ADVERTISEMENT

ಮಾಲೂರು ಕ್ಷೇತ್ರದ ಮರು ಮತ ಎಣಿಕೆ ಪ್ರಕ್ರಿಯೆ: ನಂಜೇಗೌಡ ಖುಷಿ, ಮಂಜುನಾಥಗೌಡ ಬೇಸರ

ಭಾರಿ ಭದ್ರತೆಯಲ್ಲಿ ಮರು ಮತ ಎಣಿಕೆ: ಮುಚ್ಚಿದ ಲಕೋಟೆಯಲ್ಲಿ ಮಾಲೂರು ಕ್ಷೇತ್ರದ ಫಲಿತಾಂಶ ಭದ್ರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 6:48 IST
Last Updated 12 ನವೆಂಬರ್ 2025, 6:48 IST
ಕೆ.ವೈ.ನಂಜೇಗೌಡ
ಕೆ.ವೈ.ನಂಜೇಗೌಡ   

ಕೋಲಾರ: ಸತತವಾಗಿ 12 ಗಂಟೆಗೂ ಹೆಚ್ಚು ಹೊತ್ತು ಮರು ಮತ ಎಣಿಕೆ ಕೇಂದ್ರದಲ್ಲಿದ್ದು, ಹೊರಬಂದ ಮಾಲೂರು ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ನಗು ಬೀರಿದರೆ, ಪ್ರತಿಸ್ಪರ್ಧಿ ಹಾಗೂ ಬಿಜೆಪಿ ಮುಖಂಡ ಕೆ.ಎಸ್‌.ಮಂಜುನಾಥಗೌಡ ಬೇಸರ ವ್ಯಕ್ತಪಡಿಸಿದರು. ಮತ್ತೊಬ್ಬ ಪ್ರತಿಸ್ಪರ್ಧಿ ಹೂಡಿ ವಿಜಯಕುಮಾರ್‌ ಸಣ್ಣಪುಟ್ಟ ಬದಲಾವಣೆ ಅಷ್ಟೆ ಎಂದರು.

ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಪ್ರಕ್ರಿಯೆ ಭಾರಿ ಬಿಗಿ ಬಂದೋಬಸ್ತ್‌ನಲ್ಲಿ ಮಂಗಳವಾರ ಯಶಸ್ವಿಯಾಗಿ ನಡೆದಿದ್ದು, ಫಲಿತಾಂಶದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್‌ ಸೂಚನೆಯಂತೆ ಈ ಕ್ಷೇತ್ರದ ಮರು ಮತ ಎಣಿಕೆ‌ ನಡೆದಿದ್ದು, ಫಲಿತಾಂಶವು ಮುಚ್ಚಿದ ಲಕೋಟೆಯಲ್ಲಿ ಭದ್ರವಾಗಿದೆ.

ADVERTISEMENT

ರಾತ್ರಿ 8 ಗಂಟೆಗೆ ಸುಮಾರಿಗೆ ಎಣಿಕೆ ಕೇಂದ್ರದಿಂದ ಹೊರಬಂದ ‌ನಂಜೇಗೌಡ, ‘ಮರು ಮತ ಎಣಿಕೆಯಲ್ಲಿ ಯಾವುದೇ ವ್ಯತ್ಯಾಸ ಕಂಡಿಲ್ಲ. ‌ನಾವು ಅಂಬೇಡ್ಕರ್‌ ಸಂವಿಧಾನದಲ್ಲಿ ವಿಶ್ವಾಸವಿಟ್ಟಿದ್ದು, ನ್ಯಾಯ ದೊರಕಿದೆ ’ ಎಂದು ಖುಷಿ ವ್ಯಕ್ತಪಡಿಸಿದರು.

ಈ ಮೂಲಕ ಅವರ ಶಾಸಕ ಸ್ಥಾನ ಅಬಾಧಿತವಾಗಿದೆ ಎಂಬುದು ತಿಳಿದು ಬಂದಿದೆ. ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅವರು ‘ಸತ್ಯ ಮೇವ ಜಯತೇ’ ಎಂಬ ಬರಹ ಬರೆದುಕೊಂಡಿದ್ದಾರೆ.

‘ಮರು ಮತ ಎಣಿಕೆಯಲ್ಲೂ ನಂಜೇಗೌಡರು ಗೆದ್ದಿದ್ದಾರೆ’ ಎಂದು ಕಾಂಗ್ರೆಸ್‌ ಪಕ್ಷದ ಕೆಲ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂಭ್ರಮಿಸಿದ್ದಾರೆ.

ಫಲಿತಾಂಶದ ಬಗ್ಗೆ ತಕರಾರರು ಅರ್ಜಿ ಸಲ್ಲಿಸಿದ್ದ ಮಂಜುನಾಥಗೌಡ ಮರು ಮತ ಎಣಿಕೆ ಬಗ್ಗೆ ಆಕ್ಷೇಪ ಹಾಗೂ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದರು.

ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮಾರ್‌ ಪ್ರತಿಕ್ರಿಯಿಸಿ, ‘ಎಣಿಕೆ ಸುಸೂತ್ರವಾಗಿ ನಡೆದಿದ್ದು, ಸಣ್ಣಪುಟ್ಟ ಬದಲಾವಣೆ ಆಗಿದೆ ಅಷ್ಟೆ. ಆದರೆ, ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಫಲಿತಾಂಶದ ಬಗ್ಗೆ ಮಾತನಾಡುವಂತಿಲ್ಲ’ ಎಂದು ಹೇಳಿದರು.

ಅಭ್ಯರ್ಥಿ, ಏಜೆಂಟರು ಭಾಗಿ: ನಗರ ಹೊರವಲಯದ ಟಮಕದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಏಜೆಂಟರು ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ‌ಆರಂಭವಾಯಿತು.

ನಾಲ್ಕು ಟೇಬಲ್‌ಗಳಲ್ಲಿ ಅಂಚೆ ಮತ ಎಣಿಕೆ ಹಾಗೂ 14 ಟೇಬಲ್‌ಗಳಲ್ಲಿ ಇವಿಎಂ ಮತಗಳ ಎಣಿಕೆ ನಡೆಯಿತು. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಆರ್‌.ರವಿ, ಕ್ಷೇತ್ರದ ಮರು ಮತ ಎಣಿಕೆ ಚುನಾವಣಾಧಿಕಾರಿ (ಆರ್‌ಒ) ಡಾ.ಮೈತ್ರಿ ಹಾಗೂ ಕೇಂದ್ರದಿಂದ ಬಂದಿದ್ದ ಮತ ಎಣಿಕೆ ವೀಕ್ಷಕ ಪ್ರಭು ನಾರಾಯಣಸಿಂಗ್‌ ನೇತೃತ್ವದಲ್ಲಿ ನಡೆದಿದೆ. ಎಣಿಕೆ ಮಾಹಿತಿ ಸ್ವಲ್ಪವೂ ಸೋರಿಕೆಯಾಗದಂತೆ ಜಾಗೃತಿ‌ ವಹಿಸಿದ್ದರು. ಪ್ರವೇಶ ದ್ವಾರದಲ್ಲಿಯೇ ಏಜೆಂಟರು, ಸಿಬ್ಬಂದಿ ಹಾಗೂ ಇತರರ ಮೊಬೈಲ್‌ ಕಸಿದುಕೊಳ್ಳಲಾಯಿತು. ಕೇಂದ್ರದ ಸುತ್ತ ಸಂಭ್ರಮಾಚರಣೆಗೂ ನಿಷೇಧಾಜ್ಞೆ ವಿಧಿಸಲಾಗಿತ್ತು.

ನಂಜೇಗೌಡ, ಪ್ರತಿಸ್ಪರ್ಧಿಗಳಾದ ಕೆ.ಎಸ್.ಮಂಜುನಾಥ ಗೌಡ, ಹೂಡಿ ವಿಜಯಕುಮಾರ್ ಸೇರಿದಂತೆ ಹಲವರು ಎಣಿಕೆ ಕೇಂದ್ರದಲ್ಲಿ ಇದ್ದರು.

ಪ್ರತಿ ಸುತ್ತಿನ ಮತ ಎಣಿಕೆಯನ್ನು ತೂಗಿನೋಡಿ ಪದೇಪದೇ ಪರಿಶೀಲನೆ ನಡೆಸಿ ಎಣಿಕೆ ಮಾಡಿದ್ದರಿಂದ ವಿಳಂಬವಾಗಿರುವುದು ತಿಳಿದುಬಂದಿದೆ. ಪ್ರತಿಸ್ಪರ್ಧಿಗಳು ವಿವಿ‌ ಪ್ಯಾಟ್ ತಾಳೆ‌ ಮಾಡಲು‌ ಮನವಿ ಸಲ್ಲಿಸಿದ್ದರಿಂದ ಎಣಿಕೆ ಪ್ರಕ್ರಿಯೆ ಮತ್ತಷ್ಟು ಸಮಯ ಹಿಡಿಯಿತು. ಕೆಲ ವಿವಿ ಪ್ಯಾಟ್‌ ಚೀಟಿ ತಾಳೆ ಮಾಡಿ ನೋಡಿದರು ಎಂಬುದು ಗೊತ್ತಾಗಿದೆ. ಇವಿಎಂ ಮತಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎನ್ನಲಾಗಿದೆ. ಆದರೆ, ಅಂಚೆ ಮತಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂಬುದರ ಬಗ್ಗೆ ಅಭ್ಯರ್ಥಿಗಳು ಹೇಳಿಕೊಂಡಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ನಂಜೇಗೌಡ ಕೇವಲ 248 ಮತಗಳಿಂದ ಗೆಲುವು ಸಾಧಿಸಿದ್ದರು. ಅವರು 50,955 ಮತ ಪಡೆದರೆ, ಪ್ರತಿಸ್ಪರ್ಧಿ ಮಂಜುನಾಥಗೌಡ 50,707 ಮತ ಗಳಿಸಿದ್ದರು. ನಂತರ ಮಂಜುನಾಥಗೌಡ ನ್ಯಾಯಾಲಯದಲ್ಲಿ ತಕರಾರರು ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್‌ ಸೂಚನೆಯಂತೆ ಮರು ಮತ ಎಣಿಕೆ ನಡೆದಿದೆ. ನ.24ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಕೆ.ಎಸ್‌.ಮಂಜುನಾಥಗೌಡ
ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ರವಾನೆ
ಮರು ಮತ ಎಣಿಕೆ‌ಯ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ರವಾನಿಸಲಾಗುತ್ತದೆ. ಸಾರ್ವಜನಿಕವಾಗಿ ಫಲಿತಾಂಶ ಪ್ರಕಟಿಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಈಗಾಗಲೇ ನಿರ್ದೇಶನ ನೀಡಿದೆ. ಹೀಗಾಗಿ ಚುನಾವಣಾಧಿಕಾರಿಯು ಫಲಿತಾಂಶ ಪ್ರಕಟಿಸಿಲ್ಲ.
ಕೋಲಾರದಲ್ಲಿ ಮಂಗಳವಾರ ನಡೆದ ಮಾಲೂರು ಕ್ಷೇತ್ರದ ಮರು ಮತ ಎಣಿಕೆ ವೇಳೆ ಪೊಲೀಸರ ಕಾವಲು
ಕೋಲಾರದ ಟಮಕ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್‌ ರಸ್ತೆಯಲ್ಲಿ ಚಲನವಲನಕ್ಕೆ ನಿರ್ಬಂಧ ವಿಧಿಸಿದ್ದ ಪೊಲೀಸರು
ಬಿಗಿ ಭದ್ರತೆಯಲ್ಲಿ ಮರು ಮತ ಎಣಿಕೆ
ಮರು ಮತ ಎಣಿಕೆಗೆ ಹಿಂದೆಂದೂ‌ ಕಾಣದಷ್ಟು ಭದ್ರತೆ ಒದಗಿಸಲಾಗಿತ್ತು. ಎಣಿಕೆ ಕೇಂದ್ರ ತೋಟಗಾರಿಕೆ ಮಹಾವಿದ್ಯಾಲಯದಿಂದ 1 ಕಿ.ಮೀ ವರೆಗೆ ನಿಷೇಧಾಜ್ಞೆ ವಿಧಿಸಲಾಗಿತ್ತು. ಈ ವ್ಯಾಪ್ತಿಯಲ್ಲಿ ಸಂಭ್ರಮಾಚರಣೆ ಪಟಾಕಿ ಸಿಡಿಸಲು ನಿರ್ಬಂಧ ಹೇರಲಾಗಿತ್ತು. 5 ಕಿ.ಮೀ ವ್ಯಾಪ್ತಿಯಲ್ಲಿನ ಮದ್ಯದಂಗಡಿಗಳ ಬಾಗಿಲು ಮುಚ್ಚಿಸಲಾಗಿತ್ತು. ಪೊಲೀಸರು ಬೆಂಗಳೂರು-ತಿರುಪತಿ ಹೆದ್ದಾರಿಯ ಸರ್ವಿಸ್‌ ರಸ್ತೆಯ ಉದ್ದಕ್ಕೂ ‌ಬ್ಯಾರಿಕೇಡ್ ಹಾಕಿ ವಾಹನ ತಡೆದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್ ಜಗದೀಶ್ ‌ ಡಿವೈಎಸ್ಪಿಗಳಾದ ಎಂ.ಎಚ್.ನಾಗ್ತೆ ಮನಿಷಾ ಸರ್ಕಲ್ ಇನ್ ಸ್ಪೆಕ್ಟರ್ ಗಳು ವಿವಿಧ ಠಾಣೆಗಳ ಇನ್ ಸ್ಪೆಕ್ಟರ್ ಗಳು‌ ಪಿಎಸ್ಐಗಳು ಭದ್ರತೆ ಒದಗಿಸಿದ್ದರು.
ಮತ ಎಣಿಕೆ ಕೇಂದ್ರದ ಸಮೀಪ ಸೇರಿದ್ದ ಮುಖಂಡರು ಕಾರ್ಯಕರ್ತರು
ಎಣಿಕೆ ಕೇಂದ್ರಕ್ಕೆ ಮಾಧ್ಯಮದವರಿಗೆ ನಿರ್ಬಂಧ
ಮತ ಎಣಿಕೆ ಕೇಂದ್ರಕ್ಕೆ ಮಾಧ್ಯಮದವರನ್ನು ನಿರ್ಬಂಧಿಸಲಾಗಿತ್ತು‌. ಕೇಂದ್ರದ ಪ್ರಮುಖ ದ್ವಾರದಲ್ಲಿಯೇ ತಡೆಯಲಾಯಿತು. ಫಲಿತಾಂಶ ಬಹಿರಂಗಪಡಿಸದೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿರುವುದರಿಂದ ಈ ಕ್ರಮ ವಹಿಸಿರುವುದು ಗೊತ್ತಾಗಿದೆ‌. 'ಎಣಿಕಾ ಕೇಂದ್ರಕ್ಕೆ ಮಾಧ್ಯಮ ಸ್ನೇಹಿತರನ್ನು ಅನುಮತಿಸುವ ಸಂಬಂಧ ಸತತ ಪ್ರಯತ್ನದ ಹೊರತಾಗಿಯೂ ನವದೆಹಲಿ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮಾಧ್ಯಮ ಚಟುವಟಿಕೆಗಳನ್ನು ಎಣಿಕೆ ಕೇಂದ್ರದಲ್ಲಿ ನಿರ್ಬಂಧಿಸಲಾಗಿದೆ ಎಂಬುದಾಗಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿರುತ್ತಾರೆ' ಎಂದು ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ. ಹೀಗಾಗಿ ಮಾಧ್ಯಮದವರು ರಾಷ್ಟ್ರೀಯ ಹೆದ್ದಾರಿ ಬದಿ ಕೂರಬೇಕಾಯಿತು.
ಮತ ಎಣಿಕೆ ಕೇಂದ್ರದ ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ಏಜೆಂಟರ ಮೊಬೈಲ್‌ ಪಡೆದು ಒಳಗೆ ಕಳಿಸಿದ ಪೊಲೀಸರು
ಹೆದ್ದಾರಿ ಉದ್ದಕ್ಕೂ ಜನಸಾಗರ
ಮತ ಎಣಿಕೆ ಆರಂಭವಾದಾಗ ಟಮಕದಲ್ಲಿ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಜನಸಾಗರವೇ ಸೇರಿತ್ತು‌. ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಕಾರ್ಯಕರ್ತರು ಜಮಾಯಿಸಿದ್ದರು. ಪೊಲೀಸರು ಬ್ಯಾರಿಕೇಡ್ ಅಡ್ಡಹಾಕಿ ತಡೆದು ಚದುರಿಸಲು ಪ್ರಯತ್ನಿಸಿದರು. ನಿಷೇಧಾಜ್ಞೆ ಜಾರಿಯಲ್ಲಿರುವುದಾಗಿ ಎಚ್ಚರಿಸಿದರು. ಮಧ್ಯಾಹ್ನದೊಳಗೆ‌ ಎಣಿಕೆ ‌ಕಾರ್ಯ‌ ಮುಗಿಯಬಹುದೆಂದ ಭಾವಿಸಿದ್ದರು. ‌ಆದರೆ ಸಂಜೆಯಾದರೂ ಮುಗಿಯುವ ಲಕ್ಷಣ‌ ಕಾಣದ ಕಾರಣ ನಿಧಾನವಾಗಿ‌ ಸ್ಥಳದಿಂದ ಕಾಲ್ಕಿತ್ತರು.
ಮತ ಎಣಿಕೆ ಕೇಂದ್ರದ ಬಳಿ ಸೇರಿದ್ದ ಜನರನ್ನು ಚದುರಿಸಿದ ಪೊಲೀಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.