ADVERTISEMENT

ಕೋಲಾರ: ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆ

ಪೂರ್ಣಕುಂಭ, ಕೇರಳ ಚಂಡೆಯ ಸ್ವಾಗತ; ನಗರದಲ್ಲಿ ಸಂಚಾರ, ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 7:57 IST
Last Updated 14 ಆಗಸ್ಟ್ 2025, 7:57 IST
ಕೋಲಾರ ನಗರದಲ್ಲಿ ಬುಧವಾರ ಸಾಗಿದ ಶ್ರೀಸತ್ಯ ಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆ
ಕೋಲಾರ ನಗರದಲ್ಲಿ ಬುಧವಾರ ಸಾಗಿದ ಶ್ರೀಸತ್ಯ ಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆ   

ಕೋಲಾರ: ಭಗವಾನ್ ಶ್ರೀಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಕೋಲಾರಕ್ಕೆ ಬಂದಿರುವ ಶ್ರೀಸತ್ಯ ಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಯನ್ನು ಬುಧವಾರ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಕೋಲಾರ ಜಿಲ್ಲೆಗೆ ಬಂದ ರಥವನ್ನು ಚಿಂತಾಮಣಿ ರಸ್ತೆಯ ಪವರ್ ಗ್ರಿಡ್ ಮುಂಭಾಗದಲ್ಲಿ ಸ್ವಾಗತಿಸಿ ನಗರಕ್ಕೆ ಕರೆತರಲಾಯಿತು. ಬಳಿಕ ವಾಲ್ಮೀಕಿ ವೃತ್ತದಿಂದ (ಕಾಲೇಜು ಸರ್ಕಲ್) ಪೂರ್ಣಕುಂಭ, ಕಳಸ, ವೇದಘೋಷ, ಮಂಗಳ ದ್ರವ್ಯಧಾರಕರು, ಮಂಗಳವಾದ್ಯ, ಕಲಾಮೇಳ, ಕೇರಳ ಚಂಡೆ, ಬ್ಯಾಂಡ್ ಸೆಟ್‍, ಭಜನೆಯೊಂದಿಗೆ ಎಂ.ಜಿ ರಸ್ತೆ ಮೂಲಕ ಎಸ್‌ಎನ್‌ಆರ್‌ ಆಸ್ಪತ್ರೆ ಮುಂಭಾಗದ ಶ್ರೀಸತ್ಯ ಸಾಯಿ ಸೇವಾ ಕ್ಷೇತ್ರದವರೆಗೆ ರಥದ ಮೆರವಣಿಗೆ ನಡೆಯಿತು.

ಕಾಲೇಜು ವೃತ್ತದಿಂದಲೂ ನೂರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಬಾಬಾ ಸ್ಮರಣೆಯಲ್ಲಿ ತೊಡಗಿದ್ದರು. ಬಳಿಕ ಸಾಯಿಬಾಬಾ ಮಂದಿರದ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ಬಾಬಾ ಪಾದುಕಾ ದರ್ಶನ ಪಡೆದರು.

ADVERTISEMENT

ಸಂಜೆ ಸಭಾ ಕಾರ್ಯಕ್ರಮ ನಡೆಯಿತು. ವೇದ ಘೋಷ, ಬಾಲವಿಕಾಸ ಮಕ್ಕಳಿಂದ ಭರತನಾಟ್ಯ, ವಿಷ್ಣು, ಲಲಿತಾ ಸಹಸ್ರನಾಮ, ಸ್ವಾಮಿಯ ಸಂದೇಶ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಶ್ರೀಸತ್ಯ ಸಾಯಿ ವಿಪತ್ತು ನಿರ್ವಹಣಾ ತಂಡದ ರಾಜ್ಯ ಉಸ್ತುವಾರಿ ರಾಜ್‍ಕುಮಾರ್, ಶ್ರೀಸತ್ಯ ಸಾಯಿ ಸೇವಾ ಆರ್ಗನೈಜೇಶನ್ ಜಿಲ್ಲಾ ಯುವ ಸಂಯೋಜಕ ಜಿ.ಪಿ.ಕಮಲಾಕ್ಷ, ರಥ ಮೇಲ್ವಿಚಾರಕರಾದ ಆರ್.ಶಶಿಕುಮಾರ್, ಎಚ್.ಎಂ.ಗೀತಾ, ಸಂಚಾಲಕ ಅಮರ ನಾರಾಯಣ, ಸೇವಾ ವಿಭಾಗದ ಸಂಯೋಜಕಿ ಮಂಜುಳಾ ಇದ್ದರು.

ರಥ ಇಂದು ಕೆಜಿಎಫ್‍ಗೆ: ರಥಯಾತ್ರೆಯು ಗುರುವಾರ ಕೆಜಿಎಫ್ ನಗರಕ್ಕೆ ಸಂಚರಿಸಲಿದೆ. ಬೆಳಿಗ್ಗೆ 5.30ಕ್ಕೆ ಓಂಕಾರ ಸುಪ್ರಭಾತ, ನಗರ ಸಂಕೀರ್ತನೆ, ನಂತರ ರುದ್ರಾಭಿಷೇಕ, ಪಾದುಕಾಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. ಕೆಜಿಎಫ್ ಮುಗಿದ ಬಳಿಕ ಆ.15ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ ರಥವನ್ನು ಬೀಳ್ಕೊಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.