ಕೋಲಾರ: ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಸೇರಬೇಕೆಂದು ರಾಜ್ಯ ಸರ್ಕಾರ ಜಾರಿ ಮಾಡಿರುವ ಎಸ್‌ಸಿಎಸ್‌ಪಿ, ಟಿಎಸ್‌ಪಿ-2013 ರ ಕಾಯ್ದೆಯನ್ನು ಸಮರ್ಪಕ ಜಾರಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಕೃಷ್ಣಪ್ಪ ಸ್ಥಾಪಿತ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತ ಭವನ ಮುಂದೆ ಪ್ರತಿಭಟನೆ ನಡೆಸಿದರು.
ಪರಿಶಿಷ್ಟರ ಹಣ ಪರಿಶಿಷ್ಟರಿಗಾಗಿ ಮಾತ್ರ ಎನ್ನುವ ಘೋಷಣೆ ಕೂಗಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಪ್ರತಿಭಟನೆ ಉದ್ದೇಶಿಸಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ‘ರಾಜ್ಯ ಸರ್ಕಾರ ಕಲಂ 7ಸಿ ರದ್ದುಪಡಿಸಿ ವಿವಿಧ ಇಲಾಖೆಗಳ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟರ ಅನುದಾನ ಬಳಸುವುದನ್ನು ತಕ್ಷಣ ತಡೆ ಹಿಡಿಯಬೇಕು’ ಎಂದು ಒತ್ತಾಯಿಸಿದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ-2013 ರ ಕಾಯ್ದೆಯನ್ನು ಪರಿಶಿಷ್ಟರು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಅವಕಾಶಗಳನ್ನು ಶಾಸನಬದ್ದವಾಗಿ ಹೊಂದಲು ರಾಜ್ಯ ಸರ್ಕಾರ ರೂಪಿಸಿದೆ. ಈ ಕಾಯ್ದೆಯ ಕಲಂ 73 ಮತ್ತು 7ಸಿ ರಲ್ಲಿ ಕಾಯ್ದೆಯಡಿ ನಿಗದಿಪಡಿಸಿದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡು ಪರಿಶಿಷ್ಟರನ್ನು ಸರ್ಕಾರ ವಂಚಿಸುತ್ತಿದೆ ಎಂದು ದೂರಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ ಮಾತನಾಡಿ, ‘ಅನ್ಯ ಕಾರ್ಯಗಳಿಗೆ ಬಳಸಿರುವ ಹಣವನ್ನು ವಾಪಸ್ ಪಡೆದು ಪರಿಶಿಷ್ಟ ಅಭಿವೃದ್ಧಿಗಾಗಿ ಉಪಯೋಗಿಸಬೇಕು. 38 ಇಲಾಖೆಗಳಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಕಾಲಕಾಲಕ್ಕೆ ತುಂಬಬೇಕು. ಪರಿಶಿಷ್ಟರ ಅನುದಾನವನ್ನು ಬಳಕೆ ಮಾಡದೆ ಸರ್ಕಾರಕ್ಕೆ ವಾಪಸ್ ಕಳುಹಿಸುವ ಮತ್ತು ಅನ್ಯಕಾರ್ಯಗಳಿಗೆ ಬಳಸುವ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಮುಖ್ಯಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಅಗ್ರಹಿಸಿದರು.
ಸಂಘಟನೆ ತಾಲ್ಲೂಕು ಸಂಚಾಲಕ ಎಸ್.ಎಂ.ವೆಂಕಟೇಶ್ ಮಾತನಾಡಿ, 2023 ರ ಚುನಾವಣೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ದಲಿತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಒಳಮೀಸಲಾತಿ ಹೋರಾಟಗಾರರು ಕಾಂಗ್ರೆಸ್ ಬೆಂಬಲಿಸಿದ ಕಾರಣ ಸರ್ಕಾರ ರಚನೆಯಾಗಿರುವುದನ್ನು ಮರೆಯಬಾರದು ಎಂದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಚವ್ವೇನಹಳ್ಳಿ ವಿಜಿ, ಮದನಳ್ಳಿ ವೆಂಕಟೇಶ್, ಮುನಿಚೌಡಪ್ಪ, ಸಂಪತ್ ಕುಮಾರ್, ಗೋವಿಂದರಾಜು, ಗನ್ ವೆಂಕಟರಮಣಪ್ಪ, ಮುದುವತ್ತಿ ಕೇಶವ, ಕೂಸಂದ್ರ ರೆಡ್ಡಪ್ಪ, ದೇಶಿಹಳ್ಳಿ ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.