ADVERTISEMENT

ಹಳ್ಳಿ ಸಂತೆ ಆರಂಭಕ್ಕೆ ಕೂಡಿಬಾರದ ಕಾಲ

ತಾಲ್ಲೂಕಿನ ಏಕೈಕ ಹಳ್ಳಿ ಸಂತೆ l ಅನೈತಿಕ ಚಟುವಟಿಕೆಗಳ ತಾಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 3:59 IST
Last Updated 20 ಸೆಪ್ಟೆಂಬರ್ 2022, 3:59 IST
ಹೆಬ್ಬಣಿ ಗ್ರಾಮದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ರೈತ ಬಜಾರ್ ಕಟ್ಟಡ
ಹೆಬ್ಬಣಿ ಗ್ರಾಮದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ರೈತ ಬಜಾರ್ ಕಟ್ಟಡ   

ನಂಗಲಿ( ಮುಳಬಾಗಿಲು): ಗ್ರಾಮೀಣ ಭಾಗದ ಜನರಿಗೆ ಒಂದೇ ಸೂರಿನಡಿಯಲ್ಲಿ ಎಲ್ಲ ಸಾಮಗ್ರಿ ದೊರಯಬೇಕೆಂದು ಎಂದು ನಾಲ್ಕು ವರ್ಷಗಳ ಹಿಂದೆ ಹೆಬ್ಬಣಿಯಲ್ಲಿ ನಿರ್ಮಾಣವಾಗಿರುವ ತಾಲ್ಲೂಕಿನ ಏಕೈಕ ಹಳ್ಳಿ ಸಂತೆ ಕಟ್ಟಡ ಇದುವರೆಗೆ ಉದ್ಘಾಟನೆಯಾಗದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಹೆಬ್ಬಣಿ ಗ್ರಾಮದಲ್ಲಿ 2018-19ರಲ್ಲಿ ಅಂದಿನ ಗ್ರಾಮೀಣ ಅಭಿವೃದ್ದಿ ಸಚಿವ ಎಚ್.ಕೆ. ಪಾಟೀಲ್ ಅವರು ಹಳ್ಳಿ ಸಂತೆಗೆ ಕಟ್ಟಡ ಮಂಜೂರು ಮಾಡಿದ್ದರು. ಸುಮಾರು ₹10 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾಗಿ ರೈತ ಬಜಾರ್ ಅಥವಾ ಹಳ್ಳಿ ಸಂತೆ ಕಟ್ಟಡ ನಿರ್ಮಾಣವಾಯಿತು. ಆದರೆ ಇನ್ನೂ ಉದ್ಘಾಟನೆ ಆಗದೆ ಇರುವುದು ಕುಡುಕರು ಮತ್ತು ಪೋಲಿಗಳ ಅಡ್ಡೆಯಾಗಿದೆ. ಸರ್ಕಾರದ ಲಕ್ಷಾಂತರ ಹಣ ಖರ್ಚು ಮಾಡಿ ಕಟ್ಟಿಸಿದ ಕಟ್ಟಡದ ಒಳಾಂಗಣ ರಾಶಿಗಟ್ಟಲೆ ಖಾಲಿ ಮದ್ಯದ ಬಾಟಲಿ, ಪ್ಲಾಸ್ಟಿಕ್ ಹಾಗೂ ಹಾಗೂ ತ್ಯಾಜ್ಯ ಸುರಿಯಲಾಗಿತ್ತಿದ್ದು ತಿಪ್ಪೆಗುಂಡಿಯಂತಾಗಿದೆ.

2018-19ರಲ್ಲಿ ರಾಜ್ಯ ಸರ್ಕಾರ ಹಳ್ಳಿ ಪ್ರದೇಶಗಳಲ್ಲಿ ನಡೆಯುವ ರೈತ ಬಜಾರ್ ಅಥವಾ ಹಳ್ಳಿ ಸಂತೆಯಲ್ಲಿ ಒಂದೇ ಸೂರಿನ ಅಡಿಯಲ್ಲಿ ಜನ ಬಳಕೆಯ ವಸ್ತುಗಳು ಸಿಗಬೇಕು ಮತ್ತು ಗ್ರಾಮೀಣ ಪ್ರದೇಶಗಳೂ ಅಭಿವೃದ್ದಿಯಾಗಬೇಕು ಎಂದು ರಾಜ್ಯ ಸರ್ಕಾರ ಜಿಲ್ಲಾ ಪರಿಷತ್ ಮೂಲಕ ಟೆಂಡರ್ ಕರೆದು ಗುತ್ತಿಗೆದಾರರಿಂದ ಕಟ್ಟಡ ಕಟ್ಟಿಸಿ 2020ರಲ್ಲಿ ಹೆಬ್ಬಣಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ. ಆದರೆ ಪಂಚಾಯಿತಿ ಅಧಿಕಾರಿಗಳು ಕಟ್ಟಡ ಉದ್ಘಾಟನೆ ಮಾಡಿ ಸಾರ್ವಜನಿಕರಿಗೆ ಸೇವೆ ಮುಕ್ತಗೊಳಿಸದೇ ಇರುವುದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ರೈತ ಬಜಾರ್ ಕೇಂದ್ರ ಉದ್ಘಾಟನೆಯಾಗದ ಕಾರಣ ಕಟ್ಟಡದ ಸುತ್ತಲೂ ಗಿಡಗಂಟೆಗಳು ಬೆಳೆದು ಕಟ್ಟಡವೇ ಮುಚ್ಚಿ ಹೋದಂತಿದೆ. ಬೈರಕೂರು ಮತ್ತು ಹೆಬ್ಬಣಿ ಮಾರ್ಗವಾಗಿ ಆಂದ್ರಪ್ರದೇಶದ ಪುಂಗನೂರು, ಮದನಪಲ್ಲಿ, ಬೋಯಕೊಂಡ ಮುಂತಾದ ಪ್ರದೇಶಗಳಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ರೈತ ಬಜಾರ್ ಇದ್ದರೂ ಮತ್ತು ಪ್ರತಿನಿತ್ಯ ಸರ್ಕಾರದ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ರೈತ ಬಜಾರನ್ನು ಕಂಡೂ ಕಾಣದಂತೆ ಕಣ್ಣಿದ್ದು ಕರುಡರಂತೆ ವರ್ತಿಸುತ್ತಿದ್ದಾರೆ.

ಮೂಲ ಸೌಕರ್ಯ ಕೊರತೆ

ರೈತ ಬಜಾರ್ ಕೇಂದ್ರವನ್ನು ಸುಸಜ್ಜಿತವಾಗಿ ನಿರ್ಮಿಸಿ ಸುಮಾರು 50 ಮಳಿಗೆಗಳನ್ನು ನಿರ್ಮಿಸಿದ್ದರೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಿಲ್ಲ. ತಡೆಗೋಡೆ, ವಿದ್ಯುತ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮುಂತಾದ ಸೌಲಭ್ಯ ಇಲ್ಲದೆ ಇಲ್ಲದೆ ಕಟ್ಟಡ ಅನಾಥವಾಗಿದೆ.

ರಸ್ತೆಬದಿ ವಾರದ ಸಂತೆ: ವಾಹನ ದಟ್ಟಣೆ

ಹೆಬ್ಬಣಿ ಗ್ರಾಮದ ಮುಖ್ಯ ರಸ್ತೆಯ ಎರಡೂ ಬದಿಗಳ ಪಾದಚಾರಿ ರಸ್ತೆಯಲ್ಲಿ ತರಕಾರಿ, ಹಣ್ಣು ಹಂಪಲು ಮುಂತಾದ ಅಂಗಡಿಗಳನ್ನು ಇಟ್ಟಿದ್ದಾರೆ. ವಾರದ ಸಂತೆಯೂ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ನಡೆಯುತ್ತದೆ. ಇದರಿಂದ ಟ್ರಾಫಿಕ್ ಸಮಸ್ಯೆ ಆಗುತ್ತಿದೆ. ಇಲ್ಲಿನ ಅಂಗಡಿಗಳನ್ನು ರೈತ ಬಜಾರ್ ಕೇಂದ್ರಕ್ಕೆ ವರ್ಗಾವಣೆ ಮಾಡಿದರೆ ವಾಹನ ದಟ್ಟಣೆ ಸಮಸ್ಯೆ ಬಗೆಹರಿಯತ್ತದೆ. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ನಿರಾಸಕ್ತಿವಹಿಸಿದ್ದಾರೆ ಎನ್ನುತ್ತಾರೆ ಎಂದು ಸ್ಥಳಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.