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಶಾಲಾ ಅವರಣದಲ್ಲಿ ಮಳೆ ನೀರು ನಿಲ್ಲದಂತೆ ಜಾಗ್ರತೆ ವಹಿಸುತ್ತೇವೆ.

-ವಿನು ಕಾರ್ತಿಕ್. ಗ್ರಾಮ ಪಂಚಾಯಿತಿ ಅಧ್ಯಕ್ಷ

‘ಶಾಸಕಿ ದತ್ತು ಪಡೆದ ಶಾಲೆಯಿದು’ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಅವರು ದತ್ತುಪಡೆದ ತಾಲ್ಲೂಕಿನ ಮೂರು ಶಾಲೆಗಳ ಪೈಕಿ ಸರ್ಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಯು ಒಂದಾಗಿದೆ. ಆದರೆ ಶಾಲೆಯು ಯಾವುದೇ ರೀತಿಯಲ್ಲೂ ಅಭಿವೃದ್ಧಿಯ ಮುಖವನ್ನೇ ಕಂಡಿಲ್ಲ. ಶಾಲಾ ಕೊಠಡಿಗಳ ಹಿಂಭಾಗದ ಗೋಡೆಯ ಬಹುತೇಕ ಭಾಗದಲ್ಲಿ ಪ್ಲಾಸ್ಟಿಂಗ್ ಕುಸಿದುಬಿದ್ದಿದ್ದು ಒಳಗಿನ ಇಟ್ಟಿಗೆಗಳು ಕಾಣುತ್ತಿವೆ. ಜೊತೆಗೆ ಗೋಡೆಯು ಬಿರುಕು ಬಿಟ್ಟಿದ್ದು ಕುಸಿದುಬೀಳುವ ಹಂತದಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.