ADVERTISEMENT

ಕೋಲಾರ | ಶಾರ್ಟ್‌ ಸರ್ಕಿಟ್‌: ಬಟ್ಟೆ ಮಳಿಗೆ ಭಸ್ಮ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 7:39 IST
Last Updated 21 ಸೆಪ್ಟೆಂಬರ್ 2025, 7:39 IST
ಕೋಲಾರ ನಗರದ ಬ್ರ್ಯಾಂಡೆಡ್‌ ಫ್ಯಾಕ್ಟರಿ ಬಟ್ಟೆ ಮಳಿಗೆ ಶನಿವಾರ ಸುಟ್ಟು ಭಸ್ಮವಾಗಿರುವುದು
ಕೋಲಾರ ನಗರದ ಬ್ರ್ಯಾಂಡೆಡ್‌ ಫ್ಯಾಕ್ಟರಿ ಬಟ್ಟೆ ಮಳಿಗೆ ಶನಿವಾರ ಸುಟ್ಟು ಭಸ್ಮವಾಗಿರುವುದು   

ಕೋಲಾರ: ಶಾರ್ಟ್‌ ಸರ್ಕಿಟ್‌ನಿಂದ ನಗರದ ಎಂ.ಜಿ.ರಸ್ತೆಯ ಬಳಿಯ ಬ್ರ್ಯಾಂಡೆಡ್‌ ಫ್ಯಾಕ್ಟರಿ ಬಟ್ಟೆ ಮಳಿಗೆ ಶನಿವಾರ ಬೆಂಕಿಗಾಹುತಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ.

ಮಳಿಗೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿವೆ. ಮಳಿಗೆಯೊಳಗಿದ್ದ ಎಲ್ಲರೂ ಹೊರಗಡೆ ಓಡಿ ಬಂದಿದ್ದು, ಪ್ರಾಣಕ್ಕೆ ಯಾವುದೇ ಅಪಾಯ ಆಗಿಲ್ಲ

ಮಳಿಗೆಯಲ್ಲಿದ್ದ ₹25 ಲಕ್ಷಕ್ಕೂ ಅಧಿಕ ಮೌಲ್ಯದ ಬಟ್ಟೆಗಳು ಹಾಗೂ ಕೆಲ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ವಾಹನದಲ್ಲಿ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆಗಿಳಿದರು. ಆ ವೇಳೆಗಾಗಲೇ ಬೆಂಕಿಯು ತೀವ್ರತರವಾಗಿ ಉರಿದಿದ್ದು, ನಂದಿಸಲು ಹರಸಾಹಸ ಪಡಬೇಕಾಯಿತು. 

ADVERTISEMENT

ಅರ್ಧ ಗಂಟೆಗೂ ಹೆಚ್ಚು ಹೊತ್ತು ಹೊತ್ತಿ ಉರಿಯಿತು. ನೋಡನೋಡುತ್ತಿದ್ದಂತೆಯೇ ಅಗ್ನಿಯ ಜ್ವಾಲೆ ಆವರಿಸಿಕೊಂಡಿದೆ. ಬೆಂಕಿಯ ಕೆನ್ನಾಲಿ ಪಕ್ಕದ ಕಟ್ಟಡಗಳಿಗೂ ಆವರಿಸುವ ಮೂಲಕ ಆತಂಕ ತಂದೊಡ್ಡಿತು. ಹೊಗೆ ಇಡೀ ಪ್ರದೇಶ ಆವರಿಸಿಕೊಂಡಿತು. ಕೋಲಾರ ನಗರ ಪೊಲೀಸರು ಪರಿಶೀಲನೆ ನಡೆಸಿದರು. ಸುತ್ತಮುತ್ತ ಸೇರಿದ್ದ ಜನರನ್ನು ಚದುರಿಸಿದರು.

‘ಮ್ಯಾನೇಜರ್‌ಗೆ ಏನೋ ಶಬ್ದ ಬಂದಿದ್ದು, ತಕ್ಷಣವೇ ವಿದ್ಯುತ್‌ ಸ್ವಿಚ್‌ ಆಫ್‌ ಮಾಡಿದ್ದಾರೆ. ಅವರು ಆಚೆಗೆ ಬರುವಷ್ಟರಲ್ಲಿ ಸ್ಫೋಟದ ಶಬ್ದ ಬಂದು ಬೆಂಕಿ ಹೊತ್ತುಕೊಂಡಿದೆ. ಬಟ್ಟೆ, ಯುಪಿಎಸ್‌, ಬ್ಯಾಟರಿ, ಟ್ರಯಲ್‌ ರೂಂ ಸುಟ್ಟು ಹೋಗಿವೆ’ ಎಂದು ಮಳಿಗೆ ಸಿಬ್ಬಂದಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

‘ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಸಂಪೂರ್ಣ ಭಸ್ಮವಾಗಿದೆ. ಮಳಿಗೆಯೊಳಗಿದ್ದ ಎಲ್ಲರೂ ಹೊರಗಡೆ ಬಂದಿದ್ದು, ಯಾರಿಗೂ ತೊಂದರೆ ಆಗಿಲ್ಲ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.